ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೆನಾಡಿನಲ್ಲಿ ಸಸಿನೆಡುವ ಚಳವಳಿ!

By * ವರದಿ :ಡಾ.ಬಾಲಕೃಷ್ಣ ಹೆಗಡೆ
|
Google Oneindia Kannada News

Pankaj kumar pandey
ಶಿವಮೊಗ್ಗ, ನ. 17: ಬದಲಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಜಾಗತಿಕ ತಾಪಮಾನ, ವಾಯುಮಾಲಿನ್ಯ ಹೆಚ್ಚುತ್ತಿರುವುದಕ್ಕೆ ನಾವೆಲ್ಲ ಕಾರಣ ಎಂದು ಜಿಲ್ಲಾಧಿಕಾರಿ ಪಂಕಜಕುಮಾರ್ ಪಾಂಡೆ ಹೇಳಿದರು. ಸಾರಿಗೆ ಇಲಾಖೆ, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಮತ್ತು ಶಿವಮೊಗ್ಗ ರೌಂಡ್ ಟೇಬಲ್ ಇವರ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಮತ್ತು ಸುರಕ್ಷತೆ ನಿಯಮಗಳ ತಿಳುವಳಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ರಾಷ್ಟ್ರೀಯ ಗ್ರಾಮೀಣ ಖಾತ್ರಿ ಯೋಜಿನೆಯಡಿಯಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಒಂದು ಕೋಟಿ ಎರಡು ಲಕ್ಷ ಸಸಿಗಳನ್ನು ನೆಡಲು ನಿರ್ಧರಿಸಿದೆ. ಇವುಗಳನ್ನು ರೈಲ್ವೆ ಹಳಿಯ ಎರಡೂ ಕಡೆಗಳಲ್ಲಿ ಲೋಕಪಯೋಗಿ ಇಲಾಖೆ ಆವರಣ. ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲೆಗಳಲ್ಲಿ, ಜಿ.ಪಂ.ಕಚೇರಿ, ಶಾಲಾ -ಕಾಲೇಜುಗಳ ಆವರಣಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ತೊಡಗಿಸಿ ಕೊಳ್ಳುವುದರ ಮೂಲಕ ಶಾಲಾ, ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ನೆಟ್ಟ ಗಿಡಗಳ ಸುಸ್ಥಿರ ಬೆಳವಣಿಗೆಗೆ ವಿದ್ಯಾರ್ಥಿ ಸಮೂಹದ ಶ್ರಮ ಅತೀ ಮುಖ್ಯವಾದದ್ದು ಎಂದ ಪಾಂಡೆ ಈ ಕಾರ್ಯಕ್ರಮದ ಜ್ಯಾರಿಗೆ ಶಿಸ್ತು ಬದ್ಧ ಜನಾಂದೋಲನವನ್ನು ಹಮ್ಮಿಕೊಳ್ಳಲಾಗುವುದೆಂದು ಅವರು ತಿಳಿಸಿದರು.ಇದರೊಂದಿಗೆ ಶಿವಮೊಗ್ಗವನ್ನು ರಾಜ್ಯದಲ್ಲೇ ಮಾದರಿ ಹಸಿರು ಜಿಲ್ಲೆಯನ್ನಾಗಿಸಲಾಗುವುದೆಂದು ಪ್ರಕಟಿಸಿದರು.ಶಿವಮೊಗ್ಗ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು ಆದರಿಂದ ವಾಯುಮಾಲಿನ್ಯವೂ ಹೆಚ್ಚುತ್ತಿದೆ. ಇದನ್ನು ತಡೆಗಟ್ಟಲು ನಗರಸಭೆ ಇನ್ನಿತರ ಸಂಘ ಸಂಸ್ಥೆ ಸಹಯೋಗದೊಂದಿಗೆ ಶಿವಮೊಗ್ಗದಲ್ಲಿ ಪ್ರತ್ಯೇಕ ಟ್ರಕ್ ಟರ್ಮಿನೆಸ್ ಸ್ಥಾಪನೆ ಮಾಡಲಾಗುವುದು. ಆ ಮೂಲಕ ನಗರ ಮಧ್ಯದಲ್ಲಿ ಲಾರಿಗಳು ನಿಂತು ತೊಂದರೆ ಉಂಟುಮಾಡುವುದನ್ನು ತಪ್ಪಿಸಲಾಗುವುದು ಎಂದರು.

ಹಿಂದುಳಿದ ವರ್ಗದವರಿಗೆ, ಪ.ಜಾ.ಪ.ಪಂಗಡದವರಿಗೆ ಆಟೋರಿಕ್ಷಾ ಓಡಿಸಲು ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡುವ ಅವಕಾಶ ನಗರಸಭೆಗಿದೆ. ಆ ಮೂಲಕವೂ ವಾಯುಮಾಲಿನ್ಯ ತಡೆಗಟ್ಟಬಹುದು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು. ಪರ್ಯಾಯ ಇಂಧನ ಬಳಕೆ ಕಡೆಯೂ ಜನರು ಲಕ್ಷ್ಯ ವಹಿಸಬೇಕೆಂದು ಕರೆ ನೀಡಿದರು.

ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಬರುವ ಜನವರಿಯಿಂದ ಬೃಹತ್ ಜನಾಂದೋಲನ ಹಮ್ಮಿಕೊಳ್ಳಲಾಗುವುದೆಂದು ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನ ತಿಳಿಸಿದರು. ದೇಶಕ್ಕೆ ತೊಂದರೆ ಕೊಡುವ ಕೆಲಸ ಯಾರು ಮಾಡುತ್ತಾರೋ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಒಂದು ಮರ ಕಡಿದರೆ ಅದರ ಬದಲು ಹತ್ತು ಗಿಡನೆಡುವ ಕಾರ್ಯವಾಗಬೇಕು. ತಮ್ಮ ಕಚೇರಿ ಆವರಣದಲ್ಲೂ ತಾವು ಇದನ್ನೇ ಮಾಡಿದ್ದಾಗಿ ಅವರು ಸಮರ್ಥಿಸಿಕೊಂಡರು.

ನಗರಗಳಲ್ಲಿ ಸ್ತ್ರೀಶಕ್ತಿ ಗುಂಪು, ಸ್ವಸಹಾಯ ಗುಂಪುಗಳ ಸಹಕಾರದಿಂದ ವಾಯುವಾಲಿನ್ಯ ತಡೆಗಟ್ಟಿ ಶಿವಮೊಗ್ಗವನ್ನು ವಾಯುಮಾಲಿನ್ಯ ರಹಿತ ಜಿಲ್ಲೆಯನ್ನಾಗಿಸುವುದು ತಮ್ಮ ಗುರಿ ಎಂದು ಪಾಂಡೆ ತಿಳಿಸಿದರು.ನಗರಸಭಾಧ್ಯಕ್ಷ ಎನ್.ಜೆ.ರಾಜ ಶೇಖರ, ಉಪಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ, ಶಿವಮೊಗ್ಗ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜ್ಯೋತಿಪ್ರಕಾಶ್, ಬಸ್ ಮಾಲೀಕರ ಸಂಘದ ಅಧ್ಯಕ್ಷ ಜಯಪ್ರಕಾಶ್ ಶೆಣೈ, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಅಧಿಕಾರಿ ಹೇಮಂತಕುಮಾರ್, ಪ್ರಕಾಶ್, ಎನ್.ಸಿ.ಸಿ.ಕಮಾಂಡರ್ ಸುರೇಶ್, ರೌಂಡ್ ಟೇಬಲ್ ಅಧ್ಯಕ್ಷ ವೆಂಕಟೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಾರಿಗೆ ಇಲಾಖೆ ಹೊರತಂದಿರುವ ವಿವಿಧ ನಮೂನೆಯ ಪೋಸ್ಟರ್‌ಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X