• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಸ್ತೆಯ ಮೇಲೆ ಶ್ರೀಸಾಮಾನ್ಯನ ದಿಗ್ಬಂಧನ!

By * ಪ್ರಸಾದ ನಾಯಿಕ
|
ಬೆಂಗಳೂರಿಗರಿಗೆ ಟ್ರಾಫಿಕ್ ಜಾಮ್ ಹೊಸದಲ್ಲ. ಒಂದು ಸಣ್ಣ ಮಳೆಯಾದರೂ ಸಾಕು ನಾಲ್ಕು ಮೈಲಿ ಉದ್ದ ವಾಹನಗಳ ಕ್ಯೂ ಎಲ್ಲೆಂದರಲ್ಲಿ ಕಂಡುಬರುತ್ತದೆ. ಅದರಲ್ಲೂ ರಾಜಕೀಯ ಪಕ್ಷಗಳ ಸಾಧನಾ ಸಮಾವೇಶಗಳು, ಪ್ರತಿಭಟನಾ ರ‌್ಯಾಲಿಗಳು, ಪಾಪ್ ಹಾಡುಗಾರರ ಸಂಗೀತ ಸಂಜೆಗಳು ಜರುಗಿದರಂತೂ ಮನೆ ಮುಟ್ಟುವ ಸಮಯ ಖಾತ್ರಿಯಿರುವುದಿಲ್ಲ.

ಕಚೇರಿ ಸೇರುವ ತವಕ, ವಾಹನ ದಟ್ಟಣೆಯಿಂದಾಗುವ ವಾಯು ಮಾಲಿನ್ಯ, ದಟ್ಟಣೆ ಮಾಡುವವರ ಉಡಾಫೆ, ಪೊಲೀಸರ ಅಸಹಕಾರ, ರಾಜಕೀಯ ಪಕ್ಷಗಳ ನಿರ್ಲಕ್ಷ್ಯ ಆ ಸಮಯದಮಟ್ಟಿಗೆ ರಸ್ತೆಯ ಮೇಲೆ ನಿಂತವರ ಬದುಕನ್ನು ನರಕ ಮಾಡಿಬಿಟ್ಟಿರುತ್ತದೆ. ಅವರ ಗೋಳನ್ನು ಕೇಳುವವರಿರುವುದಿಲ್ಲ, ಕೂಗು ಯಾರನ್ನೂ ಮುಟ್ಟುವುದಿಲ್ಲ, ಗೊಣಗಾಟ ಬದಿಯ ಚಾಲಕನನ್ನೂ ದಾಟಿರುವುದಿಲ್ಲ. ಒಟ್ಟಿನಲ್ಲಿ ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡವರ ಗೊಣಗಾಟಗಳು ಗಾಳಿಯಲ್ಲಿ ಗುದ್ದಿ ಮೈಕೈ ನೋವು ಮಾಡಿಕೊಂಡಂತೆ.

ಇಂಥದೇ ನರಕಯಾತನೆ ಶನಿವಾರ ಸೆಪ್ಟೆಂಬರ್ 26ರಂದು ವಿಧಾನಸೌಧದ ಸುತ್ತಮುತ್ತ, ಇಂಡಿಯನ್ ಎಕ್ಸ್ ಪ್ರೆಸ್, ಕ್ವೀನ್ಸ್ ರಸ್ತೆಯ ಬಳಿ, ಚಿನ್ನಸ್ವಾಮಿ ಸ್ಟೇಡಿಯಂ ಹತ್ತಿರ ವಾಹನ ಚಾಲಕರು ಅನುಭವಿಸಿದ್ದಾರೆ. ಬೆಳಿಗ್ಗೆಯಿಂದಲೇ ಪ್ರತಿಭಟನೆ, ಬಂಧನದ ಪ್ರಹಸನ ಪ್ರಾರಂಭವಾಗಿದ್ದರಿಂದ ನೂರಾರು ಜನ ತಲುಪಬೇಕಾದ ಸ್ಥಳ ಸಮಯದಲ್ಲಿ ತಲುಪಿಲ್ಲ. ಅವರಲ್ಲಿ ಅನೇಕರು ಆಸ್ಪತ್ರೆಗೆ ಹೋಗುವವರಿರುತ್ತಾರೆ, ಬ್ಯಾಂಕಿಗೆ ಹಣ ಕಟ್ಟುವವರಿರುತ್ತಾರೆ, ವಿಮಾನ ನಿಲ್ದಾಣ ತಲುಪುವವರಿರುತ್ತಾರೆ. ಅಂಬುಲನ್ಸ್ ಗಳು ಒಂದೇ ಸವನೆ ಸೈರನ್ ಮೊಳಗಿಸುತ್ತಿದ್ದರೂ ಬದಿಗೆ ಸರಿದು ಜಾಗ ಬಿಡುವ ಸ್ಥಿತಿಯಲ್ಲಿ ಚಾಲಕರು ಇರಲಿಲ್ಲ. ಇವರ್ಯಾರರ ಬಗ್ಗೆ ಪ್ರತಿಭಟನಕಾರರಾಗಲಿ, ಸರಕಾರವಾಗಲಿ ತಲೆಕೆಡಿಸಿಕೊಂಡಿರಲಿಲ್ಲ. ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದ್ದು ಈ ಸುತ್ತಲಿನ ಪ್ರದೇಶದ ವಾಹನದ ಮಾರ್ಗವನ್ನು ಕೂಡ ಪೊಲೀಸರು ಬದಲಾಯಿಸದಿರುವುದು.

ಈ ವಾಹನ ದಟ್ಟಣೆಗೆ, ಸಾರ್ವಜನಿಕರಿಗಾದ ಅನನುಕೂಲಕ್ಕೆ ತಾವು ಕಾರಣವೇ ಅಲ್ಲ ಅಂತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೊಂಬಡ ಹೊಡೆದುಕೊಳ್ಳುತ್ತಿದ್ದರು. ಉಗ್ರರಿಗಿಂತ ಉಗ್ರರಾಗಿದ್ದ ಉಗ್ರಪ್ಪ ಮತ್ತು ಕೂಗಾಡುವುದರಲ್ಲಿ ನಿಸ್ಸೀಮರಾದ ತೇಜಸ್ವಿನಿಯವರು ತಮ್ಮ ಎಂದಿನ 'ಸಹಜ' ಕಾರ್ಯದಲ್ಲಿ ತೊಡಗಿದ್ದರು. ಇದನ್ನೆಲ್ಲ ಗಮನಿಸಬೇಕಾದ ಗೃಹಮಂತ್ರಿ ವಿಎಸ್ ಆಚಾರ್ಯರು ತಣ್ಣಗೆ ಎಸಿ ರೂಮಿನಲ್ಲಿ ಕುಳಿತು, ಕಾಂಗ್ರೆಸ್ ನಾಯಕರ ಬಂಧನವನ್ನು ಸಮರ್ಥಿಸಿಕೊಳ್ಳುತ್ತಿದ್ದರು. ವಿಧಾನಸೌಧ ಸುತ್ತಮುತ್ತ ಕಾಂಗ್ರೆಸ್ ಕಾರ್ಯಕರ್ತರಿರಲಿ ಮಾಧ್ಯಮದವರನ್ನೂ ಹತ್ತಿರ ಸುಳಿಯಲು ಸರಕಾರ ಬಿಟ್ಟಿಲ್ಲ. ಗಂಡ ಹೆಂಡಿರ ಜಗಳದಲಿ ಕೂಸು ಬಡವಾಯ್ತು ಎನ್ನುವಂತೆ ಎರಡು ರಾಜಕೀಯ ಪಕ್ಷಗಳ ಬಡಿದಾಟದಲಿ ಬಡವಾಗಿರುವುದು ಅಮಾಯಕ ಸಾರ್ವಜನಿಕರು.

ಕಾಂಗ್ರೆಸ್ ಹಮ್ಮಿಕೊಂಡಿದ್ದ ವಿಧಾನಸೌಧ ದಿಗ್ಬಂಧನ ಕಾರ್ಯಕ್ರಮಕ್ಕೆ ಮೊದಲೇ ಅಡ್ಡಗಾಲು ಹಾಕಿದ ಬಿಜೆಪಿ ಸರಕಾರ ಕಾಂಗ್ರೆಸ್ ನ ಪ್ರತಿಭಟನಾ ಅಸ್ತ್ರವನ್ನು ಬತ್ತಳಿಕೆಯಿಂದ ಹೊರಬರುವ ಮುನ್ನವೇ ನಿಷ್ಕ್ರಿಯ ಮಾಡಿಬಿಟ್ಟಿತು. ವಿರೋಧ ಪಕ್ಷದ ಮೂಲಭೂತ ಹಕ್ಕಾದ ಆಡಳಿತ ಪಕ್ಷದ ವಿರುದ್ಧದ ಪ್ರತಿಭಟನಾ ಹಕ್ಕನ್ನು ಬಳಸುವ ಮೊದಲೇ ಕಸಿದುಕೊಂಡಿತು. ಕಾಂಗ್ರೆಸ್ ನಾಯಕರು ವಿಧಾನಸೌಧ ಮೆಟ್ಟಿಲು ಹತ್ತುವ ಮೊದಲೇ ಅವರನ್ನು ಜೈಲಿಗೆ ತಳ್ಳಿಬಿಟ್ಟಿತು.

ಭಾರತೀಯ ಜನತಾ ಪಕ್ಷ ಕೂಡ ಅನೇಕಾರು ವರ್ಷಗಳಿಂದ ವಿರೋಧ ಪಕ್ಷಗಳ ಸೀಟಿನಲ್ಲಿ ಕುಳಿತಿದೆ. ವಿಧಾನಸೌಧದ ಮೈಲ್ಛಾವಣಿ ಕಿತ್ತುಹೋಗುವಂತೆ ಆಡಳಿತ ಪಕ್ಷದ ವಿರುದ್ಧ ಕಿರುಚಾಡಿದೆ. ಸಾಕ್ಷಾತ್ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪನವರು ಕೂಡ ಪ್ರತಿಭಟಿಸುವ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆದರೆ, ಇಂದು ಬಿಜೆಪಿ ಸರಕಾರ ತೆಗೆದುಕೊಂಡ ಕ್ರಮ ಪ್ರಜಾಪ್ರಭುತ್ವಕ್ಕೆ ಇಟ್ಟ ಕಪ್ಪುಚುಕ್ಕೆ.

ದಿಗ್ಬಂಧನ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 144ದ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಕಾಂಗ್ರೆಸ್ ಇದನ್ನು ಉಲ್ಲಂಘಿಸಿ ಪ್ರತಿಭಟನೆಗೆ ಮುಂದಾದಾಗ ಗೊಂದಲದ ವಾತಾವರಣ ಉಂಟಾಯಿತು. ಇದರಿಂದ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದಾಗ ಅವರು ನಿಂತಲ್ಲೇ ಪೊಲೀಸರು ದಾಳಿಯಿಟ್ಟು ಪ್ರತಿಭಟನಾಕಾರರನ್ನು ಮುಂದೆ ಹೋಗಲು ಬಿಟ್ಟಿಲ್ಲ. ಇದರಿಂದ ಸಹಜವಾಗಿ ಟ್ರಾಫಿಕ್ ಸಮಸ್ಯೆ ತಲೆದೋರಿದೆ. ಕ್ವೀನ್ಸ್ ರಸ್ತೆ, ಇಂಡಿಯನ್ ಎಕ್ಸ್ ಪ್ರೆಸ್ ವೃತ್ತ, ಬಸವೇಶ್ವರ ವೃತ್ತಗಳಲ್ಲಿಯೇ ಕಾಂಗ್ರೆಸ್ ಮುಖಂಡರನ್ನು ತಡೆಯಲಾಗಿದೆ.

ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರೂ ನಾಯಕ ಮುಂದೆ ಅಕ್ಷರಶಃ ಮೊಳಕಾಲೂರಿದವರು ಪೊಲೀಸ್ ಅಧಿಕಾರಿಗಳು. ಸರಕಾರದ ಆಜ್ಞೆಯನ್ನು ಪಾಲನೆ ಮಾಡುತ್ತಿದ್ದ ಪೊಲೀಸ್ ಅಧಿಕಾರಿಗಳ ಮಾತನ್ನು ಕೇಳುವ ಸ್ಥಿತಿಯಲ್ಲಿ ಸಿದ್ದರಾಮಯ್ಯ ಮತ್ತು ಪಟಾಲಂ ಇರಲಿಲ್ಲ. 'ಸಾರ್, ಸಾರ್, ಪ್ಲೀಸ್, ಮುಂದೆ ಹೋಗಬೇಡಿ' ಅಂತ ಅಂಗಲಾಚುತ್ತಿದ್ದರೂ, 'ರೀ ನೀವು ಮುಂದೊಂದು ದಿನ ನಮ್ಮ ಜೊತೆ ಕೆಲಸ ಮಾಡೇ ಮಾಡಬೇಕಾಗುತ್ತದೆ' ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಗಂಡಸರು ಹೆಂಗಸರೆನ್ನದೇ ಎಲ್ಲರನ್ನೂ ಬಂಧಿಸಿರುವ ಪೊಲೀಸರು ಆಡುಗೋಡಿಯಲ್ಲಿರುವ ಪೊಲೀಸ್ ಶ್ವಾನದಳವಿರುವ ಜಾಗದಲ್ಲಿ ಶೆಡ್ ನಲ್ಲಿ ಕೂಡಿಟ್ಟಿರುವುದು ಯಾವ ಕಾರಣಕ್ಕೋ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವೇ ಉತ್ತರಿಸಬೇಕು. ನಾಯಿಗಳ ಜೊತೆ ನಮ್ಮನ್ನೂ ಇರಿಸಿ ನಾಯಿಪಾಡು ಮಾಡಿದ್ದಾರೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ನಿಜಕ್ಕೂ ಇವರಿಬ್ಬರ ಕಿತ್ತಾಟದಲಿ ನಾಯಿಪಾಡು ಅನುಭವಿಸುತ್ತಿರುವುದು ಸಾರ್ವಜನಿಕರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more