ಮೇಡಂ ಕುಮುದಾ ಕೊಲೆಗೈದ ಕಾಮುಕರ ಬಂಧನ

ಮೂರು ದಿನಗಳ ಹಿಂದೆ ಕುಮುದಾ ನಾಪತ್ತೆಯಾಗಿ ಸೋಮವಾರ ತುಮಕೂರಿನ ಹೊರವಲಯದಲ್ಲಿ ಶವವಾಗಿ ಪತ್ತೆಯಾಗಿದ್ದರು. ಅದೇ ರೀತಿ ಕಳೆದ ವರ್ಷ ಕುಣಿಗಲ್‌ನ ಶಿಕ್ಷಕಿಯೊಬ್ಬರು ಮಾಗಡಿಯ ಸಾವನದುರ್ಗ ಬಳಿ ಶವವಾಗಿ ಪತ್ತೆಯಾಗಿದ್ದರು. ಕಾಮುಕರ ಕಾಮದಾಟಕ್ಕೆ ಎರಡು ತುಂಬಿದ ಜೀವಗಳೇನೊ ಬಲಿಯಾಗಿವೆ ಆದರೆ ಮಾತೃಹೃದಯದ ಪ್ರೀತಿ ಕಳೆದುಕೊಂಡ ಕಂದಮ್ಮಗಳ ಆಕ್ರಂದನ ಹೃದಯ ಹಿಂಡುವಂತಿದೆ.
ಬಂಧಿತರನ್ನು ರಾಮನಗರದ ಮಂಜುನಾಥ, ರವಿ, ರವೀಶ, ನರಸಿಂಹ, ನಾಗೇಶ, ಸುಮಂತ, ರಾಮಕೃಷ್ಣ ಎಂದು ಗುರುತಿಸಲಾಗಿದೆ. ಡ್ರಾಪ್ ನೀಡುವ ನೆಪದಲ್ಲಿ ಇಬ್ಬರು ಅಮಾಯಕ ಶಿಕ್ಷಕಿಯರನ್ನ ಕಾರಿನಲ್ಲಿ ಕರೆದೊಯ್ದು ದುಷ್ಕೃತ್ಯವೆಸಗಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಪ್ರಕರಣದ ಜಾಡು ಹತ್ತಿದ್ದ ಸಿಪಿಐ ಧರ್ಮೇಂದ್ರಯ್ಯ. ಬಿಡದಿ ಪಿಎಸ್‌ಯ ಸತ್ಯನಾರಾಯಣ ಆರೋಪಿಗಳನ್ನ ವಿಚಾರಣೆ ನಡೆಸಿದಾಗ ಕಳೆದ ವರ್ಷ ಕೊಲೆಯಾಗಿದ್ದ ಕುಣಿಗಲ್ ಶಿಕ್ಷಕಿ ಸುಜಾತರ ಕೊಲೆ ಪ್ರಕಣವೂ ಬಯಲು ಮಾಡಿದ್ದಾರೆ.

ಕಾಮುಕ ಪಡೆಯಲ್ಲಿರುವ ಕೆಲವರಂತೂ ಏನೂ ಆಗದವರಂತೆ ಬಂಡೆಗಲ್ಲಿನಂತೆ ಕುಳಿತಿದ್ದರು. ಇನ್ನೂ ಕೆಲವರು ಮಾಧ್ಯಮಗಳ ಕ್ಯಾಮೆರಾಗಳು ಸುಳಿದಾಡುತ್ತಿದ್ದಂತೆ ಕಣ್ಣಿನಲ್ಲಿ ನೀರಿಡುತ್ತಾ ಮೊಸಳೆ ಕಣ್ಣೀರು ಸುರಿಸುತ್ತಿದ್ದರು. ಇವರ ಬಂಧನದಿಂದ ಕಾಮುಕರ ಕಾಮದಾಟಕ್ಕೆ ಅಂತ್ಯಬಿದ್ದಂತಾಗಿದೆ. ಎರಡು ಕೊಲೆಗಳು ಸಾವರ್ಜನಿಕ ವಲಯದಲ್ಲಿ ಭಾರೀ ಆತಂಕ ಸೃಷ್ಟಿಸಿದ್ದವು. ಮಹಿಳಾ ನೌಕರರು ನೆಮ್ಮದಿಯ ನಿಟ್ಟುಸಿರಿಡುವಂತಾಗಿದೆ.
ಸೋಮವಾರ ಕುಮುದಾ ಕೊಲೆ ಪ್ರಕರಣವನ್ನ ಖಂಡಿಸಿ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು ಮತ್ತು ಆರೋಪಿಗಳ ಪರ ವಕೀಲರುಗಳು ವಕಾಲತ್ತು ವಹಿಸಬಾರದೆಂದು ಮನವಿ ಮಾಡಿ ಸಾವಿರಾರು ಪ್ರಾಥಮಿಕ ಶಾಲಾ ಶಿಕ್ಷಕರು ಇಂದು ಮೌನ ಮೆರವಣಿಗೆ ನಡೆಸಿ ಅಗಲಿದ ಶಿಕ್ಷಕಿ ಗೌರವ ನಮನ ಸಲ್ಲಿಸಿದರು. ಕಾಮುಕ ಪಡೆ ಕಾನೂನಿನ ಚೌಕಟ್ಟಿನಲ್ಲಿ ಉಗ್ರ ಶಿಕ್ಷೆ ನೀಡಬೇಕು ಇಲ್ಲವಾದಲ್ಲಿ ಮತ್ತೆ ಸಮಾಜದಲ್ಲಿ ಅಮಾನವೀಯವಾದ ಘಟನೆಗಳು ನಡೆಯುತ್ತದೆ. ಆದ್ದರಿಂದ ಕೊಲೆಗೈದಿರುವ ಕೀಚಕ ಪಡೆಗೆ ಸಮಾಜದಲ್ಲಿ ಇಂತಹ ಘಟನೆಗಳು ಮತ್ತೆ ಮರುಕಳಿಸದಂತಹ ರೀತಿಯಲ್ಲಿ ಶಿಕ್ಷೆ ವಿಧಿಸಬೇಕೆಂದು ಶಿಕ್ಷಕರು ಆಗ್ರಹಿಸಿದ್ದಾರೆ.
ಸಾವಿನ ಸುದ್ದಿ ತಿಳಿದ ಶಿಕ್ಷಕಿ ಕುಮುದಾರ ಕುಟುಂಬದ ಸದಸ್ಯರ ಆಕ್ರಂದನ ಕರುಳಿನ ಕುಡಿಗಳ ರೋದನ ಎಲ್ಲರ ಕಣ್ಣಲ್ಲಿ ನೀರಾಡುವಂತೆ ಮಾಡಿತ್ತು. ತಾಯಿಯ ಆಲಿಂಗನಕ್ಕಾಗಿ ಹಾತೊರೆಯುತ್ತಿದ್ದ ಕಂದಮ್ಮಗಳಿಗೆ ಮಾತೃಹೃದಯ ಪ್ರೀತಿ ದೂರವಾದಂತಾಗಿದೆ. ಕೊಲೆಗೀಡಾಗಿರುವ ಕುಮುದಾರ ಇಬ್ಬರು ಕಂದಮ್ಮಗಳಾದ 2 ವರ್ಷದ ಉಜ್ವಲ್ ಮತ್ತು 8 ವರ್ಷದ ಸ್ಪೂರ್ತಿ ಹಾಗೂ ಕುಟುಂಬದ ಸದಸ್ಯರ ನೋವಿನ ಮಾತುಗಳು ಎಲ್ಲರ ಹೃದಯವನ್ನ ಕಲಕಿತ್ತು.












Click it and Unblock the Notifications