ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕು ತಿಂಗಳಲ್ಲಿ 40 ಚಿತ್ರಗಳು ಢಮಾರ್!

By * ಮೃತ್ಯುಂಜಯ ಕಲ್ಮಠ
|
Google Oneindia Kannada News

Golden Star Ganesh
2010ನೇ ವರ್ಷದ ಐದನೇ ತಿಂಗಳು ಮೇ ಆರಂಭವಾಗಿದೆ. ಕಳೆದಿರುವ ನಾಲ್ಕು ತಿಂಗಳಲ್ಲಿ ಕನ್ನಡದ ಯಾವ ಸಿನಿಮಾಗಳು ಗೆಲುವು ಸಾಧಿಸಿವೆ ಹೇಳಿ ? ಏನ್ ಸ್ವಾಮಿ ಹೀಗಂತೀರಾ ! ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮಳೆಯಲಿ ಜೊತೆಯಲಿ ನೂರು ದಿನ ಓಡಿದೆ. ಪುನೀತ್ ರಾಜಕುಮಾರ್, ಪ್ರಿಯಮಣಿ ನಟಿಸಿದ ರಾಮ್ ಹಂಡ್ರೆಂಡ್ ಡೇಸ್ ಆಗಿಲ್ವಾ. ಫೈನ್..!

ಈ ಐದು ತಿಂಗಳಲ್ಲಿ ಎಷ್ಟು ಸಿನಿಮಾಗಳು ಬಿಡುಗಡೆ ಆಗಿವೆ. ಅದರಲ್ಲಿ ಹೊಸಬರ ಚಿತ್ರಗಳೆಷ್ಟು ? ಹಳಬರು ಚಿತ್ರಗಳೆಷ್ಟು ? ನಿರೀಕ್ಷೆ ಇಟ್ಟುಕೊಂಡಿದ್ದ ಚಿತ್ರಗಳೆಷ್ಟು ? ಚಿತ್ರಗಳ ನಿರ್ಮಾಣಕ್ಕೆ ಮಾಡಿದ ಖರ್ಚೆಷ್ಟು ? ಅದರಿಂದ ಬಂದಿರುವ ಲಾಭ, ಆಗಿರುವ ನಷ್ಟ ಎಷ್ಟೆಷ್ಟು ? ಸೋತ ನಿರ್ಮಾಪಕರ ಪಾಡೇನು ? ದೊಡ್ಡ ದೊಡ್ಡ ನಿರ್ಮಾಪಕರು ಎಲ್ಲಿದ್ದಾರೆ ? ಒಂದು ಕಾಲದಲ್ಲಿ ಸದಭಿರುಚಿ ಚಿತ್ರಗಳನ್ನು ನೀಡಿರುವ ನಿರ್ದೇಶಕರು ಹಿಂದೆ ಸರಿಯಲು ಕಾರಣ ಏನು ? ಬಹುದಿನಗಳ ನಂತರ ಕಳೆದ ಭಾನುವಾರ ಪೃಥ್ವಿ ಚಿತ್ರ ನೋಡಿಕೊಂಡ ಬಂದ ನಂತರ ಇಂತಹ ಅನೇಕ ಚಿತ್ರಗಳು ತಲೆಯಲ್ಲಿ ಕೊರೆಯತೊಡಗಿದವು. ಈ ಬಗ್ಗೆ ಬರೆಯಬೇಕು ಎನ್ನುತ್ತಿರುವಾಗಲೇ ಶಿವಮೊಗ್ಗದಲ್ಲಿ ಆಗಿದ್ದ ಭೂಕಂಪದಲ್ಲಿ ನಾನು ಮುಳುಗಿ ಹೋದೆ.

ವಾರಕ್ಕೆ ಕಡಿಮೆ ಎಂದರೆ 2 ಚಿತ್ರಗಳಂತೂ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅಂದರೆ, ನಾಲ್ಕು ತಿಂಗಳಲ್ಲಿ ಕನಿಷ್ಠ 30 ರಿಂದ 35 ಸಿನಿಮಾಗಳು ರಿಲೀಸ್ ಆಗಿವೆ. ಅದರಲ್ಲಿ ಗೆಲುವು ಸಾಧಿಸಿರುವ ಚಿತ್ರಗಳು ಕೇವಲ ಎರಡ್ಮೂರು. ಉಳಿದ ಚಿತ್ರಗಳು ಮಣ್ಣಾಗಿವೆ. ಈ ನಾಲ್ಕು ತಿಂಗಳಲ್ಲಿ ನಿರೀಕ್ಷೆ ಹುಟ್ಟಿಸಿದ ಚಿತ್ರಗಳನ್ನು ನೆನಪಿಸಿಕೊಂಡರೆ ಯಾವ ಚಿತ್ರಗಳು ನೆನಪಿಗೆ ಬರಲಿಲ್ಲ. ಹೋಗಲಿ, ಚಿತ್ರಗಳ ಏಕೆ ಸೋತಿವೆ ಎಂದು ಹುಡುಕ ಹೊರಟರೆ ನೂರೆಂಟು ಕಾರಣಗಳು. ಅದು ಹೋಗಲಿ, ಚಿತ್ರ ನಿರ್ಮಾಣ ಸುಲಭದ ಮಾತಲ್ಲ. ನಿರ್ಮಾಪಕನೊಬ್ಬ ರೊಕ್ಕ ಹಾಕಲು ಮನಸ್ಸು ಮಾಡುತ್ತಾನೆ ಅಂದರೆ, ಆತ ಆಯ್ದುಕೊಂಡಿರುವ ಕತೆಯಲ್ಲಿ ಆತನಿಗೆ ಇಷ್ಟವಾಗುವ ಅನೇಕ ಸಂಗತಿಗಳು ಇರುತ್ತವೆ. ಬೇಕಾಬಿಟ್ಟಿ ಹಣ ಕಳೆದುಕೊಳ್ಳಲು ಯಾರೂ ಇಷ್ಟಪಡಲ್ಲ. ಹೀಗಿದ್ದಾಗಲೂ ಸಾಲು ಸಾಲಾಗಿ ಚಿತ್ರಗಳು ಸೋಲುತ್ತವಲ್ಲ, ಯಾಕ್ರೀ ?

ಚಿತ್ರರಂಗದಲ್ಲಿ ಹಣ ಹೂಡಲು ಅನೇಕರು ಸಿದ್ಧರಿದ್ದಾರೆ. ಆದರೆ, ಅಂತವರನ್ನು ಸಮರ್ಪಕವಾಗಿ ಬಳಸಿಕೊಳ್ಳವಂತ ತಂತ್ರಜ್ಞರ ಕೊರತೆಯಿಂದಾಗಿ ಕನ್ನಡ ಚಿತ್ರರಂಗ ಸೊರಗಿದೆ. ಹೇಳಿ, ಈ ನಾಲ್ಕು ತಿಂಗಳ ಅವಧಿಯಲ್ಲಿ ಒಬ್ಬೇ ಒಬ್ಬ ನಿರ್ದೇಶಕನಾಗಲಿ, ಸಂಗೀತ ನಿರ್ದೇಶಕನಾಗಲಿ ಸೈ ಅನಿಸಿಕೊಂಡಿದ್ದಾನಾ? (ಹಳಬರನ್ನು ಹೊರತುಪಡಿಸಿ). ಚಿತ್ರಕ್ಕೆ ಕತೆ ಆಯ್ಕೆ ಮಾಡಿಕೊಳ್ಳುವುದು ನಿರ್ದೇಶಕ ಮತ್ತು ನಿರ್ಮಾಪಕರು ಮಾಡುವಂತ ಕೆಲಸ. ನಿರ್ಮಾಪಕ ನಂಬಿಕೆಯಿಂದ, ಧೈರ್ಯದಿಂದ ನೀಡಿರುವ ಕೆಲಸಕ್ಕೆ ಯಾವ ನಿರ್ದೇಶಕ ನ್ಯಾಯ ಸಲ್ಲಿಸಿದ್ದಾನೆ ? ಚಿತ್ರ ಗೆಲುವು ಸಾಧಿಸುವುದು ಇರಲಿ. ಅಟ್ ಲೀಸ್ಟ್ ಸೋತಿರುವ ಸಿನಿಮಾದಲ್ಲಿ ಎಲ್ಲ ಅಂಶಗಳೂ ತಿರಸ್ಕಾರಕ್ಕೆ ಒಳಗಾಗಿರುವುದಿಲ್ಲ. ಸೋತರೇನಾಯಿತು ಓಕೆ ಅನ್ನುವ ಪಾಯಿಂಟ್ ಗಳೂ ಸಿಗುತ್ತಿಲ್ಲ. ಹಿಂಗಿದ್ದಾಗ ಹೆಂಗ್ರೀ ಸಿನಿಮಾ ಗೆಲ್ತವು ?

ಮಳೆಯಲಿ ಜೊತೆಯಲಿ, ರಾಮ್ ಚಿತ್ರಗಳು ಗೆದ್ದಿರೋದು ಚಿತ್ರಕತೆಯಿಂದಲ್ಲ. ಆ ಚಿತ್ರಗಳ ನಾಯಕರ ಸ್ಟಾರ್ ಗಿರಿಯಿಂದ. ವರ್ಷಕ್ಕೆ ಒಂದೇ ಒಂದು ಮುಂಗಾರು ಮಳೆ, ಒಂದು ಒಂದೇ ದುನಿಯಾ ತರಹದ ಚಿತ್ರಗಳು ಬರುತ್ತಿಲ್ಲ ಎನ್ನುವುದು ನೋವಿನ ಸಂಗತಿ. ಅದೇ ತಮಿಳು, ತೆಲುಗು ಚಿತ್ರರಂಗದಲ್ಲಿ ವರ್ಷಕ್ಕೆ ಒಂದು ಚಿತ್ರವಂತೂ ಮೆಗಾಹಿಟ್ ಖಂಡಿತ. ಆದರೆ, ನಾಲ್ಕು ವರ್ಷ ಕಳೆದವು ಈ ಎರಡು ಚಿತ್ರಗಳು ಬಂದು ಹೋಗಿ, ಆ ಪಾಟಿ ಜನಪ್ರಿಯ ಚಿತ್ರಗಳೆ ಇಲ್ಲ. ಹಿಂಗಾದ್ರ ಹೆಂಗ್ರಿ ಕನ್ನಡ ಚಿತ್ರರಂಗದ ಪರಿಸ್ಥಿತಿ ?

ಹೊಸ ಜಾಡಿನಡೆಗೆ ನಡೆಯುತ್ತಿರುವ ನಿರ್ದೇಶಕರ ಪೈಕಿ ಗುರುಪ್ರಸಾದ್ ಮೊದಲಿಗರು. ಆದರೆ, ಅಂತವರ ಚಿತ್ರಕ್ಕೆ ಕಲಾವಿದರ ಕೊರತೆ ? ಇದಕ್ಕೆ ಡೈರೆಕ್ಟರ್ ಸ್ಪೆಷಲ್ಲೇ ಚಿತ್ರವೇ ಉತ್ತಮ ಉದಾಹರಣೆ. ಉತ್ತಮ ಅಭಿರುಚಿ ಹಾಗೂ ಹೊಸಕಲ್ಪನೆಯನ್ನು ಹುಟ್ಟುಹಾಕುವಲ್ಲಿ ಗುರು ಒಬ್ಬರೆ ನಮಗೆ ಸದ್ಯಕ್ಕೆ ಕಾಣುತ್ತಿರುವ ಬೆಸ್ಟ್ ತಂತ್ರಜ್ಞ. ಗುರು ಸ್ಟಾರ್ ಗಿರಿ ಹೊಂದಿರುವ ನಾಯಕರೊಟ್ಟಿಗೆ ವಾಣಿಜ್ಯ ಚಿತ್ರಗಳನ್ನು ನಿರ್ದೇಶಿಸಲು ಮನಸ್ಸು ಮಾಡಿದರೆ ಏನಾದರೂ ನಿರೀಕ್ಷಿಸಬಹುದೇನೂ.

ಯೋಗರಾಜ್ ಭಟ್, ಸೂರಿ ಮನಸ್ಸು ಮಾಡಿದರೆ ಚಿತ್ರಪ್ರೇಮಿಗಳನ್ನು ಖುಷಿಗೊಳಿಸಬಹುದು. ಉಳಿದಂತೆ ಉಪೇಂದ್ರ ನಿರ್ದೇಶನಕ್ಕೆ ಮರಳಿದ್ದು ಸಂತೋಷದ ಸಂಗತಿ. ಅವರ ಸೂಪರ್ ಚಿನ್ಹೆಯ ಚಿತ್ರ ಏನಾದರೂ ಮ್ಯಾಜಿಕ್ ಮಾಡಬಹುದಾ ? ಈ ಮಧ್ಯೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರಾಗಿ ಬಸಂತ್ ಕುಮಾರ್ ಪಾಟೀಲ್ ಆಯ್ಕೆಯಾಗಿದ್ದಾರೆ. ಸೋತ ಸುಣ್ಣವಾಗಿರುವ ಚಿತ್ರರಂಗಕ್ಕೆ ಮುಲಾಮು ಬೇಕಿದೆ. ಗೌಡರು ಅಂತಹ ಮುಲಾಮನ್ನು ಎಲ್ಲಿಂದಾದರೂ ತಂದಾರೆಯೇ ನೋಡೋಣ ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X