ಎಸ್ಸೆಸ್ಸೆಲ್ಸಿ ಪಾಠಕ್ಕೆ ಶಿಕ್ಷಕರು ಬೇಕಾಗಿದ್ದಾರೆ

ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಜಯನಗರ, ಬನಶಂಕರಿ, ಜರಗನಹಳ್ಳಿ, ಸಾರಕ್ಕಿ, ಕೋಣನಕುಂಟೆ, ಶ್ರೀನಿಧಿ ಲೇಔಟ್, ಯಲಚೇನಹಳ್ಳಿ ಆಸುಪಾಸಿನಲ್ಲಿ ನೆಲೆಸಿರುವ ಬಡ ವಿದ್ಯಾರ್ಥಿಗಳಿಗೆ ಖಾಸಗಿಯಾಗಿ ಪಾಠಮಾಡಲು ಮುಂದೆ ಬರುವ ಶಿಕ್ಷಕರನ್ನು ಕರ್ನಾಟಕ ಟಿಪ್ಪು ಆಟೋ ಚಾಲಕರ ಸಂಘ ಹುಡುಕುತ್ತಿದೆ.
ಆಟೋ ಚಾಲಕರ ಕುಂದು ಕೊರತೆ ನಿವಾರಣೆಗಾಗಿ ಜನಿಸಿರುವ ಕರ್ನಾಟಕ ಟಿಪ್ಪು ಸುಲ್ತಾನ್ ಸೈನ್ಯದ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಆರ್ ಮುನಿರಾಜು ಈ ವಿಷಯವನ್ನು ದಟ್ಸ್ ಕನ್ನಡ ಡಾಟ್ ಕಾಂಗೆ ಮಂಗಳವಾರ ತಿಳಿಸಿದರು. ಖಾಸಗಿಯಾಗಿ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಪಾಠ ಮಾಡುವುದಕ್ಕೆ ಶಿಕ್ಷಕರು ತಿಂಗಳಿಗೆ 5ರಿಂದ 8 ಸಾವಿರ ರೂಪಾಯಿವರೆಗೆ ಶುಲ್ಕ ಪಡೆಯುತ್ತಿದ್ದಾರೆ. ಈ ಮೊತ್ತವನ್ನು ಕೊಟ್ಟು ಬಡ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು ತಮಗೆ ಅಸಾಧ್ಯವಾದ ಕಾರಣ ತಮ್ಮ ಆಟೋ ಚಾಲಕರ ಸಂಘದ ವತಿಯಿಂದಲೇ ಖಾಸಗಿ ಪಾಠಶಾಲೆ ನಡೆಸುವ ಆಲೋಚನೆ ಮಾಡಿರುವುದಾಗಿ ಮುನಿರಾಜು ಹೇಳಿದರು.
ಬಡ ಹುಡುಗ ಹುಡುಗಿಯರಿಗೆ ಪಾಠ ಮಾಡುವ ಗುರುಗಳಿಗೆ ಚಾಲಕ ಸಂಘದವರು ತಮ್ಮತಮ್ಮಲ್ಲೇ ಹಣ ಕೂಡಿಸಿ ಗುರು ಕಾಣಿಕೆಯನ್ನು ಸಲ್ಲಿಸುತ್ತಾರೆ. ಪಾಠ ಮಾಡುವುದನ್ನು ಬಿಸಿನೆಸ್ ಎಂದು ಪರಿಗಣಿಸದೆ ಶಿಕ್ಷಣ ದಾನ ಎಂದು ಪರಿಭಾವಿಸುವವರು ಬನಶಂಕರಿ ಸುತ್ತಮುತ್ತ ಪ್ರದೇಶದಲ್ಲಿ ಯಾರಾದರೂ ಇದ್ದರೆ ಅವರು ಮುನಿರಾಜು ಅವರನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ : 99019 28420. ಸಂಘದ ರಾಜ್ಯಾಧ್ಯಕ್ಷರು ಯಾಸಿನ್ ಬಾಬಾ : 93436 75830.
ಚಾಲಕ ಮುನಿರಾಜು ಅವರ ಇಬ್ಬರು ಹೆಣ್ಣುಮಕ್ಕಳು 8 ಮತ್ತು 9ನೇ ತರಗತಿಯವರೆಗೆ ಕಲಿತಿದ್ದಾರೆ. ಶಿಕ್ಷಣದ ವೆಚ್ಚ ಭರಿಸಲಾಗದೆ ಇಬ್ಬರು ಮಕ್ಕಳು ವ್ಯಾಸಂಗವನ್ನು ಮುನಿರಾಜು ಅಷ್ಟಕ್ಕೆ ನಿಲ್ಲಿಸಿದ್ದಾರೆ. ಮಗನ ವ್ಯಾಸಂಗ ಮಾತ್ರ ಮುಂದುವರೆದಿದ್ದು ಹುಡುಗ ಈ ಬಾರಿ ಹತ್ತನೇ ತರಗತಿಗೆ ಸೇರಿರುತ್ತಾನೆ. ಪ್ರತಿದಿನ ಎರಡು ಗಂಟೆ ಹೆಚ್ಚು ಕಾಲ ಆಟೋ ಓಡಿಸಿ 200 ರೂಪಾಯಿಗಳಷ್ಟು ಹೆಚ್ಚು ಸಂಪಾದನೆ ಮಾಡಿ ಪಾಠ ಮಾಡಲು ಮುಂದೆಬರುವ ಶಿಕ್ಷಕ ಅಥವಾ ಶಿಕ್ಷಕಿಗೆ ಗುರುಕಾಣಿಕೆ ಅರ್ಪಿಸಲು ತಾವು ಸಿದ್ದರಿರುವುದಾಗಿ ಮುನಿರಾಜು ತಿಳಿಸಿದರು. ಸಂಜೆ 5ರಿಂದ 7 ರವರೆಗೆ ಪಾಠಮಾಡಲು ಆಸಕ್ತಿ ಇರುವ ಶಿಕ್ಷಕರು ಯಾರಾದರೂ ಇದ್ದಲ್ಲಿ ಮುನಿರಾಜು ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಬಹುದು. ದಟ್ಸ್ ಕನ್ನಡ ಓದುಗರಿಗೆ ಯಾರಾದರೂ ಪರಿಚಿತರಿದ್ದರೆ ತಿಳಿಸಬಹುದು.
ಚಾಲಕ, ಆರ್ ಮುನಿರಾಜು; ಆಟೋ ನೊಂದಣಿ ಸಂಖ್ಯೆ; KA 05 D 2458, ಚಾಲಕ ಪರವಾನಗಿ ಸಂಖ್ಯೆ; 6765/82. ವಾಸ : ಹರಿನಗರ, ಬೆಂಗಳೂರು - 560 062. ಫೋನ್ : 99019 28420.












Click it and Unblock the Notifications