ಧೂಳು ಕೊಡವಿ ಎದ್ದು ಬರುತ್ತಿರುವ ಯಾಹೂ!
ಸ್ಯಾನ್ ಫ್ರಾನ್ಸಿಸ್ಕೊ, ಜು, 21: ನೀವು ಯಾಹೂ ವೆಬ್ ಸೈಟ್, ಯಾಹೂ ಸಲಕರಣೆಗಳ ಬಳಕೆದಾರರಾಗಿದ್ದರೆ ಒಂದು ಸವಿಸುದ್ದಿ. ಸಪ್ಪೆ ಹೊಡೆಯುತ್ತಿದ್ದ ಯಾಹೂ ಮುಖಪುಟಕ್ಕೆ ಈಗ ಸುಣ್ಣ ಬಣ್ಣ ಹೊಡೆಯಲಾಗುತ್ತಿದ್ದು ಇಂದು ಮಂಗಳವಾರ ಜುಲೈ 21ರಂದು ನವೀಕೃತ ಮುಖಪುಟ ಅಮೆರಿಕಾದಲ್ಲಿ ಬಿಡುಗಡೆಯಾಗಲಿದೆ.
ಓಬೀರಾಯನಕಾಲದ ವಿನ್ಯಾಸವನ್ನೇ ಇಟ್ಟುಕೊಂಡಿದ್ದ ಬಹುಜನಬಳಕೆಯ ಈ ಅಂತರ್ ಜಾಲ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವುದು ಸಮಾಧಾನಕರ ಸಂಗತಿ ಎಂದು ಜಾಲಿಗರ ಲೋಕದಿಂದ ಈಗಾಗಲೇ ಪ್ರತಿಕ್ರಿಯೆಗಳು ಬರಲಾರಂಭಿಸಿವೆ. ಇತ್ತೀಚಿನ ದಿನಗಳಲ್ಲಿ ಜನಪ್ರಿಯ ಸೋಷಿಯಲ್ ನೆಟ್ವರ್ಕಿಂಗ್ ತಾಣಗಳಾದ ಫೇಸ್ಬುಕ್, ಮೈಸ್ಪೇಸ್ ಮತ್ತು ಟ್ವಿಟರ್ ಎದಿರು ಯಾಹೂ ಗ್ಲಿಟರ್ ಕಳೆದುಕೊಂಡಿತ್ತು. ಕಳೆದುಕೊಂಡಿದ್ದ ಹೊಳಪು ಮರಳಿಪಡೆಯುವ ಪ್ರಯತ್ನವಾಗಿ ಯಾಹೂ ಹೊಸರೂಪ ಪಡೆಯುತ್ತಿದೆ.
ಯಾಹೂ ವೆಬ್ ಸೈಟಿನ ಮೇಲ್ ಸ್ವರೂಪ ಹೇಗೇ ಇರಲಿ ಚಟುವಟಿಕೆಗಳು ಮಾತ್ರ ಎಂದಿನಂತೆಯೇ ನಡೆಯುತ್ತಿದೆ. ಕಾಮ್ ಸ್ಕೋರ್ ಇಂಕ್ ಆನ್ ಲೈನ್ ಸಂಶೋಧನಾ ಸಂಸ್ಥೆಯ ಪ್ರಕಾರ ಮೇ ತಿಂಗಳಲ್ಲಿ 570 ಮಿಲಿಯನ್ ಜಾಲಿಗರು ಯಾಹೂವನ್ನು ಜಾಲಾಡಿದ್ದಾರೆ.
ಯುನೈಟೆಡ್ ಕಿಂಗಡಂ, ಭಾರತ ಮತ್ತು ಫ್ರಾನ್ಸ್ ರಾಷ್ಟ್ರಗಳಲ್ಲಿ ಹೊಸವಿನ್ಯಾಸವನ್ನು ಮುಂದಿನ ವಾರ ಬಿಡುಗಡೆ ಮಾಡಲಾಗುತ್ತಿದೆ. ಮುಂದಿನ ವರ್ಷ ವಿಶ್ವದ ಇತರ ದೇಶಗಳಲ್ಲಿಯೂ ಕಾಲಕ್ರಮೇಣ ಯಾಹೂ ಹೊಸ ವಿನ್ಯಾಸದೊಂದಿಗೆ ನಳನಳಿಸಲಿದೆ. 15 ವರ್ಷಗಳ ಹಿಂದೆ ಯಾಹೂ ಹುಟ್ಟು ಪಡೆದುಕೊಂಡಂದಿನಿಂದ ಯಾಹೂ ಮುಖಪುಟ ಇಷ್ಟು ದೊಡ್ಡಮಟ್ಟದಲ್ಲಿ ಬದಲಾವಣೆ ಕಂಡಿರಲಿಲ್ಲ ಎಂದು ಕ್ಯಾಲಿಫೋರ್ನಿಯಾ ಮೂಲದ ಕಂಪನಿ ದಿ ಸನ್ನಿವೇಲ್ ಪ್ರಶಂಸಿಸಿದೆ.(ಏಜೆನ್ಸೀಸ್)












Click it and Unblock the Notifications