ಡೀಸೆಲ್ ದರ ಏರಿಕೆಯಿಂದ ರೈಲ್ವೆಗೂ ಭಾರೀ ನಷ್ಟ

ಹಿರಿಯ ರೈಲ್ವೆ ಅಧಿಕಾರಿಯೊಬ್ಬರ ಪ್ರಕಾರ ಇಲಾಖೆ ಪ್ರತಿ ವರ್ಷ 2.3 ಬಿಲಿಯನ್ ಲೀಟರ್ ಗಳಷ್ಟು ಡೀಸೆಲ್ ಖರೀದಿಸುತಿದ್ದು ಏರಿಕೆಯಿಂದ ಇಲಾಖೆ ಇಂಧನಕ್ಕಾಗಿ ಮಾಡುವ ವೆಚ್ಚದಲ್ಲಿ ಶೇ. 10ರಷ್ಟು ಏರಿಕೆ ಆಗಲಿದೆ. ಪ್ರಸ್ತುತ ರೈಲ್ವೆ ಇಲಾಖೆ ವಾಷಿಕ 4500 ಕೋಟಿ ರುಪಾಯಿ ಇಂಧನ ಖರೀದಿಸುತ್ತಿದೆ. ಶೇ. 51ರಷ್ಟು ಪ್ರಯಾಣಿಕರ ರೈಲು ಹಾಗೂ ಶೇ.37ರಷ್ಟು ಸರಕು ರೈಲುಗಳಿಗೆ ಡೀಸೆಲ್ ನ್ನು ಬಳಸಲಾಗುತ್ತಿದೆ.
ಸರ್ಕಾರ ಸರಕು ಸಾಗಾಟದ ಮೇಲೆ ಶೇ.10ರಷ್ಟು ಸೇವಾ ತೆರಿಗೆ ವಿಧಿಸಿದ್ದು, ಇದೀಗ ಡೀಸೆಲ್ ದರವನ್ನೂ ಏರಿಸಿರುವದರಿಂದ ಇಲಾಖೆಗೆ ಮತ್ತಷ್ಟು ಹೊರೆಯಾಗಿದೆ. ಆದರೆ ಕಲ್ಲಿದ್ದಲು, ಸಿಮೆಂಟ್ ಹಾಗೂ ಉಕ್ಕು ದರ ಏರಲಿರುವ ಹಿನ್ನೆಲೆಯಲ್ಲಿ ಸೇವಾ ತೆರಿಗೆ ಜಾರಿಯನ್ನು ಜುಲೈಗೆ ಮುಂದೂಡಲಾಗಿದೆ. ಇಲಾಖೆ ಸರ್ಕಾರಕ್ಕೆ ಮನವಿ ಮಾಡಿ ಸೇವಾ ತೆರಿಗೆಯಿಂದ ವಿನಾಯ್ತಿ ನೀಡುವಂತೆ ಕೋರಿದೆ. ಈ ತೆರಿಗೆ ಜಾರಿಯಾದಲ್ಲಿ ಇಲಾಖೆ ವಾಷಿಕ 750 ಕೋಟಿ ರುಪಾಯಿ ಹೊರೆ ಹೊರಬೇಕಿದೆ. ಈ ಎಲ್ಲ ಹೊರೆಯ ಜೊತೆಗೆ 6ನೇ ವೇತನ ಆಯೋಗದ ಶಿಫಾರಸಿನಂತೆ ಇಲಾಖೆ ತನ್ನ ಉದ್ಯೋಗಿಗಳಿಗೆ 18,000 ಕೋಟಿ ರುಪಾಯಿಗಳ ಭತ್ಯೆ ಪಾವತಿಸಿದೆ.
ತೈಲೋತ್ಪನ್ನ ಬೆಲೆಗಳ ಏರಿಕೆಯನ್ನು ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ವಿರೋಧಿಸಿದ್ದಾರೆ. ಬೆಲೆ ಏರಿಕೆಯನ್ನು ಮರುಪರಿಶೀಲಿಸಬೇಕು ಎಂದು ಪ್ರಣಬ್ ಮುಖರ್ಜಿಯನ್ನು ಕೋರಿದ್ದಾರೆ.












Click it and Unblock the Notifications