ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಕ್ಕೆ ಅಪ್ಪಳಿದ ಲೈಲಾ ಮತ್ತು ಬೆಲೆ ಏರಿಕೆ

By Prasad
|
Google Oneindia Kannada News

Karnataka hit by Laila and price rise
ಬೆಂಗಳೂರು, ಮೇ 20 : ಮುಂಗಾರು ಮಳೆ ಪ್ರಾರಂಭವಾಗುವ ಮುನ್ನವೇ ತರಕಾರಿ ಮಾರುಕಟ್ಟೆ ಕೊಳೆತು ನಾರಲು ಪ್ರಾರಂಭಿಸಿದೆ. ಮಾರಾಟಗಾರರು ಬುಟ್ಟಿಯಲ್ಲಿ ತುಂಬಿಟ್ಟ ಈರುಳ್ಳಿಯನ್ನು ಕೊಳ್ಳುವುದು ಹೋಗಲಿ ನೋಡಲೂ ಆಗುವುದಿಲ್ಲ. ಕೊತ್ತಂಬರಿ ಸೊಪ್ಪಿನ ದರ ಕೇಳಿದರೆ ಕೊತ್ತಂಬರಿಯಿಲ್ಲದೆ ಸಾರು ಮಾಡುವುದೇ ವಾಸಿ ಎಂಬ ನಿರ್ಣಯಕ್ಕೆ ಬರುತ್ತೀರಾ. ಇನ್ನು ಹಸಿ ಶುಂಠಿಯನ್ನು ಹೋಲ್ಸೇಲ್ ಮಾರುಕಟ್ಟೆಯಿಂದ ತರಲು ಪುಡಿಮಾರಾಟಗಾರರೇ ಹಿಂದೆ ಮುಂದೆ ನೋಡುತ್ತಿದ್ದಾರೆ.

ರಾಜ್ಯದಲ್ಲಿ ಒಂದು ಬದಿ ಬೆಲೆ ಏರಿಕೆಯಿಂದ ಗ್ರಾಹಕರು ತತ್ತರಿಸಿದ್ದರೆ, ಇನ್ನೊಂದು ಬದಿ ಲೈಲಾ ಬಿರುಗಾಳಿ ಮತ್ತು ಭಾರೀ ಮಳೆಯಿಂದ ಬೆಳೆಗಳೆಲ್ಲ ಹಾನಿಯಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಏರಿದವನು ಇಳಿಯಲೇಬೇಕು ಎಂಬ ಕವಿವಾಣಿಯನ್ನು ತರಕಾರಿ, ಹಣ್ಣು, ಬೇಳೆಕಾಳುಗಳ ಬೆಲೆ ಧಿಕ್ಕರಿಸಿವೆ.

ಕೆಲ ದಿನಗಳ ಹಿಂದೆ ಕಿ.ಗ್ರಾಂ. ಲೆಕ್ಕದಲ್ಲಿ 60ರಿಂದ 70 ರು.ಗೆ ದೊರೆಯುತ್ತಿದ್ದ ಹಸಿ ಶುಂಠಿ 200 ರು. ದಾಟಿ ಕುಳಿತಿದೆ. ಕೇಳಿದರೆ ಒಣಗಿಹೋದ ಹಸಿ ಶುಂಠಿ ಕೂಡ ದಕ್ಕುವುದಿಲ್ಲ. ಐದು ರುಪಾಯಿಗೆ ದೊರೆಯುತ್ತಿದ್ದ ಕೊತ್ತಂಬರಿ ಕಟ್ಟು 25 ರು.ಗೆ ಏರಿ ಕುಳಿತಿದೆ. ಇನ್ನು ಉತ್ತಮ ದರ್ಜೆಯ ಈರುಳ್ಳಿ ಬಗ್ಗೆ ಮಾತನಾಡದಿರುವುದೇ ಲೇಸು. ನೆನೆಸಿಕೊಂಡರೆ ಕಣ್ಣೀರು ಬರುವುದೊಂದು ಬಾಕಿ.

ಹಸಿ ಮೆಣಸಿನಕಾಯಿ, ದೊಡ್ಡ ಮೆಣಸಿನಕಾಯಿ, ಕ್ಯಾರೆಟ್, ಆಲೂಗಡ್ಡೆ, ಕೊನೆಗೆ ಮೂಲಂಗಿ ದರವೂ ಗ್ರಾಹಕರಿಗೆ ಕೈಗೆಟುಕದಂತಾಗಿದೆ. ಹೊಟೇಲಿಗೆ ಹೋದರೆ ಸಾಂಬಾರಿನಲ್ಲಿ ತರಕಾರಿ ಹುಡುಕುವುದು ಮದುವೆ ಗಂಡು ಹೆಣ್ಣು ಅಕ್ಕಿ ರಾಶಿಯಲ್ಲಿ ಉಂಗುರ ಹುಡುಕಿದಂತಾಗುತ್ತದೆ. ದೊಡ್ಡ ಮೆಣಸಿನಕಾಯಿಯನ್ನು ಕೆಡದಿದ್ದರೆ ಶೋಕೇಸಿನಲ್ಲಿ ಇಟ್ಟು ನೋಡಿ ಆನಂದಪಡುವುದು ಒಳಿತು.

ಬೇಳೆಕಾಳುಗಳ ಬೆಲೆಯಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ಕಳೆದ ವಾರದಲ್ಲಿ ಬೇಳೆಕಾಳುಗಳು ದರದಲ್ಲಿ ಶೇ.2ರಷ್ಟು ಏರಿಕೆ ಕಂಡಿವೆ. ಅಕ್ಕಿ ದರ ಕಡಿಮೆಯಾಗಿದೆ ಅಂತ ಹೇಳಲಾಗಿದೆಯಾದರೂ, ಹಳೆ ಅಕ್ಕಿ ಬೆಲೆ ಕುಂತಲ್ಲಿಯೇ ಕುಂತಿದೆ, ಹೊಸ ಅಕ್ಕಿ ದರದಲ್ಲಿ ಮಾತ್ರ ಅಲ್ಪ ಇಳಿಕೆ ಕಂಡುಬಂದಿದೆ. ವಾರ್ಷಿಕ ಲೆಕ್ಕದಲ್ಲಿ ನೋಡಿದರೆ ಬೇಳೆಕಾಳುಗಳ ದರ ಶೇ.33.65ರಷ್ಟು ಮತ್ತು ಹಣ್ಣುಗಳು ಶೇ.17ರಷ್ಟು ಏರಿಕೆ ಕಂಡಿವೆ. ಇನ್ನು ಹೂವುಗಳ ವಾಸನೆ ತೆಗೆದುಕೊಂಡರೆ ತಲೆನೋವು ಬರುತ್ತದೆಂದು ದೂರದಿಂದಲೇ ನೋಡಿ ಆನಂದಿಸುತ್ತಿದ್ದಾರೆ. ಹೊಂಬಣ್ಣದ ಸೇವಂತಿಗೆ ಹೂವು ಮಾರುಕಟ್ಟೆಯಿಂದ ಮಾಯವಾಗಿ ದಿನಗಳೇ ಕಳೆದಿವೆ.

ಆಹಾರ ಹಣದುಬ್ಬರ : ಕಳೆದ ಮೇ 8ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ಆಹಾರ ಹಣದುಬ್ಬರ ಶೇ.16.49ಕ್ಕೆ ಏರಿಕೆಯಾಗಿದೆ. ಹಿಂದಿನ ವಾರದಲ್ಲಿ ಆಹಾರ ಹಣದುಬ್ಬರ ಶೇ.16.44 ದಾಖಲಾಗಿತ್ತು. ಆಹಾರ ಹಣದುಬ್ಬರ ಮುಂಗಾರು ಮಳೆಯ ಆರಂಭದ ನಂತರ ಕಡಿಮೆಯಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರಾದರೂ ಸದ್ಯದ ಪರಿಸ್ಥಿತಿಯಲ್ಲಿ ಇಳಿಯುವುದು ದೂರದ ಮಾತು. ತರಕಾರಿ ಮತ್ತು ಹಣ್ಣುಗಳನ್ನು ಕೊಳ್ಳಲೂ ಮನಸ್ಸಾಗುವುದಿಲ್ಲ, ಕೊಳ್ಳದಿದ್ದರೆ ಬಿಡಲೂ ಆಗುವುದಿಲ್ಲ ಎಂಬಂತಹ ಪರಿಸ್ಥಿತಿ ಗ್ರಾಹಕನದು. ಸಣ್ಣಪುಟ್ಟ ಹಬ್ಬಗಳನ್ನು ಹೊರತುಪಡಿಸಿದರೆ ದೊಡ್ಡ ಹಬ್ಬವಿಲ್ಲದ್ದರಿಂದ ಗ್ರಾಹಕರು ಅಲ್ಪಮಟ್ಟಿಗೆ ನಿರಾಳರಾಗುವಂತಾಗಿದೆ.

ಇಂಧನ ಬೆಲೆ : ದೇಶದ ಇಂಧನ ಹಣದುಬ್ಬರ ಯಥಾ ಸ್ಥಿತಿಯಲ್ಲೇ ಇದ್ದು ಸರ್ಕಾರ ನೈಸರ್ಗಿಕ ಅನಿಲ ಬೆಲೆಯನ್ನು ಹೆಚ್ಚಿಸಿದ್ದರಿಂದ ಅನಿಲ ಆಧಾರಿತ ಇಂಧನದ ಬೆಲೆ ಹೆಚ್ಚಳ ಆಗಲಿರುವದಾಗಿ ಹೇಳಲಾಗಿದೆ. ಸರ್ಕಾರ ನಿನ್ನೆ ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್ ನೈಸರ್ಗಿಕ ಅನಿಲದ ದರವನ್ನು ದ್ವಿಗುಣಗೊಳಿಸಿ 4.20 ಡಾಲರ್ ಗಳಿಗೆ ಏರಿಸಿತ್ತು. ವಿದ್ಯುತ್ ದರದ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ಲಿಗೆ ಹೆಚ್ಚಿನ ಹಣ ತೆತ್ತಲು ದೇಶದ ನಾಗರಿಕರು ಸಿದ್ಧರಾಗುವುದು ಒಳಿತು. ಆದರೆ, ಈ ಹಣಕಾಸು ವರ್ಷದ ಅಂತ್ಯಕ್ಕೆ ದೇಶದ ಹಣದುಬ್ಬರ ಶೇ.5.5ಕ್ಕೆ ಇಳಿಕೆ ಆಗಲಿದೆ ಎಂದು ರಿಸರ್ವ್ ಬ್ಯಾಂಕು ಅಂದಾಜಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X