ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಾಪನ ಇಲಾಖೆ ನಕಾಶೆ ಕದ್ದ ಭೂಪರು ಸಿಕ್ಕಿಬಿದ್ದರು

By * ರೋಹಿಣಿ, ಬಳ್ಳಾರಿ
|
Google Oneindia Kannada News

Land and survey dept officials steal maps
ಬಳ್ಳಾರಿ, ಮಾ, 26 : ಭೂಮಾಪನ ಇಲಾಖೆಯ ಮೂಲ ನಕಾಶೆಗಳನ್ನು ಕದ್ದ ಆರೋಪ ಹೊತ್ತಿದ್ದ ಭೂಮಾಪನ ಇಲಾಖೆಯ ಮೂವರು ನಿವೃತ್ತ ನೌಕರರ ಮನೆ ಮೇಲೆ ಕಂದಾಯ ಇಲಾಖೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿ, ಇಬ್ಬರ ಬಳಿ ಇದ್ದಿದ್ದ ಇಲಾಖೆಯ ಮೂಲ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

ಹೊಸಪೇಟೆಯ ರಾಜೀವ್‌ನಗರ ನಿವಾಸಿ, ಭೂಮಾಪನ ಇಲಾಖೆಯ ನಿವೃತ್ತ ಮಾಪಕ ರಾಮಚಂದ್ರಸಿಂಗ್, ಪಟೇಲ್ ನಗರದಲ್ಲಿ ಇರುವ ಎಫ್.ಟಿ. ಜಾರ್ಜ್ ಮತ್ತು ಮುಫ್ತಾಪ್ ಖಾನ್ ಅವರ ಮನೆಗಳ ಮೇಲೆ ಹೊಸಪೇಟೆ ಸಹಾಯಕ ಆಯುಕ್ತ ಕಾಶಿನಾಥ ಪವಾರ್, ತಹಶೀಲ್ದಾರ್ ಪಿ.ಎಸ್. ಮಂಜುನಾಥ ಹಾಗೂ ಹಗರಿಬೊಮ್ಮನಹಳ್ಳಿ ತಹಶೀಲ್ದಾರ್ ನಫಾಜ್ ಅಲಿ ನೇತೃತ್ವದ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿವೆ.

ಹೊಸಪೇಟೆಯ ರಾಜೀವ ನಗರದಲ್ಲಿ ಇರುವ ಭೂಮಾಪನ ಇಲಾಖೆಯ ನಿವೃತ್ತ ನೌಕರ ರಾಮಚಂದ್ರ ಸಿಂಗ್ ಮನೆ ಮೇಲೆ ದಾಳಿ ನಡೆಸಿ ಡಣಾಯಕನಕೆರೆ, ನಂದಿ ಬಂಡಿ, ವರದಾಪುರ ಗ್ರಾಮಗಳ ಕಂದಾಯ ಭೂಮಿಯ ಮೂಲ ನಕ್ಷೆ, ದಾಖಲಾತಿ ಹಾಗೂ ಇನ್ನಿತರ ಮಾಹಿತಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ರಾಮಚಂದ್ರ ಸಿಂಗ್ 1993ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಆಗಿದ್ದರು.

ಹೊಸಪೇಟೆಯ ಪಟೇಲ್ ನಗರದಲ್ಲಿ ಇರುವ ಎಫ್.ಟಿ. ಜಾರ್ಜ್ ಅವರ ಮನೆ ಮೇಲೆ ಕೂಡ ದಾಳಿ ನಡೆಸಿದ ಈ ತಂಡ, ಹೊಸಪೇಟೆಯ ನಾರಾಯಣದೇವರ ಕೆರೆ, ಹಲಗಾಪುರದ ಮೂಲ ನಕಾಶೆಗಳು, ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡರು. ಎಫ್.ಟಿ. ಜಾರ್ಜ್ 1984ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದರು.

ಈ ಇಬ್ಬರ ಬಳಿ ಮೂಲ ನಕಾಶೆಗಳು ಸೇರಿದಂತೆ ಮೂಲ ದಾಖಲೆಗಳಾದ ಗಟ್ ಪ್ಲಾಟ್, ಎಫ್.ಎಂ.ಬಿ. ಪ್ರತಿಗಳು ಸಿಕ್ಕಿವೆ. ಪಟೇಲ್ ನಗರದಲ್ಲಿರುವ ಭೂಮಾಪನ ಇಲಾಖೆಯ ಇನ್ನೊಬ್ಬ ನಿವೃತ್ತ ನೌಕರ ಮುಫ್ತಾಪ್ ಖಾನ್ ಮನೆಯ ಮೇಲೆ ದಾಳಿ ನಡೆಸಿದರೂ ಯಾವುದೇ ಮಹತ್ವದ ದಾಖಲೆಗಳು ಲಭ್ಯವಾಗಿಲ್ಲ.

ಹಗರಿಬೊಮ್ಮನಹಳ್ಳಿಯ ತಹಶೀಲ್ದಾರ್ ನಫಾಜ್ ಅಲಿ ತಮ್ಮ ಬಳಿ ಸಮಸ್ಯೆಯನ್ನು ಹೊತ್ತ ಬಂದ ರೈತರೊಬ್ಬರಿಗೆ ಮೂಲ ನಕಾಶೆ ಬೇಕು ಎಂದು ಹೇಳಿದ್ದರು. ಮೂಲ ನಕಾಶೆ ಭೂಮಾಪನ ಇಲಾಖೆಯಲ್ಲಿ ಲಭ್ಯವಿಲ್ಲದಿದ್ದರೂ ನಕಾಶೆಯ ಜೆರಾಕ್ಸ್ ತಂದಿದ್ದರಿಂದ ಅನುಮಾನಗೊಂಡು ವಿಚಾರಿಸಿದಾಗ, ಇಲಾಖೆಯ ನಿವೃತ್ತ ಭೂಮಾಪಕರು ನಕಲು' ಪ್ರತಿಗಳನ್ನು ಸಾವಿರಾರು ರುಪಾಯಿಗಳನ್ನು ಪಡೆದು ನೀಡಿರುವುದಾಗಿ ರೈತನು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದನು.

ಹಗರಿಬೊಮ್ಮನಹಳ್ಳಿಯ ತಹಸೀಲ್ದಾರ್ ಕೂಡಲೇ ಹೊಸಪೇಟೆಯ ಸಹಾಯಕ ಆಯುಕ್ತ ಕಾಶಿನಾಥ ಪವಾರ್ ಹಾಗೂ ಹೊಸಪೇಟೆಯ ತಹಶೀಲ್ದಾರ್ ಪಿ.ಎಸ್. ಮಂಜುನಾಥ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದರು. ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ದಾಖಲಾತಿಗಳನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X