ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚಾಗ್ನಿ ಯಾಗಕ್ಕೆ ತುಪ್ಪದ ಬದಲು ಸೀಮೆಎಣ್ಣೆ!

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

ರಾಮನಗರ, ಜೂ. 14 : ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ ಎನ್ನುವಂತೆ ಪಲ್ಲಂಗಪ್ರವೀಣ ನಿತ್ಯಾನಂದ ಮಾಡಬಾರದನ್ನೆಲ್ಲಾ ಮಾಡಿ ಪಂಚಾಗ್ನಿ ತಪಸ್ಯಯೋಗ ಕೈಗೊಂಡು ಮಾಡಿದ್ದ ಪಾಪಕರ್ಮಗಳನ್ನೆಲ್ಲಾ ಕಳೆದುಕೊಳ್ಳುವ ಪ್ರಯತ್ನ ನಡೆಸಿದ್ದಾನೆ.

ರಂಜಿತಾಳ ಜೊತೆಗಿನ ರಾಸಲೀಲೆ ಬೆತ್ತಲಾಗಿ ಧ್ಯಾನಫೀಠದಿಂದ ಪಲಾಯನ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದು ಜೈಲುವಾಸಿಯಾಗಿದ್ದ ನಿತ್ಯಾನಂದ ಪಂಚಾಗ್ನಿ ತಪಸ್ಯ ಯೋಗ ಕೈಗೊಳ್ಳುವುದರ ಮೂಲಕ ಧ್ಯಾನಪೀಠಕ್ಕೆ ಭರ್ಜರಿ ಪ್ರಚಾರದೊಂದಿಗೆ ರೀಎಂಟ್ರಿಕೊಟ್ಟಿದ್ದಾನೆ. ಕಾವಿ ಧರಿಸಿ ಸಂಪಾದಿಸಿದ ಹೆಸರೆಲ್ಲ ನೀರಲ್ಲಿ ಹೋಮ ಮಾಡಿದಂತಾಯಿತೆಂದು ಪ್ರಾಯಶ್ಚಿತ್ತ ಪಟ್ಟಂತೆ ಕಾಣುತ್ತಿರುವ ನಿತ್ಯಾನಂದ ಭಾನುವಾರ ಬೆಳಿಗ್ಗೆ 6 ಗಂಟೆಯಿಂದಲೇ ತನ್ನ ಶಿಷ್ಯರೊಂದಿಗೆ ಪಂಚಾಗ್ನಿ ತಪಸ್ಯಯೋಗದಲ್ಲಿ ಏಕಾಗ್ರತೆಯಿಂದ ತಲ್ಲೀನನಾಗಿದ್ದ.

ಪಂಚಾಗ್ನಿ ತಪಸ್ಯ ಯೋಗ : ಸುತ್ತಲು ವೃತ್ತಾಕಾರದಲ್ಲಿ 3 ಅಡಿ ಅಂತರದಲ್ಲಿ ಬೆಂಕಿ ಹಾಕಿ ಮಧ್ಯದಲ್ಲಿ ನಿತ್ಯಾನಂದ ಕುಳಿತು ಏಕಾಗ್ರತೆಯಿಂದ ನಿತ್ಯಾನಂದ ಜಪ ಮಾಡಿದ. ಆಶ್ರಮದ 21 ಮಂದಿ ಬ್ರಹ್ಮಚರ್ಯ ಸ್ವೀಕರಿಸಿರುವ ಪುರುಷರು ಮತ್ತು ಮಹಿಳೆಯರು ಹಾಗೂ ಆಶ್ರಮವಾಸಿಗಳು ಕೂಡ ಪಂಚಾಗ್ನಿ ತಪಸ್ಯ ಯೋಗದಲ್ಲಿ ಭಾಗಿಯಾಗಿ ಗುರು ನಿತ್ಯಾನಂದನಿಗೆ ಸಾಥ್ ಕೊಟ್ಟರು.

ಸೂರ್ಯೋದಯಕ್ಕೆ ಮುನ್ನ ನಿತ್ಯಾನಂದ ಪಂಚಾಗ್ನಿ ತಪಸ್ಯ ಯಾಗವನ್ನ ಧ್ಯಾನಪೀಠದ ಆನಂದೇಶ್ವರಸ್ವಾಮಿ ದೇಗುಲದ ಎದುರು ಕೈಗೊಂಡರು. ವೃತ್ತಾಕಾರದ ಮೇಲೆ ಕಟ್ಟಿಗೆಗಳನ್ನಿಟ್ಟು ಅಗ್ನಿಸ್ಪರ್ಷ ಮಾಡಿ ದೂಪದ ಪುಡಿಯನ್ನು ಹಾಕಿ ಮಧ್ಯದಲ್ಲಿ ವೃತ್ತಾಕಾರದ ಮಧ್ಯದಲ್ಲಿ ಕುಳಿತು ಧ್ಯಾನ ಮಾಡಿದ ನಿತ್ಯಾನಂದ. ಪಂಚಾಗ್ನಿ ತಪಸ್ಯ ಯಾಗದಲ್ಲಿ ಪಾಲ್ಗೊಳ್ಳುವವರು ದಿನಕ್ಕೆ ಒಮ್ಮೆ ಮಾತ್ರ ಸೂರ್ಯಾಸ್ತವಾದ ನಂತರ ಆಹಾರವನ್ನ ಸೇವಿಸುವುದು ತಪಸ್ಸಿನ ಒಂದು ಅಂಗವಂತೆ. ಲೋಕ ಕಲ್ಯಾಣಕ್ಕಾಗಿ ಮತ್ತು ಮಾನಸಿಕವಾಗಿರುವ ಒತ್ತಡ ಮತ್ತು ತುಮುಲಗಳನ್ನ ದೂರ ಮಾಡುವ ಸಲುವಾಗಿ ಪಂಚಾಗ್ನಿ ತಪಸ್ಯ ಯಾಗದಲ್ಲಿ ಪಾಲ್ಗೊಳ್ಳುತ್ತಾರಂತೆ.

ಪಂಚಾಗ್ನಿ ಯಾಗಕ್ಕೆ ಬಳಸಿದಂಥ ತೈಲವಾದರೂ ಯಾವದು? ಹಿಂದೂ ಧರ್ಮದ ಯಾವುದೇ ರೀತಿಯ ಹೋಮಹವನ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಯಾವುದೇ ಕಾರಣಕ್ಕೂ ಸೀಮೆಎಣ್ಣೆಯನ್ನು ಬಳಸುವುದಿಲ್ಲ. ತುಪ್ಪ, ಕರ್ಪೂರ, ಹೊಂಗೇಎಣ್ಣೆ, ಕಡಲೇಕಾಯಿಎಣ್ಣೆ, ಎಳ್ಳೆಣ್ಣೆಯನ್ನ ಸಾಮಾನ್ಯವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಸುತ್ತಾರೆ. ಆದರೆ ನಿತ್ಯಾನಂದನ ಪಂಚಾಗ್ನಿ ತಪಸ್ಯ ಯೋಗದಲ್ಲಿ ಕಟ್ಟಿಗೆಗಳಿಗೆ ಮೊದಲು ಸೀಮೆಎಣ್ಣೆ ಸುರಿದು ಅಗ್ನಿಸ್ಪರ್ಷ ಮಾಡಿದರು. ನಂತರ ಮಾಧ್ಯಮ ಕ್ಯಾಮೆರಾಗಳು ಕಾಣುತ್ತಿದ್ದಂತೆ ತುಪ್ಪವನ್ನ ತಂದು ಪಂಚಾಗ್ನಿಗೆ ಹಾಕುತ್ತಿದ್ದುದು ಕಂಡುಬಂತು.

ಏನಿದು ಪಂಚಾಗ್ನಿ ತಪಸ್ಯ ಯಾಗ : ಪಂಚಾಗ್ನಿ ತಪಸ್ಯಯಾಗವನ್ನ ಪುರಾಣದಲ್ಲಿ ಋಷಿಮುನಿಗಳು ಪ್ರಾಯಶ್ಚಿತ್ತಕ್ಕಾಗಿ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಅಬೋಧ್ಯ ಭೋಜನ (ಹೊರಗಡೆ ಆಹಾರ ಸೇವಿಸಿದ್ದು) ಪರಸ್ತ್ರೀ ಸಂಗ ಮಾಡಿದವರು ಮನಸ್ಸು ಧರ್ಮಕ್ಕೆ ವಿರುದ್ದವಾಗಿ ನಡೆದುಕೊಂಡಿದ್ದರೆ, ಮಾಡಿದ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಪಂಚಾಗ್ನಿ ತಪಸ್ಯ ಯಾಗದಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಬಗ್ಗೆ ಮಹಾಭಾರತ, ಮನುಸ್ಮೃತಿ ಮತ್ತು ಯಾಜ್ಞವಲ್ಕ ಸ್ಮೃತಿಗಳಲ್ಲು ಪಂಚಾಗ್ನಿ ತಪಸ್ಯಯಾಗ ಪ್ರಾಯಶ್ಚಿತ್ತಕ್ಕಾಗಿ ಮಾಡಿಕೊಳ್ಳುತ್ತಿದ್ದರೆಂದು ಉಲ್ಲೇಖಗೊಂಡಿದೆ.

ಹಾಗಾದರೆ ನಿತ್ಯಾನಂದ ಮಾಡಿದ್ದು ತಪ್ಪೆಂದು ಅರಿವಾಗಿದ್ದರೆ ಹಿನ್ನೆಲಯಲ್ಲಿ ಪಂಚಾಗ್ನಿ ತಪಸ್ಯ ಯೋಗವನ್ನು ಕೈಗೊಂಡಿದ್ದಾನೆ ಎಂದಾಯ್ತು, ಆದರೆ ಅಬೋಧ್ಯ ಭೋಜನ ಮಾಡಿದ ತಪ್ಪಿಗೋ ಪರಸ್ತ್ರೀಸಂಗ ಮಾಡಿದ ತಪ್ಪಿಗೋ ಪ್ರಾಯಶ್ಚಿತ್ತ ಮಾಡಿಕೊಂಡಿದ್ದಾರೆಂಬುದು ಮಾತ್ರ ನಿತ್ಯಾನಂದನೇ ಉತ್ತರಿಸಬೇಕಾಗಿದೆ.

ಶಿಷ್ಯರಿಗೇಕೆ ಪ್ರಾಯಶ್ಚಿತ್ತ : ನಿತ್ಯಾನಂದ ತಾನು ಮಾಡಿದ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಪಂಚಾಗ್ನಿ ತಪಸ್ಯಯಾಗವನ್ನ ಕೈಗೊಂಡಿದ್ದೇನೋ ಸರಿ. ಆದರೆ ನಿತ್ಯಾನೊಂದಿಗೆ ಯಾಗದಲ್ಲಿ ಕುಳಿತಿದ್ದ 21 ಮಂದಿ ನಿತ್ಯಾನಂದನ ಶಿಷ್ಯರು ಯಾವ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪಂಚಾಗ್ನಿ ತಪಸ್ಯ ಯಾಗದಲ್ಲಿ ಭಾಗಿಯಾದರೆಂಬುದನ್ನ ನಿತ್ಯನ ಶಿಷ್ಯಂದಿರೇ ಹೇಳಬೇಕಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X