ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಸೋದ್ಯಮ ನೀತಿ 2009-14 ಬಿಡುಗಡೆ

By Staff
|
Google Oneindia Kannada News

ಬೆಂಗಳೂರು, ನ. 26 : ಪ್ರವಾಸೋದ್ಯಮ ಇಲಾಖೆಯು ಜಾರಿಗೆ ತಂದಿರುವ ನೂತನ ಪ್ರವಾಸೋದ್ಯಮ ನೀತಿ 2009-14 ನ್ನು ಪ್ರವಾಸೋದ್ಯಮ ಸಚಿವ ಜಿ ಜನಾರ್ದನ ರೆಡ್ಡಿ ಮತ್ತು ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ನೀತಿಯ ಬಗ್ಗೆ ಮಾಹಿತಿ ನೀಡಿದ ಪ್ರವಾಸೋದ್ಯಮ ಸಚಿವ ಜಿ ಜನಾರ್ದನ ರೆಡ್ಡಿ ಅವರು, ಈ ಪ್ರವಾಸೋದ್ಯಮ ನೀತಿಯು ಅಕ್ಟೋಬರ್ 20, 2009 ರಿಂದ ಅಕ್ಟೋಬರ್ 2014 ರ ವರೆಗೆ ಜಾರಿಯಲ್ಲಿರುತ್ತದೆ ಎಂದರು. ಈ ನೀತಿಯು ಹೂಡಿಕೆದಾರರಿಗೆ ಅನುಕೂಲಕರವಾಗಿರುವುದಲ್ಲದೆ ಉದ್ಯೋಗ ಸೃಷ್ಟಿಗೂ ಅವಕಾಶ ಕಲ್ಪಿಸುತ್ತದೆ. ರಾಜ್ಯದ ಭೌಗೋಳಿಕ ಹಾಗೂ ಆರ್ಥಿಕ ಪರಿಸ್ಥಿತಿಗೆ ಅನುಗುಣವಾದಂತಹ ಪ್ರವಾಸೋದ್ಯಮ ಆದ್ಯತಾ ವಲಯಗಳ ಆಧಾರದ ಮೇಲೆ ಸಹಾಯಧನ ಹಾಗೂ ರಿಯಾಯಿತಿಗಳನ್ನು ಘೋಷಿಸಲಾಗಿದೆ.

ಆದ್ಯತಾ ವಲಯಗಳಲ್ಲಿ ಪ್ರಮುಖವಾಗಿ ಹೋಟೇಲುಗಳು, ವಿಹಾರಧಾಮ (ರೆಸಾರ್ಟ್‌ಗಳು), ಹೋಮ್ ಸ್ಟೇ, ಆರೋಗ್ಯ, ಪರಂಪರಾ ಕೇಂದ್ರಗಳ ಉತ್ತಮ ನಿರ್ವಹಣೆ ಮತ್ತು ವರ್ಗೀಕರಣಕ್ಕೆ ಪ್ರಾಮುಖ್ಯ ನೀಡಲಾಗುವುದು ಎಂದು ಅವರು ವಿವರಿಸಿದರು. ಹಿಂದುಳಿದ ಪ್ರದೇಶಗಳಲ್ಲಿ ಡಾ. ನಂಜುಂಡಪ್ಪ ವರದಿ ಆಧಾರದ ಮೇಲೆ ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿಗೆ ಅನುಕೂಲವಾಗುವಂತೆ ಬಂಡವಾಳ ಹೂಡಿಕೆಗೆ ಒತ್ತು ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ನೂತನ ಪ್ರವಾಸೋದ್ಯಮ ನೀತಿಯ ಮುಖ್ಯಾಂಶಗಳು

ಸಂಸ್ಕೃತಿ ಹಾಗೂ ಪರಂಪರಾ ಪ್ರವಾಸೋದ್ಯಮದಡಿಯಲ್ಲಿ ಮೈಸೂರು, ಹಂಪಿ, ಪಟ್ಟದಕಲ್ಲು, ಬಾದಾಮಿ, ಐಹೊಳೆ, ಬಿಜಾಪುರ, ಬೀದರ್ ಮುಂತಾದ ತಾಣಗಳನ್ನು ಗುರುತಿಸಿ, ಪ್ರವಾಸಿ ಕೇಂದ್ರಗಳಾಗಿ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಪ್ರವಾಸಿಗರಿಗೆ ವಾಸ್ತವ್ಯದ ಕೊರತೆ ನೀಗಿಸುವುದರೊಂದಿಗೆ ನಾಡಿನ ವಿವಿಧ ಭಾಗಗಳ ಸಂಸ್ಕೃತಿ, ಆಚಾರ, ವಿಚಾರ, ಅಡುಗೆ, ಸ್ಥಳೀಯ ಜನಪದ ಕಲೆಗಳು ಇತ್ಯಾದಿಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ಹೋಂ ಸ್ಟೇಗೆ ಒತ್ತು ನೀಡಲಾಗುವುದು.

5 ಕೊಠಡಿಗಳ ಒಳಗೆ ಇರುವ ಮನೆಯ ಮಾಲೀಕರೇ ವಾಸಿಸುವ ಮನೆಗಳಲ್ಲಿ ಹೋಂ ಸ್ಟೇ ಒದಗಿಸಲು ಮುಂದೆ ಬರುವಂತಹವರನ್ನು ವಾಣಿಜ್ಯೇತರ ಘಟಕಗಳೆಂದು ಪರಿಗಣಿಸಿ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಸರ್ಕಾರದಿಂದ ಮಾಡಿಕೊಡಲಾಗುವುದು. ಬೆಂಗಳೂರು ನಗರವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಎಲ್ಲ ಸರ್ಕಾರಿ ಅತಿಥಿಗೃಹಗಳನ್ನು ಸಾರ್ವಜನಿಕ ವಸತಿ ಜಾಲ ಮೂಲಕ ಪ್ರವಾಸಿಗರಿಗೆ ಮುಂಗಡವಾಗಿ ಮಾಹಿತಿ ನೀಡಲು ಕ್ರಮ.

ಅಂತರರಾಷ್ಟ್ರೀಯ ಸಮಾವೇಶ, ಸಮ್ಮೇಳನ ಮತ್ತು ವಸ್ತುಪ್ರದರ್ಶನಗಳನ್ನು ನಡೆಸುವ ಪ್ರವಾಸಿ ಸಂಕೀರ್ಣ ನಿರ್ಮಾಣ. ಮಂಗಳೂರು ಕಾರವಾರ ನಡುವೆ ಛಿಡಿuise ಣouಡಿism ಅಭಿವೃದ್ಧಿ ಪಡಿಸುವುದು. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಪ್ರತಿ 150 ಕಿ.ಮೀ. ಅಂತರದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಪರಿಸರ ಪ್ರವಾಸೋದ್ಯಮದಲ್ಲಿ ಕಾರವಾರದಿಂದ ಕೊಡಗಿನ ವರೆಗೆ ಪರಿಸರ ಪ್ರವಾಸಿ ಕೇಂದ್ರಗಳ ಸ್ಥಾಫನೆ.

ವೆಲ್‌ನೆಸ್ ಪ್ರವಾಸೋದ್ಯಮದಡಿ ಆಯುರ್ವೇದ, ಯೋಗ, ಯುನಾನಿ, ಸಿದ್ಧ, ಹೋಮಿಯೋಪತಿ, ಪ್ರಕೃತಿ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ ಹಾಗೂ ಅವುಗಳ ವರ್ಗೀಕರಣ. ಸಾಹಸ ಪ್ರವಾಸೋದ್ಯಮದಡಿಯಲ್ಲಿ ಚಾರಣ, ಪರ್ವತಾರೋಹಣ, ಫಿಷಿಂಗ್, ರಿವರ್ ರಾಫ್ಟಿಂಗ್, ಪ್ಯಾರಾಗ್ಲೈಡಿಂಗ್, ವಾಟರ್ ಸ್ಪೋರ್ಟ್ಸ್, ಸ್ಕ್ಯೂಬಾ ಡೈವಿಂಗ್ ಮುಂತಾದ ಸಾಹಸ ಕ್ರೀಡೆಗಳಿಗೆ ಪ್ರೋತ್ಸಾಹ.

ಹೆಲಿ-ಟೂರಿಸಂ ಅಭಿವೃದ್ಧಿಗೆ ಪ್ರೋತ್ಸಾಹ. ಪ್ರವಾಸೋದ್ಯಮದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಗೆ, ಆಯ್ದ ವಿದ್ಯಾ ಸಂಸ್ಥೆಗಳ ಮೂಲಕ ವಿದೇಶಿ ಭಾಷೆಗಳ ತರಬೇತಿಗೆ ಕ್ರಮ. ಪ್ರವಾಸೋದ್ಯಮ ಯೋಜನೆಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆದಾರರನ್ನು ಪ್ರೋತ್ಸಾಹಿಸಲು ರಾಜ್ಯದ ತಾಲ್ಲೂಕುಗಳನ್ನು ಐದು ವರ್ಗಗಳಲ್ಲಿ ವಿಭಜಿಸಲಾಗಿದೆ. ಆಯಾ ವಿಭಾಗಕ್ಕನುಗುಣವಾಗಿ ಶೇ 10 ರಿಂದ ಶೇ 35ರ ವರೆಗೆ 10 ಲಕ್ಷದಿಂದ ಗರಿಷ್ಟ 35 ಲಕ್ಷದವರೆಗೆ ಸಹಾಯಧನ ನೀಡಲಾಗುವುದು.
ಇದಲ್ಲದೆ ಕೈಗಾರಿಕಾ ನೀತಿ 2009-14 ರಲ್ಲಿ ಘೋಷಿಸಿರುವಂತೆ ಗುರ್ತಿಸಲಾದ ವಲಯಗಳಲ್ಲಿ ಸ್ಟಾಂಪ್ ಡ್ಯೂಟಿ ಪಾವತಿಯಲ್ಲಿ ವಿನಾಯಿತಿ ನೀಡಲಾಗುವುದು.

ಜೊತೆಗೆ ಭೂ ಪರಿವರ್ತನಾ ಶುಲ್ಕ ಪಾವತಿಯಲ್ಲಿ ರಿಯಾಯಿತಿ ಹಾಗೂ ಮನೋರಂಜನಾ ತೆರಿಗೆಯಲ್ಲಿ ಶೇ. 100ರಷ್ಟು ವಿನಾಯಿತಿ ನೀಡಲಾಗುವುದು.
ಇದೇ ಸಂದರ್ಭದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಧನ ಸಹಾಯದಲ್ಲಿ ಇನ್ಸ್‌ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್(ಐ.ಹೆಚ್.ಎಂ) ಹಾಗೂ ಫುಡ್‌ಕ್ರಾಫ್ಟ್ ಇನ್ಸ್‌ಟಿಟ್ಯೂಟ್ ಪ್ರಾರಂಭಿಸಲಾಗುತ್ತಿದ್ದು ಇದರಿಂದ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂಬ ಮಾಹಿತಿಯನ್ನು ಸಚಿವರು ನೀಡಿದರು.

ಬಳ್ಳಾರಿ ಹಾಗೂ ಮಂಗಳೂರಿನಲ್ಲಿ ಎರಡು ಐಹೆಚ್‌ಎಂ ಹಾಗೂ ಗದಗ ಜಿಲ್ಲೆಯಲ್ಲಿ ಫುಡ್‌ಕ್ರಾಫ್ಟ್ ಇನ್ಸ್‌ಟಿಟ್ಯೂಟ್ ತೆರೆಯಲು ರಾಜ್ಯ ಸರ್ಕಾರವು ಅನುಮೋದನೆ ನೀಡಿದ್ದು, ಗುಲ್ಬರ್ಗ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಐಹೆಚ್‌ಎಂ ಪ್ರಾರಂಭಿಸುವ ಪ್ರಸ್ತಾವನೆಗಳು ಸರ್ಕಾರದ ಮುಂದಿವೆ ಎಂದು ಅವರು ತಿಳಿಸಿದರು.
ಇದಲ್ಲದೆ ಹಾಸನ ಜಿಲ್ಲೆಯ ಬೇಲೂರು ಬಳಿ ಒಂದು ಫುಡ್‌ಕ್ರಾಫ್ಟ್ ಸಂಸ್ಥೆ ಆರಂಭಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು ರೂ. 2 ಕೋಟಿ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ರಾಜ್ಯದ ಪ್ರಮುಖ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಧ್ವನಿ ಬೆಳಕಿನ ಕಾರ್ಯಕ್ರಮಗಳನ್ನು ಪ್ರದರ್ಶಿಸಲು ಸರ್ಕಾರ ಉದ್ದೇಶಿಸಿದ್ದು ಬೀದರ್, ಬಿಜಾಪುರ, ಚಿತ್ರದುರ್ಗ, ಕಿತ್ತೂರು, ಹಂಪಿ, ಬಳ್ಳಾರಿ, ಪಟ್ಟದಕಲ್ಲು, ಹಳೇಬೀಡು ಮತ್ತು ಶ್ರೀರಂಗಪಟ್ಟಣಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಸಚಿವರು ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X