ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದುವರಿದ ವರುಣನ ಆರ್ಭಟ; 5 ಸಾವು

By Staff
|
Google Oneindia Kannada News

Heavy downpour continues in Bengaluru
ಬೆಂಗಳೂರು, ಸೆ. 25 : ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ನೈಋತ್ಯ ಮಾರುತ ನಿರ್ಗಮಿಸುತ್ತಿರುವ ಕಾರಣ ರಾಜ್ಯದ ಈಶಾನ್ಯ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಕೂಡ ಧಾರಾಕಾರ ಮಳೆಯಾಗುತ್ತಿದೆ. ಬೆಂಗಳೂರು ನಗರದಲ್ಲಿ ಬುಧವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ಬಹುತೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಾಜ್ಯದಲ್ಲಿ ಇದುವರೆಗೆ ಐದು ಜನ ಮೃತಪಟ್ಟಿದ್ದಾರೆ. ಹಾರೋಕ್ಯಾತನಹಳ್ಳಿಯ ಮತ್ತೊಬ್ಬ ವ್ಯಕ್ತಿಯೊಬ್ಬ ನೀರಿನಲ್ಲಿ ಕೊಚ್ಚಿ ಹೋದ ಘಟನೆಯೂ ನಡೆದಿದೆ.

ವರುಣನ ಆರ್ಭಟಕ್ಕೆ ಚಿತ್ರದುರ್ಗ ಜಿಲ್ಲೆಯಲ್ಲಿ ಮೂವರು ಮತ್ತು ಕೋಲಾರ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ ಬುಧವಾರ ರಾತ್ರಿ ಬೆಂಗಳೂರು ನಗರದಲ್ಲಿ ದಾಖಲೆ 69 ಮಿ.ಮೀ ಮಳೆಯಾಗಿದೆ. ನಾಗರಿಕರ ಪ್ರಾಣ ಕಾಪಾಡಲು ಅಗ್ನಿಶಾಮಕ ದಳದವರು ಹರಸಾಹಸಪಡುತ್ತಿದ್ದಾರೆ. ತಡರಾತ್ರಿ ಇಷ್ಟೆಲ್ಲಾ ಘಟನೆ ನಡೆದರೂ ಯಾವುದೇ ಅನಾಹುತಕ್ಕೆ ಅವಕಾಶ ಕಲ್ಪಿಸಿಕೊಡದೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಚುರುಕಿನಿಂದ ಕೆಲಸ ನಡೆಸುತ್ತಿದ್ದಾರೆ. ಜಲಾವೃತಗೊಂಡ ಪ್ರದೇಶದಲ್ಲಿ ನಾಗರಿಕರ ಜೀವ ಮತ್ತು ಆಸ್ತಿ ಕಾಪಾಡಿದ ಅಗ್ನಿಶಾಮಕ ದಳದ ಅಧಿಕಾರಿಗಳು ಸೇರಿದಂತೆ 46 ಸಿಬ್ಬಂದಿಗಳು ನಾಗರಿಕರ ಪಾಲಿಗೆ ಹೀರೋಗಳಾಗಿದ್ದಾರೆ.

ಈ ಮಧ್ಯೆ ಮಳೆ ತೊಂದರೆ ಬಗ್ಗೆ ಸಾರ್ವಜನಿಕರು ನೀಡುವ ದೂರು ಸ್ವೀಕರಿಸಲು ಸ್ವತಃ ಬಿಬಿಎಂಪಿ ಕಛೇರಿಯಲ್ಲಿ ಕುಳಿತ ಸಾರಿಗೆ ಸಚಿವ ಅಶೋಕ್ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದಾರೆ. ಗುರುವಾರ (ಸೆ 24) ಸಂಜೆ 5.30ರ ಸುಮಾರಿಗೆ ಬಿಬಿಎಂಪಿ ಕಚೇರಿಗೆ ಬಂದ ಸಚಿವರು ತಡ ರಾತ್ರಿಯವರೆಗೆ ಇದ್ದು ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡುತ್ತಿದ್ದರು.

ಬೆಂಗಳೂರು ನಗರದಲ್ಲಿನ ಯಶವಂತಪುರ ಆರ್ ಎಂ ಸಿ ಯಾರ್ಡ್ ಗೋದಾಮುಗಳು ಹೆಚ್ಚು ಕಮ್ಮಿ ಮುಳುಗಿಹೋಗಿದೆ. ರಾಜಾಜಿನಗರ, ವಿಜಯನಗರ, ನಂದಿನಿ ಲೇಔಟ್, ಜೆಸಿ ನಗರ, ಮೆಜಿಸ್ಟಿಕ್, ಕುಮಾರಪಾರ್ಕ್, ನಾಗರಬಾವಿ ಮತ್ತಿತರ ಬಡಾವಣೆಗಳಲ್ಲಿ ವರುಣನ ಆರ್ಭಟ ಜೋರಾಗಿತ್ತು. ಮೈಸೂರು ರಸ್ತೆ, ಹೊಸೂರು ರಸ್ತೆ, ಮಹಾತ್ಮಾ ಗಾಂಧಿ ರಸ್ತೆ, ನೃಪತುಂಗ ರಸ್ತೆ, ಜೆ ಸಿ ರಸ್ತೆ, ಕಲಾಸಿಪಾಳ್ಯ, ಶಿವಾಜಿನಗರ,ಕಾರ್ಪೋರೇಶನ್ ವೃತ್ತ, ಮೆಜೆಸ್ಟಿಕ್ ಮುಂತಾದ ಪ್ರದೇಶಗಳಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X