ರೆಡ್ಡಿಗಳ ಮತ್ತೆ ಗೆಲುವು, ವರ್ಗಾವಣೆ ರದ್ದು

ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಬಿ ಶಿವಪ್ಪ, ಜಿಲ್ಲಾವರಿಷ್ಠಾಧಿಕಾರಿಯಾಗಿ ಸೀಮಂತ್ ಕುಮಾರ್ ಸಿಂಗ್, ಎನ್ ವಿ ಪ್ರಸಾದ್ ಅವರನ್ನು ಗದಗ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಜೊತೆಗೆ ಗದಗ ಜಿಲ್ಲಾಧಿಕಾರಿ ಸಿಖಾ ಅವರನ್ನು ಧಾರವಾಡ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮತ್ತು ಬಳ್ಳಾರಿ ಡಿಸಿಯಾಗಿದ್ದ ಹರ್ಷ ಗುಪ್ತ ಅವರನ್ನು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಆದರೆ, ಅತ್ತ ಬೀದರ್ ನಲ್ಲಿ ಜಿಲ್ಲಾಧಿಕಾರಿ ಹರ್ಷ ಗುಪ್ತ ಅವರ ವರ್ಗಾವಣೆ ವಿರೋಧಿಸಿ ಬೀದರ್ ಬಂದ್ ಭಾಗಶಃ ಯಶಸ್ವಿಯಾಗಿದೆ.
ಮೈಸೂರಿನಲ್ಲಿ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ದರ್ಶನ ಪಡೆದು ಮಾಧ್ಯಮ ಪ್ರತಿಕ್ರಿಯೆ ನೀಡಿದ ಅವರು, ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಕೈಬಿಟ್ಟು ದೊಡ್ಡ ತಪ್ಪು. ರಾಜಕೀಯದಲ್ಲಿ ಒಳ್ಳೆಯವರಿಗೆ ಕಾಲವಿಲ್ಲ. ಉತ್ತಮ ಕೆಲಸ ಮಾಡುವವರಿಗೆ ಪ್ರೋತ್ಸಾಹವಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.
ಹಣಬಲ, ತೋಳ್ಬಲಕ್ಕೆ ಯಡಿಯೂರಪ್ಪ ಹೆದರುವುದಿಲ್ಲ. ಯಾವ ಆಸೆ, ಅಮಿಷಗಳಿಗೆ ಬಗ್ಗುವುದಿಲ್ಲ. ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಶೋಭಾ ಅವರ ರಾಜೀನಾಮೆಯನ್ನು ಪಡೆದುಕೊಳ್ಳಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಅಧಿಕಾರಗಳ ವರ್ಗಾವಣೆ ಮತ್ತು ಶೋಭಾ ಕರಂದ್ಲಾಜೆ ಅವರ ರಾಜೀನಾಮೆಗೆ ಪ್ರತಿಕ್ರಿಯೆ ನೀಡಿರುವ ಜನಾರ್ದನರೆಡ್ಡಿ, ಹೈಕಮಾಂಡ್ ಸೂಚನೆ ಮೇರೆಗೆ ಬೇಡಿಕೆ ಈಡೇರಿದೆ. ರಾಜ್ಯಕ್ಕೆ ಒಳ್ಳೆಯದಾಗುವ ನಿರ್ಣಯವನ್ನು ಹೈಕಮಾಂಡ್ ತೆಗೆದುಕೊಂಡಿದೆ. ಎಲ್ಲವೂ ಸುಷ್ಮಾ ತಾಯಿಯ ಮಹಿಮೆ ಎಂದು ರೆಡ್ಡಿ ಮುಗುಳ್ನಕ್ಕರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications