ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕರ್ನಾಟಕದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

By * ಟಿ. ಜಿ. ಶ್ರೀನಿಧಿ
|
Google Oneindia Kannada News

Sir CV Raman
ಬೆಂಗಳೂರು, ಫೆ. 22 : ರಾಷ್ಟ್ರೀಯ ವಿಜ್ಞಾನ ದಿನ 2010 ರ ಸಂದರ್ಭದಲ್ಲಿ ಗುಲಬರ್ಗಾದ ಡಾ.ಪಿ ಎಸ್ ಶಂಕರ್ ಪ್ರತಿಷ್ಠಾನ, ಬೀದರದ ಬಿ ವಿ ಭೂಮರೆಡ್ಡಿ ಮಹಾವಿದ್ಯಾಲಯ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ಉತ್ತರ ಕರ್ನಾಟಕದ ಹಲವೆಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಫೆಬ್ರುವರಿ 23 ರಂದು ಯಾದಗಿರಿ, 24 ರಂದು ಬೀದರ, ಮಾರ್ಚ್ 2 ರಂದು ಬಳ್ಳಾರಿ, 3 ರಂದು ರಾಯಚೂರು ಗಂಗಾವತಿ ಹಾಗೂ 4 ರಂದು ಗುಲಬರ್ಗಾದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ.

1928 ಫೆಬ್ರವರಿ 28, ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರು 'ರಾಮನ್ ಪರಿಣಾಮ' ಎಂದೇ ಪ್ರಸಿದ್ಧವಾದ ತಮ್ಮ ಸಂಶೋಧನೆಯ ವಿವರಗಳನ್ನು ಜಗತ್ತಿಗೆ ತಿಳಿಸಿದ ದಿನ. ಕೋಲ್ಕತಾದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್‌ನಲ್ಲಿ ರಾಮನ್ ಅವರು ತಮ್ಮ ಸಹೋದ್ಯೋಗಿಗಳೊಡನೆ ನಡೆಸಿದ ಸಂಶೋಧನೆಗಳ ಪರಿಣಾಮವೇ ಈ ಅಪೂರ್ವ ಸಂಶೋಧನೆ. ಇದೇ ಸಂಶೋಧನೆಗಾಗಿ ಅವರಿಗೆ 1930 ನೇ ಇಸವಿಯಲ್ಲಿ ನೋಬೆಲ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊಟ್ಟಮೊದಲ ನೋಬೆಲ್ ಪುರಸ್ಕಾರವೂ ಹೌದು.

ಒಮ್ಮೆ ಹಡಗಿನಲ್ಲಿ ಪ್ರಯಾಣಿಸುವಾಗ ರಾಮನ್ ಅವರಿಗೆ ಸಮುದ್ರ ಏಕೆ ಯಾವಾಗಲೂ ನೀಲಿಯಾಗಿಯೇ ಕಾಣುತ್ತದೆ ಎಂಬ ಪ್ರಶ್ನೆ ಎದುರಾಯಿತಂತೆ. ಅದು ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೇನಾದರೂ ಗುಟ್ಟು ಅಡಗಿದೆಯೋ ಎಂದು ಪತ್ತೆಮಾಡಲು ಹೊರಟ ರಾಮನ್ ಸೂರ್ಯನ ಬೆಳಕು ನೀರಿನಲ್ಲಿ ಹರಡಿಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯವನ್ನು ಕಂಡುಹಿಡಿದರು. ಇದೇ ಅಂಶ ಮುಂದೆ 'ರಾಮನ್ ಪರಿಣಾಮ'ದ ಸಂಶೋಧನೆಗೆ ಪ್ರೇರಣೆಯಾಯಿತು.

'ರಾಮನ್ ಪರಿಣಾಮ' ಸಂಶೋಧನೆಯ ವಿವರಗಳು ಪ್ರಕಟವಾದ ಆ ಚಾರಿತ್ರಿಕ ದಿನದ ನೆನಪಿನಲ್ಲಿ ಪ್ರತಿ ವರ್ಷ ಫೆಬ್ರವರಿ 28ನೇ ದಿನಾಂಕವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶಗಳಲ್ಲೊಂದು.

ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ, ಜೈವಿಕ ತಂತ್ರಜ್ಞಾನ, ವೈದ್ಯವಿಜ್ಞಾನ .. ಹೀಗೆ ಅನೇಕ ಕ್ಷೇತ್ರಗಳಲ್ಲಿ ಇಂದು ಭಾರತೀಯ ವಿಜ್ಞಾನಿಗಳು ಅಪಾರ ಸಾಧನೆ ಮಾಡಿದ್ದಾರೆ. ವಿಜ್ಞಾನದ ಬೆಳೆವಣಿಗೆ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದ ಸ್ವಾತಂತ್ರ್ಯಪೂರ್ವದ ದಿನಗಳಿಂದ ಪ್ರಾರಂಭಿಸಿ ಇಂದಿನವರೆಗೆ ನಮ್ಮ ದೇಶ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯ ಪರಿಚಯವನ್ನು ಎಲ್ಲರಿಗೂ ಮಾಡಿಕೊಡುವುದು ಈ ಆಚರಣೆಯ ಇನ್ನೊಂದು ಆಶಯ.

ಪ್ರತೀ ವರ್ಷ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಚಟುವಟಿಕೆಗಳನ್ನು ಒಂದು ನಿರ್ದಿಷ್ಟ ವಿಷಯದ ಸುತ್ತ ಆಯೋಜಿಸಲಾಗುತ್ತದೆ. ಜೀವವೈವಿಧ್ಯ : ಇದು ಈ ವರ್ಷದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಗಾಗಿ ಆಯ್ಕೆಯಾಗಿರುವ ವಿಷಯ. ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ರಸಪ್ರಶ್ನೆ, ವಸ್ತುಪ್ರದರ್ಶನ ಹೀಗೆ ಈ ವಿಷಯಕ್ಕೆ ಸಂಬಂಧಪಟ್ಟ ಅನೇಕ ಚಟುವಟಿಕೆಗಳನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂದರ್ಭದಲ್ಲಿ ದೇಶದ ವಿವಿಧೆಡೆಗಳಲ್ಲಿ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X