• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಾಯಿಯಂತೆ ಮಗಳು, ಬಳ್ಳಿಯಂತೆ ಹೂವು

By * ಡಿ.ಟಿ. ತಿಲಕ್‌ರಾಜ್
|
ಚನ್ನಪಟ್ಟಣ, ಜೂ. 14 : ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಶಿಕ್ಷಣವೇ ಯೋಗ. ಸಾವಿರಾರು ವರ್ಷಗಳಿಂದ ಭಾರತ ದೇಶದಲ್ಲಿ ನಡೆದುಕೊಂಡು ಬರುತ್ತಿರುವ ಯೋಗವಿದ್ಯೆ ಋಷಿ-ಮುನಿಗಳಾದಿ ಸಾಧಕರಿಂದ ವಿದ್ಯೆ ಮತ್ತು ಜೀವನಶೈಲಿಯಾಗಿ ಹರಿದುಬಂದಿದೆ. ಇಂದಿನ ಯಾಂತ್ರಿಕ ಬದುಕಿನ ದಿನಗಳಲ್ಲಿ ಮಾನವ ಜೀವಿ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ, ಒತ್ತಡದಿಂದ ಬದುಕು ಸಾಗಿಸುತ್ತಿದ್ದಾನೆ. ಹಾಗಾಗಿ ಸಹಜವಾಗಿಯೇ ಇದರಿಂದ ದೈಹಿಕ ಹಾಗೂ ಮಾನಸಿಕವಾಗಿ ಅನೇಕ ಸಮಸ್ಯೆಗಳು ಮಾನವನಿಗೆ ಎದುರಾಗಿ ಆತನನ್ನು ಮಾನಸಿಕವಾಗಿ ಖಿನ್ನರನ್ನಾಗಿಸುತ್ತಿವೆ.

ಯೋಗ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿನಂತೆ, ಜೀವನದ ಹಾಗೂ ಮಾನಸಿಕ ಒತ್ತಡಗಳಿಂದ ಪಾರಾಗಲು ಇತ್ತೀಚಿನ ದಿನಗಳಲ್ಲಿ ಯೋಗವಿದ್ಯೆಯ ಕಡೆ ಹೆಚ್ಚಿನ ಮಂದಿ ಗಮನ ಹರಿಸುತ್ತಿದ್ದಾರೆ. ಹೀಗೆ ಯೋಗದ ಕಡೆ ಆಕರ್ಷಿತರಾಗುತ್ತಿರುವವರಿಗೆ ಯೋಗದ ಬಗ್ಗೆ ಅರಿವು ಮೂಡಿಸುತ್ತಾ, ಯೋಗವಿದ್ಯೆ ಕಲಿಸುತ್ತಿರುವ ಚನ್ನಪಟ್ಟಣದ ತಾಯಿ-ಮಗಳ ಯಶೋಗಾಧೆ ಕುರಿತ ಒಂದು ವರದಿ ಇಲ್ಲಿದೆ.

ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ತಾಲೂಕಿನ ಯೋಗಪಟುಗಳಾದ ಸೌಭಾಗ್ಯ ಹಾಗೂ ಇವರ ಮಗಳು ಸಮೀಕ್ಷಾ ಅವರುಗಳೇ ಉತ್ತಮ ಉದಾಹರಣೆ. ಯೋಗದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದೆಂದು ತಿಳಿಸುತ್ತಾ, ತಾಲೂಕಿನ ಯೋಗಪ್ರಿಯರಿಗೆ ಯೋಗ ಕಲಿಸಿಕೊಂಡು, ಯೋಗವನ್ನೇ ತಮ್ಮ ಕಾಯಕವನ್ನಾಗಿಸಿಕೊಂಡಿರುವ ಈ ತಾಯಿ-ಮಗಳ ಸಾಧನೆ ನಿಜಕ್ಕೂ ಶ್ಲಾಘನೀಯ.

ಸೌಭಾಗ್ಯ ಯೋಗ ಕೇಂದ್ರ ಎಂಬ ಚಿಕ್ಕ ಸಂಸ್ಥೆ ಸ್ಥಾಪಿಸಿ, ಕಳೆದ ಇಪ್ಪತೈದು ವರ್ಷಗಳಿಂದ ಸರಳ ಯೋಗವನ್ನು ಹಿರಿಯರಿಗೆ ಹಾಗೂ ಚಿಕ್ಕಮಕ್ಕಳಿಗೆ ಕಲಿಸುತ್ತಾ ಯೋಗದ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಯೋಗ ಶಿಕ್ಷಕಿ ಸೌಭಾಗ್ಯ. ತಮ್ಮ ಸಂಸ್ಥೆಯ ವತಿಯಿಂದ ಪಟ್ಟಣದ ಪ್ರದೇಶಗಳಲ್ಲಿ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ಯೋಗ ಶಿಬಿರಗಳನ್ನು ಆಯೋಜಿಸಿ, ಯೋಗ ತರಗತಿಗಳನ್ನು ನಡೆಸಿ, ಯೋಗದಿಂದಾಗುವ ಪ್ರಯೋಜನಗಳು ಹಾಗೂ ಮಹತ್ವದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸಮೀಕ್ಷಾ ಅವರು ತಮ್ಮದೇ ಯುವತಿ ಮಂಡಳಿಯನ್ನು ಸ್ಥಾಪಿಸಿಕೊಂಡು, ಯುವಜನರನ್ನು ಯೋಗದತ್ತ ಸೆಳೆದು, ಅವರಿಗೆ ಯೋಗವಿದ್ಯೆ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಮಾನಸಿಕ, ದೈಹಿಕ ಸಮತೋಲನಕ್ಕಾಗಿ ಯೋಗ ಕಲಿಯಿರಿ.
ಪ್ರಶಸ್ತಿ-ಪುರಸ್ಕಾರಗಳು : ಸೌಭಾಗ್ಯ ಅವರ ಯೋಗಸಾಧನೆಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಪ್ರಮುಖವಾಗಿ ಯೋಗರತ್ನ, ಯೋಗಶಾರದೆ ಬಿರುದುಗಳಲ್ಲದೆ ರಾಜ್ಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳು ಇವರ ಸಾಧನೆಗೆ ಗರಿಯಾಗಿವೆ.

ಹೊರರಾಜ್ಯಗಳಾದ ಹರಿಯಾಣ, ಕಲ್ಕತ್ತಾ, ದೆಹಲಿ, ಒರಿಸ್ಸಾ, ಪಾಂಡಿಚೇರಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಯೋಗ ಪ್ರದರ್ಶನವನ್ನು ಸೌಭಾಗ್ಯ ನಡೆಸಿಕೊಟ್ಟಿದ್ದು, ಅವಕಾಶ ಸಿಕ್ಕಿದರೆ ಎಲ್ಲಿಯಾದರೂ ಸರಿ ಯೋಗದ ಬಗ್ಗೆ ಅರಿವು ಮೂಡಿಸಿ, ಯೋಗ ಕಲಿಸಿಕೊಡುತ್ತೇನೆಂದು ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ. ಯೋಗದಿಂದ ದೈಹಿಕವಾಗಿ ಮಾನಸಿಕವಾಗಿ ಸಮತೋಲನ ಕಾಪಾಡಿಕೊಳ್ಳುವುದರೊಂದಿಗೆ ಏಕಾಗ್ರತೆಯನ್ನ ಸಾಧಿಸಬಹುದು. ಚಿಕ್ಕ ವಯಸ್ಸಿನಿವರಿಂದ ವೃದ್ದರಾದಿಯಾಗಿ ಮಹಿಳೆಯರು ಪುರುಷರು ಯೋಗ ಸಾಧನೆಯಲ್ಲಿ ತೊಡಗಬಹುದು ಎಂದು ಸೌಭಾಗ್ಯ ಸಲಹೆ ನೀಡುತ್ತಾರೆ.

ತಾಯಿಯ ಹಾದಿಯಲ್ಲಿ ಸಾಗುತ್ತಿರುವ ಸಮೀಕ್ಷಾ ತನ್ನ ಮೂರನೇ ವಯಸ್ಸಿನಿಂದಲೇ ಯೋಗಾಭ್ಯಾಸ ಕಲಿತ ಪ್ರವೀಣೆ. ತನ್ನ ವಿದ್ಯಾಭ್ಯಾಸದ ಜೊತೆಯಲ್ಲೇ ಇಂದಿಗೂ ಮಕ್ಕಳಿಗೆ ಯೋಗ ತರಗತಿಗಳನ್ನು ನಡೆಸುತ್ತಾ, ಯೋಗ ಪ್ರದರ್ಶನ ನೀಡುತ್ತಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರ ಯೋಗ ಪ್ರದರ್ಶನಗಳು ಸಹ ಪಾಂಡಿಚೇರಿ, ಕಲ್ಕತ್ತಾ, ಕಾಂಚೀಪುರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನಡೆದಿದ್ದು, ಭಾಗವಹಿಸಿದ್ದ ಎಲ್ಲಾ ಕಡೆಯೂ ಈಕೆ ಪ್ರಥಮ ಬಹುಮಾನ ಪ್ರಶಸ್ತಿ ಪಡೆದುಕೊಂಡು ತಾಯಿಗೆ ತಕ್ಕ ಮಗಳು ಎಂಬ ಗಾದೆಯನ್ನು ನೆನಪಿಸಿದ್ದಾರೆ.

ಪ್ರಸ್ತುತ ಆಧುನಿಕ ಜೀವನ ಪದ್ದತಿ, ಉದ್ವೇಗ, ಮಧುಮೇಹ, ರಕ್ತದೊತ್ತಡ, ಮತ್ತಿತರ ಸಮಸ್ಯೆಗಳು ಮಾನವನಿಗೆ ಬಳುವಳಿಯಾಗಿ ಬಂದಿವೆ. ಇದರಿಂದ ಮುಕ್ತಿ ಹೊಂದುವ ಸಲುವಾಗಿ ಭಾರತೀಯ ಸಂಸ್ಕೃತಿಯಲ್ಲಿ ಶಾಸ್ತ್ರೀಯವಾಗಿ ದೊರೆತಿರುವ ಯೋಗ ಸಿದ್ದೌಷದಿಯಾಗಿದೆ. ಯೋಗ ವಿದ್ಯೆ ವಿಶ್ವದಲ್ಲೆ ಪ್ರಚಲಿತದಲ್ಲಿದೆ, ಅನೇಕ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯೋಗಾಸನ, ಧ್ಯಾನ, ಪ್ರಾಣಾಯಾಮ ಸಹಕಾರಿಯಾಗಿದೆ. ಜೀವನದಲ್ಲಿ ಪರಿಪೂರ್ಣ ಮನುಷ್ಯನಾಗಲು ಬೇಕಾದ ಸಕಾರಾತ್ಮಕ ಅಂಶಗಳು ಯೋಗ ಅಭ್ಯಾಸದಿಂದ ಸಾಧ್ಯ ಎಂದು ಸಮೀಕ್ಷಾ ಹೇಳುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more