For Daily Alerts
ರೆಡ್ಡಿಗಳ ಫಸ್ಟ್ ವಿನ್ : ಬಳಿಗಾರ್ ಔಟ್
ಬೆಂಗಳೂರು, ನ. 6 : ಭಿನ್ನರ ಒತ್ತಡಕ್ಕೆ ಮಣಿದಿರುವ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಪ್ರಧಾನ ಕಾರ್ಯದರ್ಶಿ ವಿ ಪಿ ಬಳಿಗಾರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಬಳಿಗಾರ ಅವರನ್ನು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದು, ಹೆದ್ದಾರಿ ಇಲಾಖೆ ಎಂಡಿ ಐಎನ್ಎಸ್ ಪ್ರಸಾದ್ ಅವರನ್ನು ಸಿಎಂ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಸಚಿವೆ ಶೋಭಾ ಕರಂದ್ಲಾಜೆ ಇಂದು ಯಾವ ಸಮಯದಲ್ಲಾದರೂ ರಾಜೀನಾಮೆ ನೀಡಬಹುದು.
ಬಳಿಗಾರ್ ವರ್ಗಾವಣೆ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿಕ್ರಿಯೆ ನೀಡಿರುವ ರೆಡ್ಡಿ ಬಣದ ರೇಣುಕಾಚಾರ್ಯ ಮತ್ತು ಬೇಳೋರು ಗೋಪಾಲಕೃಷ್ಣ, ಬಳಿಗಾರ್ ಅವರ ವರ್ಗಾವಣೆಯಲ್ಲ, ನಮಗೆ ಬೇಕಿರುವುದು ಮುಖ್ಯಮಂತ್ರಿಗಳ ತಲೆದಂಡ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ಗುರುವಾರ ಸಂಜೆ ಪಕ್ಷದ ಹೈಕಮಾಂಡ್ ಯಡಿಯೂರಪ್ಪ ಅವರನ್ನೇ ಮುಂದುವರಿಸುವ ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಸುಮಾರು 60 ಕ್ಕೂ ಹೆಚ್ಚು ಶಾಸಕರು ತಮ್ಮ ರಾಜೀನಾಮೆ ಪತ್ರವನ್ನು ನವದೆಹಲಿಯಲ್ಲಿರುವ ಜನಾರ್ದನರೆಡ್ಡಿ ಅವರಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಈ ಎಲ್ಲ ಬಿಕ್ಕಟ್ಟಿಗೆ ಕಾರಣ ಎಂದು ಹೇಳಲಾಗುತ್ತಿರುವ ಸಚಿವೆ ಶೋಭಾ ಕರಂದ್ಲಾಜೆ ಮೊದಲ ಬಾರಿಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಪಕ್ಷ ಸೂಚಿಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಹೇಳಿದ್ದಾರೆ. ನನಗೆ ಅಂತಹ ಯಾವುದೇ ಸೂಚನೆ ಬಂದಿಲ್ಲ. ಒಂದೇ ವೇಳೆ ರಾಜೀನಾಮೆ ನೀಡುವಂತೆ ಹೇಳಿದರೆ, ಆದೇಶ ಪಾಲಿಸುವುದಾಗಿ ಅವರು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)