• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭದ್ರಾವತಿ ಶಿಕ್ಷಣ ಇಲಾಖೆಯಲ್ಲಿ ಸುಮಂಗಲಾ ರಾಜ್ಯಂ

By * ಶಿ.ಜು. ಪಾಶಾ, ಶಿವಮೊಗ್ಗ
|

ಭದ್ರಾವತಿ, ಆ. 26 : ಭದ್ರಾವತಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮನಸೋಯಿಚ್ಛೆ ನಿರ್ಧಾರಗಳಿಂದ ಸಾಕಷ್ಟು ಸುದ್ದಿಯಲ್ಲಿದೆ. ಸುಮಂಗಲಾ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಭದ್ರಾವತಿಗೆ ಕಾಲಿಟ್ಟ ಕ್ಷಣದಿಂದ ಶಿಕ್ಷಣ ಇಲಾಖೆಯಲ್ಲಿ ಸರ್ವಾಧಿಕಾರಿ ಧೋರಣೆ ಆರಂಭವಾಗಿದೆ. ಶಿಕ್ಷಣಾಧಿಕಾರಿಗಳಿಗೊಂದು ಕಛೇರಿ ಇದ್ದರೂ ಸಹ ಅಲ್ಲಿ ಕೆಲಸ ನಿರ್ವಹಿಸದ ಸುಮಂಗಲಾ ಖಾಸಗೀ ಶಾಲೆಗಳಲ್ಲಿ ಕುಳಿತು ತಮ್ಮ ಕಛೇರಿಯಿಂದ ಕಡತಗಳನ್ನು ತರಿಸಿಕೊಂಡು ಕೆಲಸ ಮಾಡುತ್ತಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಕೆಲ ಸಿಬ್ಬಂದಿಗಳು ಇತ್ತೀಚೆಗಷ್ಟೇ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದೇರ್ಶಕರಿಗೆ ಮೌಖಿಕವಾಗಿ ದೂರು ನೀಡಿರುವ ಬಗ್ಗೆ ಸುದ್ದಿ ಹೊರಬಿದ್ದಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು ಶಿಕ್ಷಕರ ಸಂಘವನ್ನು ಇಬ್ಬಾಗ ಮಾಡಿ, ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಈ ಮೂಲಕ ತಮ್ಮ ಕೆಲವು ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾರವರ ಆದೇಶಗಳನ್ನು ಪಾಲಿಸದ ಕಛೇರಿ ಸಿಬ್ಬಂದಿಗಳು ಸುಮಂಗಲಾರವರಿಂದ ಇಲ್ಲಸಲ್ಲದ ಆರೋಪಗಳನ್ನು ಕೇಳುವಂತಾಗಿದೆ. ಕೆಲ ಸಿಬ್ಬಂದಿಗಳಂತೂ ಬೇರೆ ಕಡೆಗೆ ಸುಮಂಗಲಾರವರ ಕಾಟ ತಾಳಲಾರದೆ ವರ್ಗಾವಣೆ ಮಾಡಿಸಿಕೊಂಡು ಹೋದ ಪ್ರಕರಣಗಳೂ ಇಲ್ಲಿ ಕಾಣಸಿಗುತ್ತವೆ.

ಶಿಕ್ಷಕರ ಕುಂದುಕೊರತೆ ನೀಗಿಸಲೆಂದೇ ಇರುವ ಸಮಿತಿಯನ್ನೂ ಸಹ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ ಸ್ವತಃ ಕೈಗೆತ್ತಿಕೊಂಡಿದ್ದು, ತಮಗೆ ಬೇಕಾದವರನ್ನು ಈ ಸಮಿತಿಯ ಪದಾಧಿಕಾರಿಗಳನ್ನಾಗಿ ಪರಿವರ್ತಿಸಿದ್ದಾರೆ. ತಮಗೆ ಬೇಕಾದಂತೆ ಕುಣಿಯುವವರನ್ನು ಸುಮಂಗಲಾ ಮಣೆ ಹಾಕುತ್ತಿದ್ದಾರೆ. ಸರ್ಕಾರ ಕ್ಷೇತ್ರ ಶಿಕ್ಷಣಾಧಿಕಾರಿಗೆಂದು ವಾಹನವೊಂದನ್ನು ನೀಡಿದ್ದರೂ ಸಹ, ಶಿಕ್ಷಕರ ಸಂಘದ ಪದಾಧಿಕಾರಿಗಳ ಖಾಸಗೀ ವಾಹನದಲ್ಲಿಯೇ ಇವರ ಓಡಾಟ ನಡೆದಿರುತ್ತದೆ. ಹೀಗೆ ನೂರೆಂಟು ಆರೋಪಗಳನ್ನು ಇವರ ಕಛೇರಿಯ ಕೆಲ ಸಿಬ್ಬಂದಿಗಳೇ ಮಾಡುತ್ತಾರೆ.

ಸುಮಂಗಲಾರವರು ಮೇಲಾಧಿಕಾರಿಗಳಿಂದ ಬಂದಂತಹ ಆದೇಶ ಪತ್ರಗಳನ್ನು ಅಥವಾ ಮಾಹಿತಿ ಪತ್ರಗಳನ್ನು ಸಂಬಂಧಪಟ್ಟ ತಮ್ಮ ಸಹಾಯಕರಿಗಾಗಲಿ, ಸಿಬ್ಬಂದಿ ವರ್ಗಕ್ಕಾಗಲಿ ತಿಳಿಸದೆ ತಮ್ಮ ಬಳಿಯೇ ಇಟ್ಟುಕೊಂಡು ಆ ನಂತರದಲ್ಲಿ ಮೇಲಾಧಿಕಾರಿಗಳಿಂದ ಒತ್ತಡ ಬಂದಾಗ ಆರೋಪವನ್ನೆಲ್ಲಾ ತಮ್ಮ ಸಹಾಯಕ ಸಿಬ್ಬಂದಿಗಳ ಮೇಲೆ ಹಾಕಿ, ಷೋಕಾಸ್ ನೋಟಿಸ್ ನೀಡುವಂತಹ ಪ್ರಸಂಗಗಳು ಅನೇಕ ನಡೆದಿವೆ ಎಂದು ಸಿಬ್ಬಂದಿಗಳು ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ 2 ದಿನಗಳ ಕಾಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಜನಾಂಗದ ಸಭೆ ನಡೆಸಲಾಯಿತು. ಈ ಬಗ್ಗೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ವಿಚಾರಿಸಿದಾಗ, ಈ ಪದಾಧಿಕಾರಿಗಳ ವಿರುದ್ಧವೇ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ ಮುನಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಶಿಕ್ಷಕರ ದಿನಾಚರಣೆಯಂದು ನಿಯಮದಂತೆ ಶಿಕ್ಷಣ ಸಂಯೋಜಕರ ಮೂಲಕವೇ ಆಚರಿಸಬೇಕು. ಆದರಿಲ್ಲಿ ಸ್ವತಃ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಮುಂದಾಗಿ, ಈ ದಿನಾಚರಣೆಯ ಹೆಸರಿನಲ್ಲಿ ಅಪಾರ ಹಣವನ್ನು ಅಕ್ರಮವಾಗಿ ಸಂಗ್ರಹಿಸಿದ್ದಾರೆ ಎಂಬ ಆರೋಪಗಳು ಸಹ ಇವರಲ್ಲಿವೆ. ಸ್ವಯಂ ನಿವೃತ್ತಿಯ ಸವಲತ್ತುಗಳನ್ನು ಜಾರಿಗೊಳಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ ಹಣವನ್ನು ಒತ್ತಾಯದಿಂದ ಪಡೆಯುತ್ತಿರುವ ಬಗ್ಗೆಯೂ ಅವರದೇ ಕಛೇರಿಯ ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಇತ್ತೀಚೆಗಷ್ಟೇ ಸೇಂಟ್ ಮೇರೀಸ್ ಶಾಲೆಯಲ್ಲಿ ರಶೀದಿ ರಹಿತ ಹಣ ಸಂಗ್ರಹಣೆ ಬಗ್ಗೆ ಆಕ್ರೋಶಗೊಂಡ ಪೋಷಕರು ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದರು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ ಆ ಶಾಲೆಯಿಂದ ಹಣ ಪಡೆದರೆಂಬ ಸುದ್ದಿಯೂ ಗುಪ್ತವಾಗಿ ಉಳಿದಿಲ್ಲ ಎನ್ನುತ್ತಾರೆ ಅವರದೇ ಕಛೇರಿಯ ಸಿಬ್ಬಂದಿಗಳು. ಅಲ್ಲದೇ, ಶಾಲಾ ಶಿಕ್ಷಕರ ಸಂಘದ ಕೆಲ ಪದಾಧಿಕಾರಿಗಳು ಶಾಲೆಗೆ ಸರಿಯಾಗಿ ಹಾಜರಾಗುವುದಿಲ್ಲ. ಸಂಘದ ಕೆಲಸದ ನೆಪದಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾರವರ ಪ್ರಭಾವಳಿಯಲ್ಲಿ ಈ ಶಿಕ್ಷಕರು ತಾವು ಮಾಡಿದ್ದೆಲ್ಲಾ ದೇಶ ಸೇವೆ ಎಂದುಕೊಂಡಿದ್ದಾರೆ. ತಾಲ್ಲೂಕು ಪಂಚಾಯತಿ ವತಿಯಿಂದ ಈ ಬಗ್ಗೆ ಆದೇಶ ಬಂದಿದ್ದರೂ ಸಹ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳದೆ ಈ ದೇಶೋದ್ಧಾರಕ ಶಿಕ್ಷಕರ ಅನ್ಯಾಯದ ಪರ ವಹಿಸಿ ನಿಂತಿದ್ದಾರೆಂದು ಆರೋಪಗಳು ಕೇಳಿಬರುತ್ತಿವೆ.

ಬಿಇಓ ಸುಮಂಗಲಾ ಹೊಸನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅನೇಕ ಆರೋಪಗಳನ್ನು ಎದುರಿಸುತ್ತಿದ್ದರು. ಈ ತಪ್ಪು ಹೆಜ್ಜೆಗಳನ್ನು ತಿದ್ದಿಕೊಳ್ಳಲು ಶಿಕ್ಷಣ ಇಲಾಖೆ ಸುಮಂಗಲಾರವರಿಗೆ ಅವಕಾಶ ನೀಡಿತ್ತು. ಆದರೆ, ಭದ್ರಾವತಿಯಲ್ಲಿಯೇ ಮತ್ತದೇ ತಪ್ಪು ಹೆಜ್ಜೆಗಳನ್ನು ಸುಮಂಗಲಾ ಇಡತೊಡಗಿದ್ದಾರೆ.

ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾರವರಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಕೂಡಲೇ ಸಮಗ್ರ ತನಿಖೆ ಕೈಗೊಳ್ಳಬೇಕು. ಅಲ್ಲದೇ, ಭದ್ರಾವತಿ ಕ್ಷೇತ್ರದಿಂದ ಸುಮಂಗಲಾರವರನ್ನು ಕೂಡಲೇ ವರ್ಗಾಯಿಸಬೇಕು. ಅಲ್ಲಿಯವರೆಗೆ ಯಾವುದೇ ನೆಮ್ಮದಿ ಶಿಕ್ಷಣ ಇಲಾಖೆಗೆ ಇರುವುದಿಲ್ಲ ಎಂದು ಶಿಕ್ಷಕ ಸಮೂಹ ಅಭಿಪ್ರಾಯ ವ್ಯಕ್ತಪಡಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more