ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಕ್ಷಣಗಣನೆ

By Staff
|
Google Oneindia Kannada News

Seat arrangement for Thiruvalluvar statue unveiling ceremony
ಬೆಂಗಳೂರು, ಆ. 9 : ಹದಿನೆಂಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಮಿಳು ಆದಿ ಕವಿ ತಿರುವಳ್ಳುವರ್ ಪ್ರತಿಮೆಯನ್ನು ಬೆಂಗಳೂರಿನ ಹಲಸೂರು ಕೆರೆಯ ಬಳಿಯ ಓಡುಕಟ್ಟು ಸ್ವಾಮಿ ಮಠದ ಎದಿರು ನೀಲಕಂಠನ್ ವೃತ್ತದಲ್ಲಿ ಅನಾವರಣಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರತಿಮೆ ಅನಾವರಣಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಆಗಮಿಸುತ್ತಿದ್ದು, ತಮಿಳಿನ ಸಚಿವರು, ಸಾಹಿತಿಗಳು, ಹೋರಾಟಗಾರರು ಕೂಡ ಆಗಮಿಸುತ್ತಿದ್ದಾರೆ. ಇದಕ್ಕಾಗಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದ್ದು, ಕರುಣಾನಿಧಿ ಗುಂಡಿಯೊತ್ತುವ ಮೂಲಕ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಸಮಾರಂಭದ ಅಧ್ಯಕ್ಷತೆವಹಿಸಲಿದ್ದಾರೆ.

ಯಡಿಯೂರಪ್ಪನವರು ಶನಿವಾರ ರಾತ್ರಿಯೇ ಖುದ್ದಾಗಿ ಹಲಸೂರಿಗೆ ತೆರಳಿ ಪೂರ್ವಸಿದ್ಧತೆಯ ವಿವರ ಪಡೆದರು. ಭದ್ರತೆ, ಆಸನ ವ್ಯವಸ್ಥೆ ಕುರಿತಂತೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ನಗರದಲ್ಲಿರುವ ಎಲ್ಲ ತಮಿಳ ಭಾಷಿಗರು ಮತ್ತು ನೆರೆಯ ರಾಜ್ಯದಿಂದಲೂ ಅನೇಕ ತಮಿಳು ಭಾಷಿಗರು ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆಯಿದೆ. ಇದಕ್ಕಾಗಿ 30ರಿಂದ 40 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಹಲಸೂರು ಕೆರೆಯ ಬಳಿ ಹಬ್ಬದ ವಾತಾವರಣ ಮನೆಮಾಡಿದೆ. ವಾಹನ ನಿಲುಗಡೆಗೆ ಕೂಡ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಪ್ರತಿಮೆ ಸುತ್ತಲಿನ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಕನ್ನಡ ಹೋರಾಟಗಾರರು ಅನಾವರಣಕ್ಕೆ ತಡೆಯೊಡ್ಡದಂತೆ ಭಾರೀ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇಂದು ಬಂದ್ ಕರೆ ನೀಡಿದ್ದರಿಂದ ನಗರದ ಎಲ್ಲೆಕಡೆಗಳಲ್ಲಿ ಕೂಡ ಪೊಲೀಸರು ಹದ್ದಿನ ಕಣ್ಣುಗಳಿಂದ ಕಾವಲು ಕಾಯುತ್ತಿದ್ದಾರೆ.

ಆಗಸ್ಟ್ 13ರಂದು ಚೆನ್ನೈನಲ್ಲಿ ಕನ್ನಡದ ವಚನಕಾರ ಸರ್ವಜ್ಞನ ಪ್ರತಿಮೆ ಅನಾವರಣಗೊಳ್ಳಲಿದ್ದು, ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯದ ಸಚಿವರು ಮತ್ತು ಸಾಹಿತಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X