• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಡಿದ್ದು ಹಾಡೋ ಕಿಸಬಾಯಿದಾಸ!

By *ಮೃತ್ಯುಂಜಯ ಕಲ್ಮಠ
|

ಬಿಬಿಎಂಪಿ ಚುನಾವಣೆ ಕೊನೆಗೂ ಮುಗಿದಿದೆ. ಕಳೆದ ಮೂರು ವರ್ಷದ ಆಡಳಿತಾಧಿಕಾರಿಗಳ ತೆಕ್ಕೆಯಲ್ಲಿದ್ದ ಬಿಬಿಎಂಪಿ ಕೀಲಿ ಏಪ್ರಿಲ್ 5ರಿಂದ ಜನಪ್ರತಿನಿಧಿಗಳ ಕೈಗೆ ಬರಲಿದೆ. ಬೇಸರದ ಸಂಗತಿಯೆಂದರೆ, ವಿದ್ಯಾವಂತರೇ ತುಂಬಿಕೊಂಡಿರುವ ಬೆಂಗಳೂರಿನಂತಹ ಮಹಾನಗರದಲ್ಲಿ ಶೇ.44 ರಷ್ಟು ಮತದಾನ ಆಗುವುದೆಂದರೆ ಅವಮಾನ ಮತ್ತು ಅಸಮಾಧಾನದ ಸಂಗತಿಯೇ ಸರಿ. ಆದರೆ, ಒಂದು ವರ್ಗದ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರುವುದಕ್ಕೆ ಪ್ರಮುಖ ಪಕ್ಷಗಳೂ ನೇರ ಕಾರಣ ಎನ್ನುವ ಮಾತು ಇದೆ.

ಮತದಾನ ನಮ್ಮ ಹಕ್ಕು. ಪ್ರತಿಯೊಬ್ಬರೂ ಮತದಾನವೆಂಬ ಮಹತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮ ಗಂಟಲು ಹರಿದುಕೊಂಡವು. ಸಾಲದ್ದಕ್ಕೆ ಸೆಲೆಬ್ರಿಟಿಗಳಿಂದ ಹೇಳಿಸಿದರೆ ಏನಾದರೂ ಪ್ರಯೋಜನವಾದೀತು ಎಂದು ಸಾಕಷ್ಟು ಪ್ರಯತ್ನಪಟ್ಟವು. ಇದರ ಜೊತೆಗೆ ಸರಕಾರ ಕೂಡಾ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ಹೇಳುತ್ತಲೇ ಬಂದಿತು. ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲರೂ ಮತದಾನ ಮಾಡಿ ಎಂದು ಮನವಿ ಮಾಡಿಕೊಂಡರು. ಆದರೆ ಏನಾದರೂ ಪ್ರಯೋಜನ ಆಯಿತಾ?

ಬೆಂಗಳೂರಿನ ವರ್ತೂರು ವಾರ್ಡ್ ನಲ್ಲಿ ಅತಿ ಹೆಚ್ಚು ಶೇ. 61 ರಷ್ಟು ಮತದಾನವಾದರೆ, ಅತಿ ಕಡಿಮೆ ಅಂದರೆ ಶೇ. 29ರಷ್ಟು ಮತದಾನ ಬೆಳ್ಳಂದೂರಿನಲ್ಲಿ ದಾಖಲಾಗಿದೆ. ಭಾನುವಾರ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಶೇ.44 ರಷ್ಟು ಮತದಾನವಾಗಿದೆ ಎಂದು ರಾಜ್ಯ ಚುನಾವಣೆ ಆಯೋಗದ ಅಧ್ಯಕ್ಷ ಸಿ ಆರ್ ಚಿಕ್ಕಮಠ ಹೇಳಿದ್ದಾರೆ. ಈ ಸಲವೂ ಮತದಾರರು ಮತದಾನ ಪ್ರಕ್ರಿಯೆಗೆ ನಿರ್ಲಕ್ಷ್ಯ ತೋರಿಸಿದ್ದಾರೆ ? ಏಕೆ ಎನ್ನುವುದು ಗೊತ್ತಾಗುತ್ತಿಲ್ಲ. ಈ ಬಗ್ಗೆ ಸರಕಾರ ಗಮನ ಹರಿಸಿದರೆ ಒಳಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಕಡಿಮೆ ಮತದಾನಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮತದಾನವನ್ನು ಕಡ್ಡಾಯ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸುವುದಾಗಿ ಹೇಳಿದ್ದಾರೆ. ಬೆಂಗಳೂರಿನ ಮತದಾರರು ಮತದಾನ ಏಕೆ ಮಾಡುತ್ತಿಲ್ಲ ಎನ್ನುವುದೇ ದೊಡ್ಡ ಸಮಸ್ಯೆಯಾಗಿದೆ. ರಸ್ತೆ, ನೀರು, ವಿದ್ಯುತ್ ಮತ್ತಿತರ ಮೂಲಭೂತ ಸೌಕರ್ಯಗಳು ಕೊರತೆಯಾದರೆ, ಬೊಬ್ಬೆ ಹಾಕುವ ಈ ಮಂದಿ ಮತದಾನಕ್ಕೆ ಮುಂದಾಗುತ್ತಿಲ್ಲ. ಹೀಗಿದ್ದಾಗ ಇವರಿಗೆ ಸಮಸ್ಯೆಗಳ ಬಗ್ಗೆ ಮಾತನಾಡುವ ಹಕ್ಕು ಇವರಿಗಿದೆಯೇ ? ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಕಡಿಮೆ ಮತದಾನ ದುರದೃಷ್ಟಕರ ಸಂಗತಿ ಎಂದು ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಬೇಸರ ವ್ಯಕ್ತಪಡಿಸಿದ್ದಾರೆ.

ಮತದಾನ ಪ್ರಕ್ರಿಯೆಯಲ್ಲಿ ಮಧ್ಯಮ, ಕೆಳವರ್ಗದ ಕುಟುಂಬಗಳು ಚಾಚು ತಪ್ಪದೆ ಪಾಲ್ಗೊಳ್ಳುತ್ತವೆ, ಅದಕ್ಕೆ ಕಾರಣ ಏನಾದರೂ ಇರಬಹುದು. ಸಕಲವೆಲ್ಲವನ್ನೂ ಹೊಂದಿ ಸಮಾಜದಲ್ಲಿ ಉತ್ತಮ ಜೀವನವನ್ನು ನಡೆಸುತ್ತಿರುವ ಮೇಲ್ಮಧ್ಯಮ ಮತ್ತು ಶ್ರೀಮಂತ ಕುಟುಂಬಗಳಲ್ಲೇಕೆ ಮತದಾನದ ಬಗ್ಗೆ ನಿರ್ಲಕ್ಷ್ಯ ಧೋರಣೆ. ಮನೆ ಮುಂದೆ ಕಸದ ತೊಟ್ಟಿ ಬಿದ್ದರೆ, ಹಿಂದೆ ಮುಂದೆ ನೋಡದೆ ನೇರವಾಗಿ ಬಿಬಿಎಂಪಿ ಕಚೇರಿಗೆ ಫೋನಾಯಿಸಿ ದಬಾಯಿಸುವ ಈ ಮಂದಿಗೆ ಮತದಾನ ಮಾಡಬೇಕು ಎಂಬ ಕನಿಷ್ಠ ತಿಳಿವಳಿಕೆ ಇಲ್ಲವೇ ? ರಜೆ ಸಿಕ್ಕರೆ ಸಾಕು ಮಜಾ ಉಡಾಯಿಸಲು ಪಿಕ್ ನಿಕ್ ಗೆ ಮತ್ತಿತರ ವಿಹಾರಕ್ಕೆ ತೆರಳುವ ಇವರಿಗೆ ತಮ್ಮನ್ನು ಆಳುವ ನಾಯಕರ ಆಯ್ಕೆಯ ಬಗ್ಗೆ ತಾತ್ಸರವೇಕೆ ?

ವಿದ್ಯಾವಂತರು ಬೇರೆ, ಕೈತುಂಬ ಸಂಬಳ ಬರುವ ಉದ್ಯೋಗ. ಮನೆ ಮಂದಿಯೆಲ್ಲಾ ದೊಡ್ಡ ದೊಡ್ಡ ನೌಕರಿ. ಕೈಗೊಂದು ಕಾಲಿಗೊಂದು ಆಳು. ತಿರುಗಾಡಲು ಕಾರು, ಭವ್ಯವಾದ ಜೀವನ ನಡೆಸುತ್ತಿದ್ದಾಗ ಸಮಾಜದ ಬಗ್ಗೆ ಅವರಿಗೇಕೆ ಕಾಳಜಿ ? ಈ ಮಾತು ಸ್ವಲ್ಪ ಕಠಿಣ ಎಂದು ಗೊತ್ತಿದ್ದರೂ ಈ ಸಂದರ್ಭದಲ್ಲಿ ಇವರು ಮಾಡುತ್ತಿರುವ ಕೆಲಸವನ್ನು ಖಂಡಿಸಲೇಬೇಕಿದೆ. ಯಾರು ಆರಿಸಿ ಬಂದ್ರೆ ಏನ್ಮಾಡ್ತಾರೆ ? ಅದೇ ಭ್ರಷ್ಟಾಚಾರ, ಸುಳ್ಳು ಭರವಸೆ, ಜನರನ್ನು ವಂಚಿಸುವ ಕೆಲಸ. ಇಂತವರಿಗೆ ನಾವು ನಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳಬೇಕಾ ? ಕ್ಷಮಿಸಿ, ಈಗಿರುವ ಪಕ್ಷಗಳ ಬಗ್ಗೆ ನಂಬಿಕೆ ಹೊರಟು ಹೋಗಿದೆ. ಅಭ್ಯರ್ಥಿಗಳ ಹಿನ್ನೆಲೆ ನೋಡಿದರಂತೂ ಬೇಡಪ್ಪ ಬೇಡ ಈ ಎಲೆಕ್ಷನ್ ಸಹವಾಸ ಅನಿಸುತ್ತೆ ? ಎನ್ನುವ ಮಾತು ಮೇಲ್ಮಧ್ಯಮ ವರ್ಗದಿಂದ ಸಾಮಾನ್ಯವಾಗಿವೆ.

ಹೌದು ಅವರು ಹೇಳುವುದರಲ್ಲಿ ತಪ್ಪಿಲ್ಲ. ಬಿಬಿಎಂಪಿ ಚುನಾವಣೆಯಲ್ಲಿ ಕಣಕ್ಕಿಳಿದ ಕೆಲ ಅಭ್ಯರ್ಥಿಗಳ ಇತಿಹಾಸ ಗಮನಿಸಿದರೆ ಈ ಪ್ರಶ್ನೆ ಉದ್ಭವಿಸುವುದು ಸಹಜ. ದಿವಾನ್ ಅಲಿ, ಮಾರಿಮುತ್ತು ಸೇರಿದಂತೆ ಕಣದಲ್ಲಿದ್ದವರ ಪೈಕಿ ಅನೇಕ ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಕೇಸ್ ಗಳಿವೆ. ಹೀಗಿರುವಾಗ ಮತದಾನ ಮಾಡಬೇಕು ಎಂದು ಮನಸ್ಸಿಗೆ ಬಂದರೂ ಕೂಡಾ ಯಾರಿಗೆ ಮತ ಹಾಕಬೇಕು ಎಂಬ ಆಯ್ಕೆಯೇ ದೊಡ್ಡ ಪ್ರಶ್ನೆಯಾಗುತ್ತದೆ. ನನ್ನ ಮತ ಯಾರಿಗೆ ಹಾಕಿದರೂ ಲಾಭವಿಲ್ಲ ಎಂದರಿತು ತಣ್ಣಗೆ ಮನೆಯಲ್ಲಿರುವುದು ಒಳ್ಳೆಯ ಕೆಲಸವಲ್ಲವೇ ಎನ್ನುವವರೇ ಸಾಕಷ್ಟು ಮಂದಿ.

ನಮ್ಮ ರಾಜಕೀಯ ಪಕ್ಷಗಳು ಇದರಿಂದ ಪಾಠ ಕಲಿಯಬೇಕಿದೆ. ತಮ್ಮ ಪಕ್ಷದಿಂದ ಅಖಾಡಕ್ಕಿಳಿಯುವ ಅಭ್ಯರ್ಥಿಗಳ ಇತಿಹಾಸ ಕೂಡ ಬಿಳಿ ಬಟ್ಟೆಯಂತಿರಬೇಕು. ಆತನಿಗೆ ಸಮಾಜದ ಬಗ್ಗೆ ಸಂಪೂರ್ಣ ಜ್ಞಾನ ಇರಬೇಕು. ಮಹಾನಗರ ಪಾಲಿಕೆ ಪ್ರತಿನಿಧಿಸುವ ಅಭ್ಯರ್ಥಿ ಯುವಕನಾಗಿರಬೇಕು, ಸಮಾಜದ ಕಳಕಳಿ ಹೊಂದಿರಬೇಕು. ಉತ್ತಮ ಕೆಲಸಗಾರನಾರಬೇಕು. ಕಡಿಮೆ ಭ್ರಷ್ಟನಾಗಿರಬೇಕು ಜೊತೆಗೆ ಕನಿಷ್ಠ ಪದವೀಧರನಾಗಿದ್ದರಂತೂ ಮತ ಕೇಳಲು ಧೈರ್ಯ ಬರಬಹುದು. ಮತ ಹಾಕುವವರು ಖುಷಿ ತಮ್ಮ ಮತ ಚಲಾಯಿಸಬಹುದು. ಒಟ್ಟಿನಲ್ಲಿ ಎಲ್ಲರೂ ಮತದಾನ ಮಾಡಬೇಕು. ಅಂತಹ ವಾತಾವರಣವನ್ನು ಕಲ್ಪಿಸುವ ಜವಾಬ್ದಾರಿ ಸರಕಾರದ ಮೇಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more