ಬೆಂಗಳೂರು ದರ್ಶಿನಿ ಹೋಟೆಲ್ ಚಿರಂಜೀವಿ ಭವ

ವೇಗದ ಹಿಂದೆ, ಸಮಯದ ಹಿಂದೆ ಓಡುತ್ತಿರುವ ಬೆಂಗಳೂರಿಗರು ಲಘು ಉಪಾಹಾರ ಒದಗಿಸುವ ದರ್ಶಿನಿಗಳಲ್ಲಿ ತಿಂಡಿಗಳನ್ನು ತಿನ್ನದೆ ಅನ್ಯ ಮಾರ್ಗವಿಲ್ಲ. ನೀವು ದರ್ಶಿನಿಯಲ್ಲಿ ಕಾಫಿ ಕುಡಿಯುತ್ತೀರಾ ತಾನೆ? ಬೆಂಗಳೂರಿನಲ್ಲಿ ನೆಲೆಸಿರುವ ಹತ್ತತ್ರ ಒಂದು ಕೋಟಿ ಜನರಲ್ಲಿ ಸುಮಾರು 70 ಲಕ್ಷ ಮಂದಿ ಈ ದರ್ಶಿನಿಗಳನ್ನು ಆಶ್ರಯಿಸಿದ್ದಾರೆ. ಬೆಳಗ್ಗೆ ಎದ್ದ ತಕ್ಷಣ ಮನೆಯಲ್ಲಿ ತಿಂಡಿ ಮಾಡುವುದು ತಡವಾದರೆ ನಮಗೆ ತಕ್ಷಣ ನೆನಪಾಗುವುದು ದರ್ಶಿನಿಗಳು. ಬಿಸಿಬಿಸಿ ಎರಡು ಇಡ್ಲಿ, ವಡಾ, ದೋಸೆ, ಪೂರಿಗಳನ್ನು ಮೆಲ್ಲುವುದೇ ಒಂದು ಮಹಾದಾನಂದ ಮತ್ತು ಅನಿವಾರ್ಯ ಕೂಡ. ಶುಚಿ ಮತ್ತು ರುಚಿಗೆ ಇನ್ನೊಂದು ಹೆಸರೇ ಈ ದರ್ಶಿನಿಗಳು.
ಈ ಪಾಟಿ ಜನಪ್ರಿಯತೆ ಗಳಿಸಿಕೊಂಡಿದ್ದ ದರ್ಶಿನಿಗಳು ಬಾಗಿಲು ಮುಚ್ಚುತ್ತಿರುವುದೇಕೆ? ಬೆಂಗಳೂರಿನ ಗಲ್ಲಿಗಲ್ಲಿಯಲ್ಲಿ ತಲೆಎತ್ತಿದ್ದ ಈ ದರ್ಶಿನಿಗಳು ಕಾಣೆಯಾಗಲು ಕಾರಣ ಹುಡುಕ ಹೊರಟರೆ ಸಿಕ್ಕ ಉತ್ತರ ಆಹಾರಧಾನ್ಯಗಳ ಧಾರಣೆಗಳು ಗಗನಕ್ಕೇರಿವೆ ನಿಜ. ಸಮರ್ಥ ಅಡುಗೆ ಭಟ್ಟರ ಕೊರತೆ. 6000 ರು. ಸಂಬಳ ಕೊಟ್ಟರೂ ದೋಸೆ ಭಟ್ಟರು ಸಿಗುವುದಿಲ್ಲ. ದೋಸೆ ಹಾಕುವವರು ಚೈನೀಸ್ ಅಡುಗೆ, ಉತ್ತರ ಭಾರತದ ಅಡುಗೆ ಮಾಡಲು ಹೋಗಿರುವುದರಿಂದ ಉಂಟಾದ ಪರಿಸ್ಥಿತಿ ಇದು. ಭಟ್ಟರು ಸಿಕ್ಕರೂ ಉತ್ತಮ ಅಡುಗೆ ಭಟ್ಟನ ಬೇಡಿಕೆಗಳನ್ನು ಈಡೇರಿಸಲು ದರ್ಶಿನಿಗಳ ಮಾಲೀಕರಿಗೆ ಸಾಧ್ಯವಾಗುವುದಿಲ್ಲ ಎನ್ನುವ ಉತ್ತರ ಸಿಕ್ಕುತ್ತದೆ.
ಇತ್ತೀಚಿನ ದಿನಗಳಲ್ಲಿ ಆಹಾರಧಾನ್ಯಗಳು ಬೆಲೆ ಆಕಾಶ ಕಂಡಿವೆ. ಮಳಿಗೆ ಬಾಡಿಗೆ, ಕೂಲಿಗಳು ಅಭಾವ, ಅಡುಗೆ ಭಟ್ಟರ ಕೊರತೆ ಈ ಕಾರಣಗಳಿಂದ ಬೆಂಗಳೂರಿನಲ್ಲಿ ದರ್ಶಿನಿಗಳು ಕಣ್ಮುಚ್ಚಲು ಕಾರಣ ಎನ್ನುವುದು ಕರ್ನಾಟಕ ರಾಜ್ಯ ಹೋಟೆಲ್ ಮತ್ತು ಬಾರ್ ಆಸೋಸಿಯೇಷನ್ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ ಅನಿಸಿಕೆ.
ಎಲ್ಲೋ ಕೆಲವು ದರ್ಶಿನಿಗಳು ಬಾಗಿಲು ಮುಚ್ಚಿರಬಹುದು. ಆದರೆ, ರುಚಿ ಮತ್ತು ಶುಚಿಯಿಂದ ಮಾಡುವ ತಿಂಡಿ ಮಳಿಗೆಗಳಿಗೆ ಯಾವತ್ತೂ ನಷ್ಟವಾಗುವುದಿಲ್ಲ ಎನ್ನುತ್ತಾರೆ ಶಿವಾಜಿನಗರದ ಶಾಂಭವಿ ಉಪಾಹಾರ ಮಂದಿರದ ಮಾಲೀಕ ನಾಗರಾಜ ತಂತ್ರಿ. ಆರ್ಥಿಕ ಬಿಕ್ಕಟ್ಟಿನಿಂದ ಉದ್ಯೋಗಗಳು ನಷ್ಟವಾಗಿ ಪೇಯಿಂಗ್ ಗೆಸ್ಟ್ ಹೌಸುಗಳು ಖಾಲಿಯಾಗಿವೆ, ಇದರಿಂದಾಗಿ ಕೆಲವು ಹೋಟೆಲುಗಳು ಮುಚ್ಚಿರುವುದು ನಿಜ ಎನ್ನುತ್ತಾರೆ ಬನ್ನೇರುಘಟ್ಟ ರಸ್ತೆಯ ರಿಯಲ್ ಎಸ್ಟೇಟ್ ಏಜೆಂಟ್ ಮಾರುತಿ. ಇದಲ್ಲದೆ ಕಾರ್ಪೋರೇಷನ್ ಆರೋಗ್ಯ ಅಧಿಕಾರಿಗಳ ಲಂಚದಾಸೆ, ಪಾರ್ಕಿಂಗ್ ರಾಜಕೀಯಕ್ಕೆ ಬಲಿಯಾದ ಹೋಟೆಲುಗಳ ಉದಾಹರಣೆಯನ್ನು ಅವರು ಮುಂದಿಡುತ್ತಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಳ ಹೋಟೆಲ್ ಸಂಘದ ಅಧ್ಯಕ್ಷ, ಅಡಿಗಾಸ್ ಹೋಟೆಲು ಖ್ಯಾತಿಯ ವಾಸುದೇವ್ ಅಡಿಗ ಅವರ ಹೇಳುವುದೇ ಬೇರೆ. ದರ್ಶಿನಿಗಳಿಗೆ ಹೋಟೆಲ್ ಗಳಿಗೆ ಬಲವಾದ ಪೆಟ್ಟು ನೀಡಿದವರು ಫುಟ್ ಪಾಟ್ ನಲ್ಲಿ ದೂಡುವ ಗಾಡಿಯಲ್ಲಿ ತಿಂಡಿ ಮಾರಾಟ ಮಾಡುವವರು. ಕಮ್ಮಿ ಬೆಲೆಯಲ್ಲಿ ತಿಂಡಿಗಳನ್ನು ಫುಟ್ ಪಾತ್ ವ್ಯಾಪಾರಿಗಳು ನೀಡುತ್ತಿರುವುದರಿಂದ ಕೆಳಮಧ್ಯಮ ಮತ್ತು ಕೂಲಿ ಕಾರ್ಮಿಕರು ಫುಟ್ ಪಾಟ್ ವ್ಯಾಪಾರಿಗಳನ್ನು ಕಡೆ ವಾಲಿದ್ದು, ದರ್ಶಿನಿಗಳಿಂದ ಭಾರಿ ಹೊಡೆತ. ಟೈ ಹಾಕಿಕೊಂಡವರು ಕೂಡ ಫುಟ್ ಪಾತ್ ನಲ್ಲಿ ತಿಂಡಿ ತಿನ್ನಲು ಹಿಂದೆಮುಂದೆ ನೋಡುತ್ತಿಲ್ಲ. ಇದರ ಜೊತೆಗೆ ಮಳಿಗೆ ಬಾಡಿಗೆ, ನೀರು, ವಿದ್ಯುತ್, ಗ್ಯಾಸ್ ಹಾಗೂ ತೆರಿಗೆ ಈ ಎಲ್ಲವುಗಳನ್ನೂ ದರ್ಶಿನಿ ಮಾಲೀಕರು ಭರಿಸಲು ಸಾಧ್ಯವಾಗದ್ದರಿಂದ ಅವುಗಳು ಕಣ್ಮರೆಯಾಗುತ್ತಿವೆ ಎಂದು ಹೇಳುತ್ತಾರೆ.
ಆದರೆ, ಇವರ ಹೇಳಿಕೆಗಳಲ್ಲಿ ಸತ್ಯ ಇದ್ದರೂ ಇದೇ ಕಾರಣಕ್ಕೆ ದರ್ಶಿನಿಗಳ ಬಂದ್ ಆದವು ಎನ್ನುವುದು ಒಪ್ಪಲು ಅಸಾಧ್ಯ. ಇತ್ತೀಚೆಗೆ ಜನರು ರುಚಿ ಮತ್ತು ಶುಚಿಗೆ ಅತೀ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಈ ಎರಡು ದರ್ಶಿನಿಗಳಲ್ಲಿ ಸಿಗದಿದ್ದರೆ ಜನರು ದುಡ್ಡು ತೆತ್ತು ತಿನ್ನುವುದಾದರೂ ಎಲ್ಲಿ? ಜನರಿಗೆ ಬೇಕಿರುವುದು ರುಚಿ ಮತ್ತು ಶುಚಿ. ಈ ಎರಡನ್ನೂ ನೀವು ಕಟ್ಟು ನಿಟ್ಟಾಗಿ ಒದಗಿಸಿದರೆ ಎಂದಿಗೂ ಅವುಗಳು ಬಂದ್ ಮಾಡಲು ಸಾಧ್ಯವಿಲ್ಲ. ವಾಸುದೇವ್ ಅಡಿಗ ಅವರ ಅಡಿಗಾಸ್ ದರ್ಶಿನಿಗಳು ನಗರದ ಪ್ರತಿಯೊಂದು ಬಡಾವಾಣೆಗಳಲ್ಲಿ ಆರಂಭವಾಗುತ್ತಿವೆ. ಇದಕ್ಕೆ ಕಾರಣ ಏನು? ದರ್ಶನಿಗಳ ಆಯುಷ್ಯ ಮುಗಿದಿಲ್ಲ, ಮುಗಿಯುವುದೂ ಇಲ್ಲ. ಜನರಿಗೆ ತಕ್ಕಂತೆ ದರ್ಶಿನಿಗಳು, ಹೋಟೆಲ್ ಗಳು ಅಪ್ ಡೇಟ್ ಆದರೆ ಎಲ್ಲವೂ ಓಡುವ ಕುದುರೆಗಳೆ.











Click it and Unblock the Notifications