• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿರಿಯನಟ ಕೆಎಸ್ ಅಶ್ವಥ್ (1925-2010)

|

ಸುಮಾರು ಐದು ದಶಕಗಳ ಅವಧಿಯಲ್ಲಿ 370 ಕ್ಕಿಂತಲೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಜನಪ್ರಿಯ ನಟ. ಶಿಸ್ತು, ಸಮಯಪಾಲನೆ, ಸುಸಂಸ್ಕೃತ ನಡವಳಿಕೆಯಿಂದ ಚಿತ್ರ ನಿರ್ಮಾಣವಲಯದಲ್ಲಿ ಎಲ್ಲರ ಅಭಿಮಾನಕ್ಕೆ ಪಾತ್ರರಾದ ವ್ಯಕ್ತಿ ಕೆಎಸ್ ಅಶ್ವತ್ಥ್. 1995ರಲ್ಲಿ ಅಶ್ವತ್ಥ್ ಚಿತ್ರರಂಗಕ್ಕೆ ವಿದಾಯ ಹೇಳಿದ್ದರು. ಅದು ಅವರ ಅಭಿಮಾನಿ ಪ್ರೇಕ್ಷಕರಿಗೆ ಅಘಾತವಾಗಿತ್ತು. ಆದರೆ ಶಬ್ದವೇಧಿ' ಚಿತ್ರದ ಮೂಲಕ ಅವರ ಪುನರಾಗಮನವನ್ನು ಜನರು ಸಂಭ್ರಮದಿಂದ ಸ್ವಾಗತಿಸಿದ್ದರು. ಆದರೆ, ಇಂದಿನ ಚಿತ್ರರಂಗದ ಗುಣಮಟ್ಟ ಕುಗ್ಗುತ್ತಿರುವ ಬಗ್ಗೆ ಅಶ್ವಥ್ ಅವರಿಗೆ ಅಪಾರ ವೇದನೆಯಾಗಿತ್ತು.

ಅಶ್ವಥ್ ಅವರ ಹಿರಿಯರು ಹೊಳೆನರಸೀಪುರ ತಾಲ್ಲೂಕಿನ ಕರಗದಹಳ್ಳಿಯವರು. ತಂದೆ ಸುಬ್ಬರಾಯರು. ಮಾರ್ಚ್ 25, 1925 ರಲ್ಲಿ ಜನನ. ಮೊದಲ ಹೆಸರು ಅಶ್ವತ್ಥನಾರಾಯಣ. ಚಿತ್ರರಂಗಕ್ಕೆ ಬಂದ ನಂತರ ನಾರಾಯಣ ಕಳಚಿಕೊಂಡಿತು. ಓದಿದ್ದು ಇಂಟರ್‌ಮೀಡಿಯಟ್‌ವರೆಗೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಹಭಾಗಿ, ಆಹಾರ ಇಲಾಖೆಯಲ್ಲಿ ನೌಕರಿ(1944), ನಾಟಕದ ಗೀಳು, ಆಕಾಶವಾಣಿಯಲ್ಲಿ ನಾಟಕ ವಿಭಾಗದಲ್ಲಿ ದುಡಿಮೆ; ನಾಟಕ ವಿಭಾಗದ ಮುಖ್ಯಸ್ಥರಾಗಿದ್ದ ಎನ್.ಎಸ್. ವಾಮನರಾಯರಿಂದ ಅಭಿನಯದಲ್ಲಿ ತರಬೇತಿ ಪಡೆಯುವ ಅವಕಾಶ ಲಭ್ಯ. ಅಶ್ವತ್ಥ್ ಅವರಿಗೆ ಚಲನಚಿತ್ರ ಸೇರಬೇಕೆಂಬ ಕಲ್ಪನೆಯೇ ಇರಲಿಲ್ಲ. ಅವಕಾಶ ಅದಾಗಿಯೇ ಬಂದಿತು.

ನಾಟಕದಲ್ಲಿನ ಇವರ ಅಭಿನಯ ನೋಡಿ ಮೆಚ್ಚಿದ ಹಿರಿಯ ನಿರ್ದೇಶಕ ಕೆ.ಸುಬ್ರಹ್ಮಣ್ಯಂ ಅವರಿಂದ ಚಿತ್ರರಂಗಕ್ಕೆ ಆಹ್ವಾನ. ಮೈಸೂರಿನ ಪ್ರಿಮಿಯರ್‌ನಲ್ಲಿ ತಯಾರಾದ, ಭಾಗಶಃ ವರ್ಣದಲ್ಲಿ ಚಿತ್ರಣವಾದ ಸ್ತ್ರೀ ರತ್ನ'(1955) ಚಿತ್ರದಲ್ಲಿ ನಾಯಕ. ಸ್ತ್ರೀ ರತ್ನ' ಚಿತ್ರದ ನಂತರ, ಚಿತ್ರರಂಗದಲ್ಲೆ ಮುಂದುವರೆಯುವ ನಿರ್ಧಾರ. ಆದರೆ ಆ ಅವಧಿಯಲ್ಲಿ ಕನ್ನಡ ಚಿತ್ರ ನಿರ್ಮಾಣ ಚಟುವಟಿಕೆ ಮಂದಗತಿಯಲ್ಲಿ ಸಾಗಿತ್ತು. ಆದರೂ ಚಿತ್ರರಂಗದ ಅಭಿನಯವನ್ನೇ ವೃತ್ತಿಯಾಗಿ ಸ್ವೀಕರಿಸಲು ಸಂಕಲ್ಪಿಸಿದ್ದ ಅಶ್ವತ್ಥ್, ಆಗ ಕನ್ನಡ ಚಿತ್ರ ನಿರ್ಮಾಣದ ಕೇಂದ್ರವಾಗಿದ್ದ ಮದರಾಸಿನಲ್ಲೇ ನೆಲೆಸಲು ನಿರ್ಧರಿಸಿದರು. ನಾಯಕ ಪಾತ್ರಗಳಿಂದ ಸರಿದು ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಸಂಕಲ್ಪ ಮಾಡಿದರು (1960). ಈ ನಿರ್ಧಾರವೂ ಯೋಗ್ಯವಾದುದೇ. ಇದರಿಂದ ಅವರ ಬಹುಮುಖ ಪ್ರತಿಭೆಯು ಪ್ರಕಾಶಕ್ಕೆ ಮುಕ್ತ ಅವಕಾಶ ದೊರೆಯಿತು.

ಗ್ಯಾಲರಿ: ಮೇರುನಟ ಅಶ್ವಥ್ ಚಿತ್ರಸಂಪುಟ

ಆರಂಭದದಿನಗಳಲ್ಲಿ ತಯಾರಾಗುತ್ತಿದ್ದದು ಹೆಚ್ಚಾಗಿ ಪೌರಾಣಿಕ ಹಾಗೂ ಭಕ್ತಿ ಪ್ರಧಾನ ಚಿತ್ರಗಳು. ಪೌರಾಣಿಕ ಭಕ್ತಿ ಪ್ರಧಾನ ಚಿತ್ರಗಳಲ್ಲಿ ನಾರದನ ಪಾತ್ರಗಳು ಅರಸಿ ಬಂದವು. ಮಹಿಷಾಸುರ ಮರ್ದಿನಿ', ಸ್ವರ್ಣಗೌರಿ', ಭಕ್ತ ಪ್ರಹ್ಲಾದ', ದಶಾವತಾರ', ನಾಗಾರ್ಜುನ'-ಇವೇ ಮೊದಲಾದ ಚಿತ್ರಗಳಲ್ಲಿ ಅಶ್ವತ್ಥ್ ಅವರ ನಾರದನ ಪಾತ್ರ ಜನಮೆಚ್ಚುಗೆ ಪಡೆಯಿತು.ಅಶ್ವತ್ಥ್ ವೈವಿಧ್ಯಮಯ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ; ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಜನರಿಗೆ ಅಪ್ತವಾದುದು ತಂದೆಯ ಪಾತ್ರ; ಮನೆಯ ಹಿರಿಯಣ್ಣನ ಪಾತ್ರ, ಗಾಳಿಗೋಪುರ' ಚಿತ್ರದಿಂದ ಶಾಶ್ವತವಾಗಿ ಪ್ರಧಾನ ಪೋಷಕ ಪಾತ್ರಗಳಿಗೆ ಆಯ್ಕೆ. ನಾಗರಹಾವು' ಚಿತ್ರದ ಚಾಮಯ್ಯ ಮೇಸ್ಟ್ರು, ಮಕ್ಕಳಿಲ್ಲದ ಮೇಸ್ಟ್ರು. ತಾನು ಅತಿಯಾಗಿ ಪ್ರೀತಿಸುವ ತಂಟೆಕೋರ ವಿದ್ಯಾರ್ಥಿ. ಇವರಿಬ್ಬರ ನಡುವಣ ಮಾನವೀಯ ಸಂಬಂಧಗಳು, ಸಮಸ್ಯೆಗಳು, ದುರಂತದಲ್ಲಿ ಕೊನೆಗೊಳ್ಳುವ ಈ ಚಿತ್ರದಲ್ಲಿ ಮನಮಿಡಿಯುವಂತಹ ಅಭಿನಯ. ಕಸ್ತೂರಿ ನಿವಾಸ'ದ ನಿಷ್ಠಾವಂತ ಸೇವಕ ರಾಮಯ್ಯ, ಮಗ ಮೊಮ್ಮಗ', ತಂದೆ-ಮಕ್ಕಳು' ಚಿತ್ರದಲ್ಲಿ ತಂದೆಯಾಗಿ ನೀಡಿರುವ ಮನ ಮುಟ್ಟುವ ಅಭಿನಯ. ಸರ್ವಮಂಗಳ' ಚಿತ್ರದಲ್ಲಿ ಕುರೂಪಿ ಸುಬ್ಬರಾಯನ ಪಾತ್ರ, ಅಶ್ವತ್ಥ್ ಅವರ ಅಪ್ರತಿಮ ಪ್ರತಿಭೆಯ, ಭಾವಪೂರ್ಣ ಅಭಿನಯಕ್ಕೆ ಇವು ಕೆಲವು ನಿದರ್ಶನಗಳು.

ಕುಟುಂಬದ ಯಜಮಾನ, ಒಲವಿನ ಸೋದರ, ತಂದೆ ಮೊದಲಾದ ಸಜ್ಜನಿಕೆಯ ಪಾತ್ರಗಳ ಜೊತೆಗೆ ಹಾಸ್ಯ ಪಾತ್ರಗಳಲ್ಲೂ ಖಳನಾಯಕನ ಪಾತ್ರಗಳಲ್ಲೂ ಅವರು ಸಹಜವಾಗಿ ಅಭಿನಯಿಸಿದ್ದಾರೆ. ಪುಟ್ಟ ಪಾತ್ರಗಳಲ್ಲಿ ಚೊಕ್ಕ ಅಭಿನಯ ಇದು ಅವರ ಹಿರಿಮೆ. ಪ್ರಧಾನ ಪೋಷಕ ಚಿತ್ರಗಳಲ್ಲಿ ಅಶ್ವತ್ಥ-ಪಂಢರಿಬಾಯಿ ಜೋಡಿ ಅತ್ಯಂತ ಜನಪ್ರಿಯ. ನಮ್ಮ ಮಕ್ಕಳು', ನಾಗರಹಾವು', ಮುತ್ತಿನಹಾರ' ಚಿತ್ರಗಳ ಅಭಿನಯಕ್ಕಾಗಿ ಶ್ರೇಷ್ಠ ಪೋಷಕ ನಟ'ರಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ತಮ್ಮ ಅಭಿನಯ,ಗಾಯನದಿಂದ ಕನ್ನಡ ಚಲನ ಚಿತ್ರೋದ್ಯಮಕ್ಕೆ ಘನತೆ, ಸ್ಥಿರತೆ ತಂದ ಡಾ.ರಾಜಕುಮಾರ್ ಹೆಸರಿನಲ್ಲಿ ಸರಕಾರ ಚಲನಚಿತ್ರರಂಗಕ್ಕೆ ಅಮೋಘ ಸೇವೆ ಸಲ್ಲಿಸಿದವರಿಗೆ 1993-94ನೇ ಸಾಲಿನಿಂದ ಪ್ರಶಸ್ತಿ ನೀಡುತ್ತಿದೆ. ಈ ಪ್ರಶಸ್ತಿಗೆ ಭಾಜನರಾದ ಪ್ರಪ್ರಥಮ ನಟ ಕೆ.ಎಸ್. ಅಶ್ವತ್ಥ್. ಕನ್ನಡ ಚಿತ್ರರಂಗದಲ್ಲಿ ಅಶ್ವಥವೃಕ್ಷದಂತೆ ಅಜರಾಮರವಾಗಿ ಅವರ ಹೆಸರು ಉಳಿಯುವುದಂತೂ ಸತ್ಯ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more