ನಕ್ಸಲ್ ಚಟುವಟಿಕೆ ಹತ್ತಿಕ್ಕುವಲ್ಲಿ ಸರ್ಕಾರ ವಿಫಲ
ಹಾಸನ, ಫೆ. 27: ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ದಮನ ಮಾಡುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನಕ್ಸಲ್ ಚಟುವಟಿಕೆ ತಾಣಗಳ ಮಾಹಿತಿ ಕಲೆ ಹಾಕುವಲ್ಲೂ ಸರ್ಕಾರ ವಿಳಂಬ ಧೋರಣೆ ಅನುಸರಿಸಿದೆ ಎಂದು ರಾಜ್ಯ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಹಾಗೂ ಸಂಸದ ಡಿವಿ ಸದಾನಂದ ಗೌಡ ಅಭಿಪ್ರಾಯಪಟ್ಟಿದ್ದಾರೆ.
ನಕ್ಸಲ್ ಚಟುವಟಿಕೆ ಬಗ್ಗೆ ಮಾಹಿತಿ ಕಲೆ ಹಾಕಿ, ಕೇಂದ್ರ ಸರ್ಕಾರಕ್ಕೆ ತಿಳಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ನಕ್ಸಲ್ ಪೀಡಿತ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಹೆಸರು ಕಾಣಿಸಿಕೊಂಡಿಲ್ಲ. ಹೀಗಾದರೆ, ರಾಜ್ಯಕ್ಕೆ ಸಿಗುವ ಅನುದಾನ ಖೋತಾ ಆಗುವ ಸಂಭವವಿದೆ.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಹೆಚ್ಚು ಮಾಡಿ, ನಕ್ಸಲರನ್ನು ಮುಖ್ಯ ವಾಹಿನಿಗೆ ಕರೆತರುವ ಕಾರ್ಯ ತುರ್ತಾಗಿ ಆಗಬೇಕಿದೆ ಎಂದು ಸುದ್ದಿಗಾರರಿಗೆ ಸದಾನಂದ ಗೌಡ ಹೇಳಿದರು. ರಾಜ್ಯದಲ್ಲಿ ಹೆಚ್ಚುತ್ತಿರುವ ನಕ್ಸಲ್ ಹಾವಳಿಯ ಬಗ್ಗೆ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಡುವ ಪತ್ರವನ್ನು ಇತ್ತೀಚೆಗೆ ಕಾರವಾರದ ಸಂಸದ ಅನಂತ್ ಕುಮಾರ್ ಹೆಗಡೆ ಸಲ್ಲಿಸಿದ್ದರು.











Click it and Unblock the Notifications