ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಗವಿಕಲತೆ ಮೆಟ್ಟಿನಿಂತ ವ್ಯಂಗ್ಯಚಿತ್ರ ಕಲಾವಿದ

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

Cartoonist Akkur Ramesh
ರವಿ ಕಾಣದ್ದನ್ನ ಕವಿ ಕಂಡ, ಕವಿ ಕಾಣದ್ದನ್ನ ಕಲಾವಿದ ಕಂಡ ಎಂಬ ಮಾತಿದೆ. ಕಲಾವಿದನ ಕುಂಚದಲ್ಲಿ ಅರಳುವ ಒಂದು ಕಲೆ ನೂರು ಪುಟಗಳ ವರದಿ ಕೂಡ ಕಟ್ಟಿಕೊಡಲಾಗದು. ಒಂದು ಘಟನೆಯ ಇಡೀ ಚಿತ್ರಣವನ್ನು ಕಲಾವಿದನ ಕುಂಚದಿಂದ ಹುಟ್ಟುವ ರೇಖೆಗಳು ಎಲ್ಲರಿಗೂ ತಟ್ಟುವಂತೆ ಬಿಂಬಿಸಬಲ್ಲವು. ಕಲಾವಿದರಾಗಲು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ, ಕಲೆ ಎನ್ನುವುದು ಎಲ್ಲರನ್ನ ಕೈಬೀಸಿ ಕರೆಯುವುದಿಲ್ಲ ಕೆಲವರಿಗೆ ಮಾತ್ರ ಕಲಾಸರಸ್ವತಿ ಒಲಿಯುತ್ತಾಳೆ.

ವ್ಯಂಗ್ಯ, ವಿಡಂಬನೆ, ಘಟನೆಯ ವಿಸ್ತಾರವನ್ನು ಪತ್ರಿಕೆಗಳಲ್ಲಿ ಸೂಕ್ಷ್ಮವಾಗಿ ಓದುಗರ ಮನಮುಟ್ಟಿಸುವಲ್ಲಿ ವ್ಯಂಗ್ಯಚಿತ್ರಗಳು ಪ್ರಮುಖ ಪಾತ್ರವಹಿಸುತ್ತವೆ. ಇಂತಹ ವ್ಯಂಗ್ಯ ಚಿತ್ರಗಳನ್ನ ಸ್ಥಳೀಯ ಮತ್ತು ರಾಜ್ಯ ಪತ್ರಿಕೆಗಳಲ್ಲಿ ತನ್ನ ಕುಂಚದಲ್ಲಿ ಅರಳಿಸುವ ಕಲೆಯನ್ನು ಕಲಿತಿರುವ ಅಂಗವಿಕಲ ಕಲಾವಿದ ರಾಮನಗರ ಜಿಲ್ಲೆಯ ಅಕ್ಕೂರು ರಮೇಶ್ ಎಲೆಮರೆಯ ಕಾಯಿಯಂತೆಯೇ ಇದ್ದಾರೆ. ಅಂಗವಿಕಲನಾದರೂ ಕಲೆಯನ್ನೇ ಬದುಕಾಗಿಸಿಕೊಂಡಿರುವ ಗ್ರಾಮೀಣ ಪ್ರತಿಭೆ ಅಕ್ಕೂರು ರಮೇಶ್‌.

ದಿನಪತ್ರಿಕೆಗಳಲ್ಲಿ ಮತ್ತು ವಾರಪತ್ರಿಕೆಗಳಲ್ಲಿ ರಾಜಕಾರಣಿಗಳ ಮತ್ತು ಘಟನೆಯ ಬಗ್ಗೆ ವಿಡಂಬನಾತ್ಮಕ ವ್ಯಂಗ್ಯಚಿತ್ರಗಳು ಓದುಗರಿಗೆ ಸೂಕ್ಷ್ಮವಾಗಿ ಹೇಳುತ್ತದೆ. ನೇರವಾಗಿ ಹೇಳಲಾಗದ್ದನ್ನು ಸೂಚ್ಯವಾಗಿ ಹೇಳಿ ಚಾಟಿಏಟು ನೀಡಿರುತ್ತವೆ. ವ್ಯಂಗ್ಯ ಚಿತ್ರಗಳಿಗೆ ಆಹಾರವಾಗದ ರಾಜಕಾರಣಿಯೇ ಇಲ್ಲ. ರಾಜಕಾರಣಿಗಳ ಹುಳುಕುಗಳನ್ನು ಹೊರಗೆಳೆಯಲೆಂದೇ ವ್ಯಂಗ್ಯ ಚಿತ್ರಗಳನ್ನು ಸೃಷ್ಟಿಸಲಾಯಿತೋ ಎಂಬಷ್ಟು ರಾಜಕಾರಣಿಗಳೊಂದಿಗೆ ವ್ಯಂಗ್ಯಚಿತ್ರಗಳು ತಳಕುಹಾಕಿಕೊಂಡಿವೆ. ಅವು ಕೆಣಕುತ್ತವೆ, ಕೆಲವು ಮೊಟಕುತ್ತವೆ. ಒಂದು ಪುಟದ ಸುದ್ದಿಗಿಂತ ಒಂದು ವ್ಯಂಗ್ಯ ಚಿತ್ರದಲ್ಲಿನ ವಿಡಂಬನೆಯಲ್ಲಿ ಹೆಚ್ಚಿನ ವಿಚಾರ ಅಡಗಿರುತ್ತದೆ. ಇಂತಹ ವ್ಯಂಗ್ಯ ಚಿತ್ರಕಲೆ ನರೇಂದ್ರ, ಪಿ.ಅಹ್ಮದ್‌ರಂತಹವರಿಗೆ ಜನಪ್ರಿಯತೆ ತಂದುಕೊಟ್ಟಿದೆ.

ಈ ನಡುವೆ ರಾಮನಗರ ಜಿಲ್ಲೆ ಚನ್ನಪಟ್ಟಣದ ಅಕ್ಕೂರು ಗ್ರಾಮದ ಅಂಗವಿಕಲ ರಮೇಶ್‌ ಕೂಡ ವ್ಯಂಗ್ಯಚಿತ್ರ ಕಲಾವಿದನಾಗಿದ್ದರೂ ಎಲೆಮರೆಯ ಕಾಯಿಯಂತೆಯೇ ಇದ್ದಾರೆ. ಬಾಲ್ಯದಲ್ಲಿಯೇ ಪೋಲಿಯೋ ಪೀಡಿತನಾಗಿ ಅಂಗವಿಕಲನಾದ ರಮೇಶ್ ಕಡುಬಡತನದ ನಡುವೆ ಪತ್ರಿಕೆಗಳಲ್ಲಿ ಬರುವ ವ್ಯಂಗ್ಯಚಿತ್ರಗಳನ್ನ ನೋಡಿ ವ್ಯಂಗ್ಯಚಿತ್ರ ಕಲೆಯ ಕಡೆ ಹೆಚ್ಚು ಆಕರ್ಷಿತರಾದರು. ಸ್ಥಳೀಯ ಪತ್ರಿಕೆಗಳು, ರಾಜ್ಯಪತ್ರಿಕೆಗಳು ರಮೇಶ್‌ರಲ್ಲಿ ಹೂತಿದ್ದ ಪ್ರತಿಭೆ ಅನಾವರಣಗೊಳ್ಳಲು ಅವಕಾಶಮಾಡಿಕೊಟ್ಟವು. ಸ್ನೇಹಿತರ ಪ್ರೋತ್ಸಾಹದೊಂದಿಗೆ ವ್ಯಂಗ್ಯಚಿತ್ರಕಲೆಯನ್ನೆ ವೃತ್ತಿಯನ್ನಾಗಿಸಿಕೊಂಡರು ರಮೇಶ್.

ಈ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಅಕ್ಕೂರು ರಮೇಶ್ ಭಾಜನರಾಗಿದ್ದಾರೆ. ಹಲವಾರು ಮಂದಿ ಅಂಗವಿಕಲರಿಗೆ ಆದರ್ಶಪ್ರಾಯರಾಗಿದ್ದಾರೆ. ಅಂಗವೈಕಲ್ಯವನ್ನು ಮರೆತು ಕಲಾವಿದನಾಗಿ ಬದುಕು ರೂಪಿಸಿಕೊಂಡಿರುವ ರಮೇಶ್, ಅಂಗವಿಕಲರಿಗೆ ಅನುಕಂಪದ ಬದಲಾಗಿ ಮಾರ್ಗದರ್ಶನ ಸಹಕಾರ ನೀಡಿದರೆ ಉತ್ತಮ ಬದುಕು ಸಾಗಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ಥಳೀಯವಾಗಿ ಕಲಾವಿದ ರಮೇಶ್‌ರವರ ಕಲಾಪ್ರತಿಭೆಯ ಬಗ್ಗೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಸಮಯ ಸಂಧರ್ಭಕ್ಕನುಗುಣವಾಗಿ ವ್ಯಂಗ್ಯಚಿತ್ರಗಳನ್ನ ತನ್ನ ಕುಂಚದಲ್ಲಿ ಅರಳಿಸುತ್ತಿರುವ ರಮೇಶ್‌ರನ್ನು 'ಕಾರ್ಟೂನ್ ರಮೇಶ್‌' ಎಂದೇ ಎಲ್ಲರೂ ಪ್ರೀತಿಯಿಂದ ಸಂಬೋಧಿಸುತ್ತಾರೆ. ವ್ಯಂಗ್ಯಚಿತ್ರಕಲೆಯನ್ನೇ ವೃತ್ತಿಯನ್ನಾಗಿಸಿಕೊಂಡಿರವ ರಮೇಶ್ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಲಾಶಿಕ್ಷಕನಾಗಿ ಮಕ್ಕಳಿಗೆ ಕಲೆಯ ಬಗ್ಗೆ ಹೇಳಿಕೊಡುತ್ತಿದ್ದಾರೆ.

ಸ್ವಾವಲಂಭಿಯಾಗಿ ಸ್ವಾಭಿಮಾನಿಯಾಗಿ ಬದುಕು ರೂಪಿಸಕೊಳ್ಳಬೇಕೆಂಬ ದೃಢಮನಸ್ಸನ್ನು ಹೊಂದಿರುವ ಕಲಾವಿದ ರಮೇಶ್‌ಗೆ ವ್ಯಂಗ್ಯಚಿತ್ರವೇ ಜೀವನಾಧಾರವಾಗಿದೆ. ತನ್ನ ವ್ಯಂಗ್ಯಚಿತ್ರಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ಎಡವಿದವರಿಗೆ ತಿಳಿಹೇಳುವ ಕಾರ್ಯ ಮಾಡುತ್ತಿರುವ ಅಕ್ಕೂರ್ ರಮೇಶ್ ಹವಾರು ಮಂದಿಗೆ ಮಾದರಿಯಾಗಿದ್ದಾರೆ.

ಹಳ್ಳಿಗಾಡಿನ ಪ್ರದೇಶದ ಪ್ರತಿಭಾವಂತ ಕಲಾವಿದ ತನ್ನ ತಾಯಿ ಪತ್ನಿ ಮಗಳೊಂದಿಗೆ ಸುಖಸಂಸಾರ ನಡೆಸಲು ವ್ಯಂಗ್ಯಚಿತ್ರವೇ ಜೀವನಾಧಾರವೆಂದು ಹೆಮ್ಮೆಯಿಂದ ಹೇಳುತ್ತಾರೆ. ಈ ಕಾರ್ಟೂನ್ ರಮೇಶ್‌ರ ಕಲಾಪ್ರತಿಭೆ ಮತ್ತಷ್ಟು ಮೇರುಮಟ್ಟಕ್ಕೆ ಬೆಳೆದು ಕಲಾಕ್ಷೇತ್ರದಲ್ಲಿ ಬೆಳಗಲಿ ಎಂಬುದು ಎಲ್ಲರ ಆಶಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X