ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಣೆಯಾದ ಮುಖ್ಯಮಂತ್ರಿಗೆ ಅವಿರತ ಶೋಧ

By Staff
|
Google Oneindia Kannada News

Missing CM still not traced ; situation scary
ಹೈದರಾಬಾದ್, ಸೆ. 2 : ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಹಾಗೂ ಐದು ಮಂದಿ ಇದ್ದ ಬೆಲ್ 430 ಹೆಲಿಕ್ಯಾಪ್ಟರ್ ಸುಳಿವು ಸಿಕ್ಕಿಲ್ಲ. ಆಂಧ್ರಪ್ರದೇಶದಾದ್ಯಂತ ತಲ್ಲಣ ಉಂಟಾಗಿದ್ದು, ರಾಜಕೀಯ ನೇತಾರರು ಸೇರಿ ಜನರು ತೀವ್ರ ತಳಮಳಗೊಂಡಿದ್ದಾರೆ. ರೆಡ್ಡಿ ಶೋಧಕ್ಕಾಗಿ 5 ಸಾವಿರ ಸೈನಿಕರು, 5 ಸಿಆರ್ ಪಿಎಫ್ ತಂಡಗಳನ್ನು ಕೇಂದ್ರ ಸರಕಾರ ಕಳುಹಿಸಿದೆ. ಮುಖ್ಯಮಂತ್ರಿಗಳು ಬದುಕಿಬರಲಿ ಎಂಬ ಪ್ರಾರ್ಥನೆ ಆಂಧ್ರಪ್ರದೇಶದಲ್ಲಿ ಸಾಮಾನ್ಯವಾಗಿದೆ.

ರೆಡ್ಡಿ ಕಣ್ಮರೆ ಅವರ ಕುಟುಂಬಕ್ಕೆ ತೀವ್ರ ಆಘಾತವುಂಟು ಮಾಡಿದೆ. ಕುಟುಂಬ ಸದಸ್ಯರ ಅಕ್ರಂದನ ಮುಗಿಲು ಮುಟ್ಟಿದೆ. ರೆಡ್ಡಿ ಕುಟುಂಬಕ್ಕೆ ಸೋನಿಯಾಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್, ಪಿ ಚಿದಂಬರಂ ಸಮಾಧಾನ ಹೇಳಿದ್ದಾರೆ. ಆಂಧ್ರಪ್ರದೇಶದ ರಾಜಕೀಯ ನೇತಾರರು ಸಿಎಂ ಸುರಕ್ಷಿತವಾಗಿ ಮರಳು ಬರಲಿ ಎಂದು ದೇವರಲ್ಲಿ ಮೊರೆ ಇಟ್ಟಿದ್ದಾರೆ. ಚೀನಾ ಪ್ರವಾಸ ಕೈಗೊಂಡಿರುವ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಆಂಧ್ರಪ್ರದೇಶದ ಸಿಎಂ ಸುರಕ್ಷಿತವಾಗಿ ವಾಪಸ್ಸಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಹಣಕಾಸು ಸಚಿವ ರೋಸಯ್ಯ ಅವರನ್ನು ಸಂಪರ್ಕಿಸಿ ಧೈರ್ಯದಿಂದ ಇರಲಿ ಹೇಳಿದ್ದಾರೆ.

ಸುಮಾರು 11 ಹೆಲಿಕ್ಯಾಪ್ಟರ್ ಗಳು ಶೋಧ ಕಾರ್ಯ ಮುಂದುವರೆಸಿದ್ದು, ದೇಶದ ರಾಜಕೀಯದಲ್ಲಿ ತಲ್ಲಣ ಉಂಟು ಮಾಡಿದೆ. ಸಿಎಂ ನಾಪತ್ತೆ ನಿಗೂಢವಾಗಿದ್ದು, ರೆಡ್ಡಿ ಜೊತೆ ಐಎಎಸ್ ಅಧಿಕಾರಿ ಸುಭ್ರಮಣ್ಯಂ, ರಕ್ಷಣಾ ಅಧಿಕಾರಿ ವಿಸ್ಲಿ, ಇಬ್ಬರು ಪೈಲೆಟ್ ಗಳು ಸೇರಿ ಒಟ್ಟು ಐದು ಮಂದಿ ಹೆಲಿಕ್ಯಾಪ್ಟರ್ ನಲ್ಲಿದ್ದರು. ರಾತ್ರಿ ಶೋಧಕ್ಕಾಗಿ ಕಡಿಮೆ ಎತ್ತರದಲ್ಲಿ ಹಾರಾಡುವ ವಿಮಾನಗಳನ್ನು ಕಳುಹಿಸಲಾಗಿದೆ.

ಹೈಫವರ್ ಸರ್ಚ್ ಲೈಟ್ ಗಳೊಂದಿಗೆ ಹಲವರು ನಲ್ಲಮಲ್ಲ ಅರಣ್ಯದಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಪತ್ತೆ ಕಾರ್ಯಕ್ಕಾಗಿ 14 ತಂಡಗಳನ್ನು ರಚಿಸಿ ಅರಣ್ಯದಲ್ಲಿ ಕಾರ್ಯಚರಣೆಗೆ ರವಾನಿಸಲಾಗಿದೆ. ಒಂದೊಂದು ತಂಡದಲ್ಲಿ 8 ಮಂದಿ ಇದ್ದಾರೆ. ಅವರಿಗೆ ಟಾರ್ಚ್ ಲೈಟ್ ಗಳು ಹಾಗೂ ಬಿಎಸ್ ಎನ್ಎಲ್ ಮೊಬೈಲ್ ಗಳೊಂದಿಗೆ ಅರಣ್ಯದಲ್ಲಿ ಕಳುಹಿಸಲಾಗಿದೆ. ಪುಲಿವೆಂದುಲ ಚರ್ಚ್ ನಲ್ಲಿ ಮುಖ್ಯಮಂತ್ರಿ ಸಹೋದರ ಮಾಜಿ ಸಂಸದ ವೈ ಎಸ್ ವಿವೇಕಾನಂದರೆಡ್ಡಿ, ಇನ್ನೊಂದಡೆ ಅನೇಕ ಕಾರ್ಯಕರ್ತರು, ಅಭಿಮಾನಿಗಳು ಚರ್ಚೆ ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸುತ್ತಿದ್ದಾರೆ.

ಚಿರಂಜೀವಿ ಪ್ರತಿಕ್ರಿಯೆ

ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಕ್ಷೇಮವಾಗಿ ಹಿಂತಿರುಗಲು ಪ್ರತಿಯೊಬ್ಬರು ದೇವರಲ್ಲಿ ಪ್ರಾರ್ಥಿಸಿಕೊಳ್ಳಿ ಎಂದು ಪ್ರಜಾರಾಜ್ಯಂ ಪಕ್ಷದ ಚಿರಂಜೀವಿ ಮನವಿ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಯಾವುದೇ ಆತಂಕವಿಲ್ಲದೆ ಕ್ಷಮವಾಗಿ ವಾಪಸ್ಸಾಗಲಿದ್ದಾರೆ ಎನ್ನುವ ವಿಶ್ವಾಸ ನಮಗಿದೆ ಎಂದು ಅವರು ಹೇಳಿದರು. ವೈಎಸ್ ಕುಟುಂಬಕ್ಕಾಗಲಿ, ಪ್ರಜೆಗಳಿಗಾಗಲಿ ದೇವರು ಅನ್ಯಾಯ ಮಾಡುವುದಿಲ್ಲ ಎಂದು ನಾನು ನಂಬಿದ್ದೇನೆ. ಸಿಎಂ ದೇವರನ್ನು ಅಪಾರವಾಗಿ ನಂಬುತ್ತಿದ್ದರು. ಅವರ ನಂಬಿಕೆ ಹುಸಿಯಾಗುವುದಿಲ್ಲ. ಅವರು ಕ್ಷೇಮವಾಗಿ ಬರಲಿದ್ದಾರೆ ಎಂದು ಚಿರಂಜೀವಿ ಹೇಳಿದರು.

ಚಂದ್ರಬಾಬು ನಾಯ್ಡು ಪ್ರತಿಕ್ರಿಯೆ

ಪಕ್ಷಭೇಧ ಮರೆತು ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಪತ್ತೆ ಕಾರ್ಯಕ್ಕಾಗಿ ಎಲ್ಲರೂ ಪ್ರಯತ್ನಿಸಬೇಕು ಎಂದು ತೆಲುಗುದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪತ್ತೆ ಕಾರ್ಯಕ್ಕಾಗಿ ಅಧಿಕಾರಿಗಳು ಸಹಾಯ ಸಹಕಾರಗಳನ್ನು ಕೊಡಬೇಕು ಎಂದರು. ಕತ್ತಲಲ್ಲಿ ಸಹ ವೇಗವಾಗಿ ಪಯಣಿಸುವ ಹೆಲಿಕಾಪ್ಟರ್ ಗಳನ್ನು ಕೇಂದ್ರ ಸರಕಾರ ಕಳುಹಿಸಿದೆ ಎಂದು ಚಂದ್ರಬಾಬು ನಾಯ್ಡು ತಿಳಿಸಿದರು. ಅವರು ಶೀಘ್ರವಾಗಿ ಹಿಂತಿರುಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿರುವುದಾಗಿ ಬಾಬು ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X