ಶ್ರೀಕಾಳಹಸ್ತಿ ದೇಗುಲ ರಾಜಗೋಪುರ ಕುಸಿತ
ಚಿತ್ತೂರು, ಮೇ.27:ಶ್ರೀಕಾಳಹಸ್ತಿ ದೇಗುಲದ ರಾಜಗೋಪುರ ಬುಧವಾರ ಉದ್ದುದ್ದಾವಾಗಿ ಸೀಳಿಕೊಂದು ತಾನೇ ತಾನಾಗಿ ಕುಸಿತ ಕಂಡಿದೆ. ವಿಜಯನಗರದ ಅರಸು ಶ್ರೀ ಕೃಷ್ಣದೇವರಾಯ ನಿರ್ಮಿತ ಈ ಬೃಹತ್ ರಾಜಗೋಪುರ ಸುಮಾರು 500 (ಕ್ರಿ.ಶ. 1516)ವರ್ಷ ಹಳೆಯದ್ದಾಗಿದೆ. ಈ ಘಟನೆಯ ನಂತರ ಹಲವಾರು ಭಕ್ತಾದಿಗಳು ಅಶುಭ ಸೂಚನೆಯ ಭೀತಿಗೆ ಸಿಲುಕಿದ್ದಾರೆ.
ಇತ್ತೀಚಿನ ಲೈಲಾ ಚಂಡಮಾರುತದ ಪರಿಣಾಮ ಬೀಸಿದ ಗಾಳಿ, ಮಳೆ, ಸಿಡಿಲಿನ ಹೊಡೆತಕ್ಕೆ ಸಿಕ್ಕು ಮೊದಲೇ ಶಿಥಿಲಗೊಂಡಿದ್ದ 7 ಅಂತಸ್ತಿನ ರಾಜಗೋಪುರ ಮತ್ಷ್ಟು ಬಿರುಕು ಬಿಟ್ಟಿತ್ತು. ಗೋಪುರದ ಸುತ್ತಮುತ್ತಲಿನ 150 ಮೀಟರ್ ಸ್ಥಳವನ್ನು 'ಅಪಾಯ ಸ್ಥಳ'ಎಂದು ದೇಗುಲದ ಆಡಳಿತ ಮಂಡಳಿ ಘೋಷಿಸಿ, ಮುಂಜಾಗರೂಕತೆ ವಹಿಸಿದ್ದ ಪರಿಣಾಮ ಯಾವುದೇ ಸಾವು ನೋವುಗಳೂ ಸಂಭವಿಸಲಿಲ್ಲ.
ಇತ್ತೀಚೆಗೆ ದೇವಸ್ಥಾನದಲ್ಲಿ 'ರಾಹು-ಕೇತು'ದೋಷ ಪರಿಹಾಮ ಪೂಜೆ, ಹೋಮಗಳು ನಡೆದಿತ್ತು, ಈ ಪೂಜೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸೇರಿದಂತೆ, ಗಣ್ಯಾತಿಗಣ್ಯರು ಈ ಸಂದರ್ಭದಲ್ಲಿ ಭೇಟಿ ನೀಡಿದ್ದರು.
ದಕ್ಷಿಣಾಥ್ಯದಲ್ಲಿ ಪಂಚಭೂತ ಕಲ್ಪನೆಯಲ್ಲಿ ನಿರ್ಮಿತವಾದ ದೇಗುಲಗಳಲ್ಲಿ ಶ್ರೀಕಾಳಹಸ್ತಿಯೂ ಒಂದು. ಕಾಳಹಸ್ತಿಯ ಶಿವ ವಾಯುವನ್ನು ಪ್ರತಿನಿಧಿಸುತ್ತಾನೆ. ವಾಯುಲಿಂಗೇಶ್ವರನಾಗಿ ಇಲ್ಲಿ ಗುರುತಿಸಲ್ಪಡುತ್ತಾನೆ. ಇದೇ ರೀತಿ ತಿರುವಣ್ಣಾಮಲೈನಲ್ಲಿ ಅಗ್ನಿ ಸ್ವರೂಪನಾದ 'ತೇಜೋಲಿಂಗಂ', ಚಿದಂಬರಂನಲ್ಲಿ ಆಕಾಶ ಸ್ವರೂಪನಾದ 'ಆಕಾಶ ಲಿಂಗಂ', ತಿರುವಣೈಕಾವಲ್ ನಲ್ಲಿ ಜಲಸ್ವರೂಪನಾದ 'ಅಪ್ಪು ಲಿಂಗಂ' ಮತ್ತು ಕಂಚೀಪುರಂನಲ್ಲಿ ಭೂ ಸ್ವರೂಪನಾದ 'ಪೃಥ್ವಿ ಲಿಂಗಂ' ನನ್ನು ಕಾಣಬಹುದು.












Click it and Unblock the Notifications