ಮಾಗಡಿಯಲ್ಲಿ ಮಸ್ತ್ ಮಸ್ತ್ ಕುಸ್ತಿ ಕಾಳಗ

ಕಿಕ್ಕಿರಿದು ತುಂಬಿದ್ದ ಸಾವಿರಾರು ಮಂದಿಯ ಚಪ್ಪಾಳೆ, ಶಿಳ್ಳೆ, ಕೂಗಾಟಗಳು ಮಾಗಡಿ ಕೆಂಪೇಗೌಡರ ಅಖಾಡದಲ್ಲಿ ನಡೆಯುತ್ತಿದ್ದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯ ಜಗಜಟ್ಟಿಗಳಿಗೆ ಉತ್ಸಾಹ ಇಮ್ಮಡಿಗೊಳಿಸುತ್ತಿತ್ತು. ಗರಡಿ ಮನೆಯ ಮಟ್ಟಿ ಮನೆಯಲ್ಲಿ ಕಸರತ್ತು ಮಾಡಿ ಖಡಕ್ ದೇಹದಾರ್ಡ್ಯ ಹೊಂದಿರುವ ಕುಸ್ತಿಪಟು ತನ್ನ ಎದುರಾಳಿಯನ್ನು ಬಗ್ಗುಬಡಿಯುವ ವಿಶ್ವಾಸ, ಎದುರಾಳಿಗೆ ಲಡತ್ ಕೊಟ್ಟು ಮಣ್ಣು ಮುಕ್ಕಿಸುವ ಪರಿ, ಇವೆಲ್ಲವುದಕ್ಕೆ ಸಾಕ್ಷಿಯಾಗಿದ್ದು ಮಾಗಡಿಯಲ್ಲಿ ನಡೆದ ಕುಸ್ತಿ ಪಂದ್ಯಾವಳಿ.
ರಾಮನಗರ ಜಿಲ್ಲೆ ಮಾಗಡಿಯ ಮಾಜಿ ಸಚಿವ ಎಚ್.ಎಂ.ರೇವಣ್ಣನವರು ಕುಸ್ತಿ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆಯೋಜಿಸಿದ್ದರು. ನಾಡಪ್ರಭು ಕೆಂಪೇಗೌಡರ ತವರಿನಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಮಾರ್ಪಿಟ್ ಜಿದ್ದಾಜಿದ್ದಿನ ಕುಸ್ತಿ ಮತ್ತು ಸಾದಾಕುಸ್ತಿ ಪಂದ್ಯಗಳು ನಡೆದವು.
ಕುಸ್ತಿ ಪಂದ್ಯಗಳನ್ನು ಪ್ರತ್ಯಕ್ಷವಾಗಿ ನೋಡುವುದು ಅಪರೂಪವಾಗಿರುವ ಸಂದರ್ಭದಲ್ಲಿ ಮಾಗಡಿ ಕೆಂಪೇಗೌಡರ ಅಖಾಡದಲ್ಲಿ ನಡೆದ ಜಿದ್ದಾಜಿದ್ದಿನ ಜಟ್ಟಿಗಳ ಕಾಳಗ ಕುಸ್ತಿಪ್ರಿಯರಿಗೆ ರಸದೌತಣವಾಗಿತ್ತು. ಪೈಲ್ವಾನರುಗಳ ಕಸರತ್ತು, ಲಡತ್‌ಗಳನ್ನ ನೋಡಲು ಮೈಸೂರು ದಸರಾಗೆ ಹೋಗುತ್ತಿದ್ದ ಕುಸ್ತಿ ಪ್ರಿಯರಿಗೆ ತಮ್ಮ ಸ್ವಸ್ಥಳದಲ್ಲೇ ನೋಡುವ ಅವಕಾಶ ಸಿಕ್ಕಿತ್ತು.
ಕ್ರಿಕೆಟ್, ಟೆನಿಸ್ ಮತ್ತಿತರ ಕ್ರೀಡೆಗಳಿಗೆ ಸಿಕ್ಕಂತಹ ಪ್ರೋತ್ಸಾಹ ಕುಸ್ತಿ ಕ್ರೀಡೆಗೆ ಸರ್ಕಾರ ನೀಡುತ್ತಿಲ್ಲ. ಆದ್ದರಿಂದ ಎಷ್ಟೋ ಕುಸ್ತಿ ಪಟುಗಳು ತಮ್ಮಲ್ಲಿ ಸಾಮರ್ಥ್ಯವಿದ್ದರೂ ಎಲೆಮರೆಯ ಕಾಯಿಯಂತೆಯೇ ಉಳಿದಿದ್ದಾರೆ. ಪ್ರೋತ್ಸಾಹವೇ ಇಲ್ಲದೇ ಸೊರಗುತ್ತಿರುವ ಕುಸ್ತಿ ಕ್ರೀಡೆ ದಿನೇ ದಿನೇ ಮರೆಯಾಗುತ್ತಿದೆ. ಸರ್ಕಾರ ಪ್ರತಿ ಹಳ್ಳಿಗಳಲ್ಲಿ ಗರಡಿ ಮನೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ ಪ್ರೋತ್ಸಾಹ ನೀಡಿದರೆ ಗರಡಿ ಸಂಸ್ಕೃತಿ ಮತ್ತು ಕುಸ್ತಿ ಮಲ್ಲಯುದ್ದ, ದೊಣ್ಣೆವರಸೆ, ಕತ್ತಿ ಗುರಾಣಿ ವರಸೆಗಳಂತಹ ಗ್ರಾಮೀಣ ಸಾಹಸ ಕ್ರೀಡೆಗಳು ಉಳಿಯಲು ಸಾಧ್ಯವಾಗುತ್ತದೆಂಬುದು ಪೈಲ್ವಾನರುಗಳ ಆಗ್ರಹವಾಗಿದೆ.
ಕುಸ್ತಿ ಪಂದ್ಯಾವಳಿ ಸಂದರ್ಭದಲ್ಲಿ 101 ಹಳೇ ಪೈಲ್ವಾನರುಗಳಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಒಟ್ಟು 30 ಜೋಡಿ ಭಾಗವಹಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ 60ಕ್ಕೂ ಹೆಚ್ಚು ಮಂದಿ ಕುಸ್ತಿಪಟುಗಳು ಭಾಗವಹಿಸಿದ್ದರು.
ದೊಡ್ಡ ಮೀಸೆಯ ಹಳೆಯ ಪೈಲ್ವಾನರುಗಳ ಓಡಾಟವೂ ಕುಸ್ತಿ ಅಖಾಡಕ್ಕೆ ಮೆರುಗು ನೀಡಿತ್ತು. ಕ್ರಿಕೆಟ್ ಮೇನಿಯಾದ ನಡುವೆಯೂ ಎಚ್.ಎಂ.ರೇವಣ್ಣ ಮತ್ತು ಎ.ಮಂಜುರವರ ನೇತೃತ್ವದಲ್ಲಿ ನಡೆದ ಕುಸ್ತಿ ಪಂದ್ಯಾವಳಿ ವೀಕ್ಷಿಸಲು ಸಾವಿರಾರು ಮಂದಿ ಸೇರಿ ಪಂದ್ಯಾವಳಿಯನ್ನ ಯಶಸ್ಸುಗೊಳಿಸಿದರು. ಕುಸ್ತಿ ಅಖಾಡದಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣನವರು ಮೈಕ್ ಹಿಡಿದು ಕಾಮೆಂಟರಿ ಮಾಡುತ್ತಾ ಕುಸ್ತಿಪಟುಗಳಿಗೆ ಪ್ರೋತ್ಸಾಹಿಸಿದರು.












Click it and Unblock the Notifications