ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭರ್ಜರಿ ಮಳೆಯಿಂದ ಶಿವಮೊಗ್ಗ ಜಿಲ್ಲೆ ತತ್ತರ

By * ಕೆ.ಆರ್.ಸೋಮನಾಥ್, ಶಿವಮೊಗ್ಗ
|
Google Oneindia Kannada News

Many houses have been fallen due to heavy rain
ಶಿವಮೊಗ್ಗ, ಜು. 16 : ಕುಂಭದ್ರೋಣ ಮಳೆ ಶಿವಮೊಗ್ಗವೂ ಸೇರಿದಂತೆ ಚಿಕ್ಕಮಗಳೂರು, ಕೊಡಗು, ಹಾಸನ, ಉಡುಪಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗುರುವಾರ ಬೆಳಿಗ್ಗೆಯೂ ಸುರಿದಿದ್ದು, ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಸೇರಿದಂತೆ ಹಲವು ಗ್ರಾಮಗಳು ಜಲಾವೃತಗೊಂಡಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಶಿವಮೊಗ್ಗ ನಗರದ ನದಿ ತಟದ ಬಡಾವಣೆಗಳಾದ ಇಮಾಮ್ ಬಾಡಾ, ಕುಂಬಾರಗುಂಡಿ, ಬಿ.ಬಿ.ರಸ್ತೆ, ಕೋಟೆ ರಸ್ತೆ ಹಿಂಭಾಗ, ಸೀಗೆಹಟ್ಟಿಯ ಸುತ್ತಲಿನ ಭಾಗಗಳು ಮಲ್ಲೇಶ್ವರನಗರ ಸೇರಿದಂತೆ ಕೆಲವು ಬಡಾವಣೆಗಳಲ್ಲಿ ಈಗಾಗಲೇ ನೀರು ತುಂಬಿಕೊಂಡಿದೆ.

ಜಿಲ್ಲಾಡಳಿತ ತುಂಗಾನದಿ ತೀರದ ಅಪಾಯ ಮಟ್ಟದಲ್ಲಿರುವ ಬಡಾವಣೆಗಳಲ್ಲಿ ವಾಸವಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿದೆ. ಶಾದಿ ಮಹಲ್ ಸೇರಿದಂತೆ ಕೆಲವೆಡೆ ಜಿಲ್ಲಾಡಳಿತ ಗಂಜೀ ಕೇಂದ್ರಗಳನ್ನು ಸ್ಥಾಪಿಸಿದೆ. ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕೆಲವು ಮನೆಗಳು, ಗುಡಿಸಲುಗಳು ಕುಸಿದಿವೆ. ಮಂಡಗದ್ದೆಯಲ್ಲಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಹವಾಮಾನ ಇಲಾಖೆಯ ಮೂಲಗಳ ಪ್ರಕಾರ ಶಿವಮೊಗ್ಗ, ಕೊಡಗು, ಕರಾವಳಿ ಪ್ರದೇಶ, ಚಿಕ್ಕಮಗಳೂರು, ಹಾಸನದಲ್ಲಿ ಶುಕ್ರವಾರದವರೆಗೆ ಮಳೆ ಮುಂದುವರೆಯಲಿದೆ. ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ. ಸಮುದ್ರ ತೀರದಲ್ಲಿ ಗಂಟೆಗೆ 45 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.

ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ 52 ಮನೆಗಳು ಈಗಾಗಲೇ ಕುಸಿದಿದ್ದು, ಈ ಎರಡೂ ಜಿಲ್ಲೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿದು ಹೋಗಿ 48 ಗಂಟೆಗಳು ಕಳೆದಿವೆ. ಮಂಗಳೂರಿನಲ್ಲಿ ಮಳೆ ಕಾರಣದಿಂದ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಎಗಚಿ, ಹಾರಂಗಿ ಜಲಾಶಯಗಳು ಭರ್ತಿಯಾಗಿವೆ. ಭಾಗಮಂಡಲದಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ಅಂದರೆ, ಸುಮಾರು 30 ಸೆ.ಮೀ. ಮಳೆಯಾಗಿದೆ. ಭಾಗಮಂಡಲ ದ್ವೀಪವಾಗಿ ಪರಿವರ್ತನೆಗೊಂಡಿದ್ದು, ರಸ್ತೆ ಸಂಚಾರ ಸಂಪೂರ್ಣ ಕಡಿದು ಹೋಗಿದೆ. ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.

ಹೊಸನಗರ ಮತ್ತು ತೀರ್ಥಹಳ್ಳಿಯಲ್ಲಿ 17, ಲಿಂಗನಮಕ್ಕಿಯಲ್ಲಿ 16, ಎನ್.ಆರ್.ಪುರದಲ್ಲಿ 13 ಸೆ.ಮೀ.ನಷ್ಟು ಭಾರೀ ಮಳೆ ಬಿದ್ದಿದೆ. ಶೃಂಗೇರಿ, ಆಗುಂಬೆ 12 ಸೆ.ಮೀ.ಮಳೆಯಾಗಿದ್ದು, ಸೊರಬ, ತ್ಯಾಗತ್ತಿ, ಬಾಳೇಹೊನ್ನೂರು ಪ್ರದೇಶದಲ್ಲಿ 7 ಸೆ.ಮೀ., ತಾಳಗುಪ್ಪ ಮತ್ತು ತರೀಕೆರೆಯಲ್ಲಿ 6 ಸೆ.ಮೀ.ಮಳೆಯಾದ ವರದಿ ಬಂದಿದೆ.

ಸಾಗರದ ಆನಂದಪುರಂ ಹೋಬಳಿ ಹಾಗೂ ಕಸಬಾ ಹೋಬಳಿ, ಶಿರವಂತೆಯಲ್ಲಿ ತಲಾ ಒಂದೊಂದು ಮನೆ ಕುಸಿದಿವೆ. ಸೊರಬದ ಕಾರ್ಯಗುಂಟ, ಬಾಡದ ಬೈಲು, ಕಡಸೂರು ಪ್ರದೇಶಗಳಲ್ಲಿ ನೂರಾರು ಎಕರೆ ಕೃಷಿಭೂಮಿ ಜಲಾವೃತಗೊಂಡಿದೆ. ತೀರ್ಥಹಳ್ಳಿಯಲ್ಲೂ ಕೃಷಿ ಭೂಮಿಗೆ ನೀರು ನುಗ್ಗಿದ್ದು, ಅನೇಕ ಮನೆಗಳಿಗೆ ಹಾನಿಯಾಗಿದೆ. ಭಾರೀ ಮಳೆ ಸುರಿಯುತ್ತಿರುವುದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಹೊಸನಗರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ಸಾಕಷ್ಟು ಪ್ರಮಾಣದಲ್ಲಿ ಲಿಂಗನಮಕ್ಕಿ ಹಾಗೂ ವರಾಹಿ ಜಲಾಶಯಕ್ಕೆ ನೀರು ಹರಿಯುತ್ತಿದೆ.

ಸೊರಬ ತಾಲ್ಲೂಕಿನ ದಂಡಾವತಿ, ವರದಾ ನದಿ ದಡದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ನದಿ ನೀರಿನ ಹರಿವು ಹೆಚ್ಚಿದೆ. ಎನ್.ಆರ್.ಪುರದ ಸುತ್ತಮುತ್ತ ಉತ್ತಮ ಮಳೆಯಾಗುತ್ತಿದ್ದು, ಭದ್ರಾ ಜಲಾಶಯಕ್ಕೆ ಒಂದೇ ದಿನ ನಾಲ್ಕು ಅಡಿ ನೀರು ಹರಿದುಬಂದಿದೆ. ಲಿಂಗನಮಕ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲಿ 162 ಮಿ.ಮೀ.ಮಳೆಯಾಗಿದ್ದು, ಒಂದೇ ದಿನ ನಾಲ್ಕು ಅಡಿ ನೀರು ಹೆಚ್ಚಿದೆ. ಸಣಕಲಿದ್ದ ಜೋಗ ಜಲಪಾತ ಮೈದುಂಬಿಕೊಂಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X