ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ ತರಿಸಿದವರೇ ಮಳೆ ನಿಲ್ಲಿಸಬೇಕು

By Super Admin
|
Google Oneindia Kannada News

Offer prayers to stop rain in north Karnataka
2009ರ ಸಾಲಿನಲ್ಲಿ ಕರ್ನಾಟಕದಲ್ಲಿ ಮುಂಗಾರು ಕಣ್ಣಾಮುಚ್ಚಾಲೆ ಆಟ ಆಡಿತು. ಸಕಾಲಕ್ಕೆ ಮಳೆ ಸುರಿಯದೆ ಜನ ಜಾನುವಾರುಗಳು ಕಂಗಾಲಾದವು. ಉತ್ತುವ, ಬಿತ್ತುವ ಕೆಲಸ ಕಾರ್ಯಗಳಿಗೆ ಕೊಡಲಿ ಏಟು ಬಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆಗಳನ್ನು ತಜ್ಞರು ಊಹಿಸತೊಡಗಿದರು. ಮೋಡ ಬಿತ್ತನೆಯ ಸುದ್ದಿಗಳು ಪತ್ರಿಕೆಗಳ ಪುಟಗಳಲ್ಲಿ, ಟಿವಿ ತೆರೆಗಳಲ್ಲಿ, ಇಂಟರ್ ನೆಟ್ಟಿನ ಪರದೆಗಳಲ್ಲಿ, ಆಕಾಶವಾಣಿಯಲ್ಲಿ ಮಳೆ ಬೀಳಿಸಿದವು. ಗಿಟ್ಟಲಿಲ್ಲ. ಪ್ರಜೆಗಳು, ಪ್ರಜಾಪ್ರತಿನಿಧಿಗಳು, ಸರಕಾರ, ಕೃಷಿ, ಮುಜರಾಯಿ ಇಲಾಖೆಗಳು ಕಲೆತು ವರುಣನ ಕೃಪೆ ಬೇಡಿ ಕರ ಜೋಡಿಸಿ ಮುಗಿಲತ್ತ ಕಣ್ಣುನೆಟ್ಟವು.

ರಾಜ್ಯದ ಪ್ರಾರ್ಥನಾ ಮಂದಿರಗಳಲ್ಲಿ ಯಡಿಯೂರಪ್ಪನವರ ಸರಕಾರಿ ಕೃಪಾ ಪೋಷಿತ ಪೂಜೆ ಪುನಸ್ಕಾರಗಳು ಏರ್ಪಾಟಾದವು. ಜಪ್ಪಯ್ಯ ಎಂದರೂ ಮಳೆ ಸುಳಿವು ಸಿಗಲಿಲ್ಲ. 80ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ಪ್ರದೇಶಗಳಾದವೆಂಬ ಘೋಷಣೆ ವಿಧಾನಸೌಧದಿಂದ ಹೊರಬಿತ್ತು. ಬರಗಾಲ ಪೀಡಿತ ಪ್ರದೇಶಗಳ ಅಧ್ಯಯನಕ್ಕಾಗಿ ಕೇಂದ್ರದಿಂದ ತಜ್ಞರ ತಂಡ ರಾಜ್ಯಕ್ಕೆ ಬಂದು, ತಿರುಗಿ ದೆಹಲಿಗೆ ತೆರಳಿತು. ಇವೆಲ್ಲ ಆಗಿಹೋಯಿತು. ಈ ಮಧ್ಯೆ ಸರಕಾರದ ಆಶ್ರಯದಲ್ಲಿ ನಡೆದ ಪೂಜಾ ವಿಧಿಗಳನ್ನು ನಾಸ್ತಿಕರು ಖಂಡಿಸಿ ಹೇಳಿಕೆ ಕೊಟ್ಟರು.

ಅಂತೂ ಇಂತೂ, ತದನಂತರದ ದಿನಗಳಲ್ಲಿ ಕ್ರಮೇಣ ಮಳೆ ಬೀಳಲಾರಂಭಿಸಿತು. ರಾಜ್ಯದಲ್ಲಿ ಚದುರಿದಂತೆ ಮಳೆಯೇನೋ ಬಿತ್ತು. ಆದರೆ ಮಳೆ ದೇವರ ಡಿಸ್ಟಿಬ್ಯೂಷನ್ ನೆಟ್ ವರ್ಕ್ನಲ್ಲಿ ಕಂಡುಬಂದ ಲೋಪದೋಷಗಳಿಂದಾಗಿ ಮಳೆ ಸಮಾರಾಧನೆ ಆಗದೆ, ಒಂದು ಜಿಲ್ಲೆಗೆ ಬೆಣ್ಣೆ ಇನ್ನೊಂದು ಜಿಲ್ಲೆಗೆ ಸುಣ್ಣ ಎನ್ನುವಂತಾಯಿತು.

ಆಕಾಶದಲ್ಲಿ ಏನೇನು ಕರಾಮತ್ತುಗಳು ನಡೆದವೋ, ದೇವರೇ ಬಲ್ಲ. ಕರ್ನಾಟಕ ಜನರ ಒಕ್ಕೊರಲ, ಭಕ್ತಿಭಾವದ ಪ್ರಾರ್ಥನೆಗೆ ಶಿವ ಓಗೊಟ್ಟನೋ ಹೇಳಲಾರೆವು. ಹರನ ಜಡೆಯಿಂದ, ಹರಿಯ ಅಡಿಯಿಂದ, ಋಷಿಯ ತೊಡೆಯಿಂದ ನೀರು ಇಳಿಯತೊಡಗಿತು. ಎಷ್ಟೆಂದರೆ, ಕೆರೆ ಕಟ್ಟೆ ಕಾಲುವೆ ನದಿಗಳು ತುಂಬಿ ಹರಿದವು. ಭದ್ರವಾದ ಮನೆ, ಆಶ್ರಯ ಇಲ್ಲದ ಜನ ಮಳೆಹಾವಳಿಗೆ ತುತ್ತಾಗಿ ಸಾಯಲಾರಂಭಿಸಿದರು. ನಿನ್ನೆ ಮೊನ್ನೆ ಅಂದರೆ ಕಳೆದ ಮಂಗಳವಾರ, ಬುಧವಾರದ ಬಿದ್ದ ಕುಂಭದ್ರೋಣ ಮಳೆಗೆ ಕನಿಷ್ಟ 32 ಮಂದಿ ಜೀವತೆತ್ತರು. ಈ ಸಾವುಗಳು ದೇವರಾಣೆಗೂ ನ್ಯಾಯವಲ್ಲ.

ಮಳೆ ಹಾವಳಿಯನ್ನು ತಡೆಯಲು ಭಾಜಪ ಸರಕಾರ ಏನಾದರೊಂದು ಕಾರ್ಯಕ್ರಮವನ್ನು ತತ್ ಕ್ಷಣ ಕೈಗೊಳ್ಳಬೇಕೆಂದು ದಟ್ಸ್ ಕನ್ನಡ ಆಗ್ರಹಿಸುತ್ತದೆ. ಮಳೆ ನಿಲ್ಲಿಸೋ ಮಹಾರಾಯ ಎಂದು ಬೇಡುವ ಪ್ರಾರ್ಥನಾ ವಿಧಿಗಳನ್ನು ಕರ್ನಾಟಕದ ಎಲ್ಲ ಗುಡಿ, ಇಗರ್ಜಿ, ಮಸೀದಿಗಳಲ್ಲಿ ಈ ಕೂಡಲೇ ಹಮ್ಮಿಕೊಳ್ಳಬೇಕೆಂದು ಒತ್ತಾಯಿಸುತ್ತದೆ. ಗಂಗಾಜಲ ಖ್ಯಾತಿಯ ಕೃಷ್ಣಯ್ಯ ಶೆಟ್ಟಿ ರಾಜೀನಾಮೆ ಕೊಟ್ಟು ಆನಂತರ ಸೋಮಣ್ಣ ಚುನಾವಣೆಯಲ್ಲಿ ಸೋತ ನಂತರ ಮುಜರಾಯಿ ಇಲಾಖೆ ಹೆಡ್ ಲೆಸ್ ಆಗಿದೆ. ಆದ್ದರಿಂದ, ಎಲ್ಲದಕ್ಕೂ ನೀವೇ ಕಾರಣ ಬಿ.ಎಸ್. ಯಡಿಯೂರಪ್ಪ.

ಮಳೆ ಇಲ್ಲದಾಗ ಮಳೆ ಬರಲೆಂದು ಹೋಮ ಹವನ ಆಯಿತು, ಮಂಡೂಕಗಳ ಮದುವೆಯಾಯಿತು, ಕತ್ತೆಗಳ ಮೆರವಣಿಗೆಯಾಯಿತು, ನಾಯಿ ನರಿ ವಿವಾಹ ಮಾಡಲಾಯಿತು. ಇವುಗಳಿಂದ ಮಳೆ ಬರುವುದು ಸಾಧ್ಯವಾದರೆ ನಿಲ್ಲಿಸುವುದೂ ಸಾಧ್ಯವಿಲ್ಲವೆ? ಪರ್ಜನ್ಯ ಸೂಕ್ತಕ್ಕೆ ಮಳೆ ಒಲಿಯುವುದಾದರೆ ಮಳೆ ನಿಲ್ಲಿಸುವುದಕ್ಕೂ ಒಂದು ಸೂಕ್ತ ಇರಬೇಕು. ಆ ಸೂಕ್ತವನ್ನು ಕಾಯಾ ವಾಚಾ ಮನಸಾ ಪಠಿಸಲು ಈಗ ಕಾಲ ಸೂಕ್ತ ಎಂದು ನೆನಪಿಸಲಾಗುತ್ತಿದೆ. ಮಂತ್ರಕ್ಕೆ ಮಾವಿನಕಾಯಿ ಉದುರುವುದಾದರೆ, ತೆಂಗಿನಕಾಯಿಯೂ ಉದುರಬೇಕಲ್ಲವೆ? ಟ್ರೈ ಮಾಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X