ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲುವೆಗಳು ಒಳಚರಂಡಿ ನೀರಿನಿಂದ ಮುಕ್ತ :ಕಟ್ಟಾ

By Staff
|
Google Oneindia Kannada News

Katta Subramanya
ಬೆಂಗಳೂರು, ಜು.4:ಮುಂದಿನ ಒಂದೂವರೆ ವರ್ಷದೊಳಗೆ ಮಳೆ ನೀರಿನ ಕಾಲುವೆಗಳನ್ನು ಒಳಚರಂಡಿ ನೀರಿನಿಂದ ಮುಕ್ತಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅಬಕಾರಿ, ವಾರ್ತಾ. ಬೆಂಗಳೂರು ಜಲಮಂಡಳಿ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ತಿಳಿಸಿದರು.

ಇಂದು ಬೆಳಿಗ್ಗೆ 7 ರಿಂದ ಮಲ್ಲೇಶ್ವರಂ, ಹೆಬ್ಬಾಳ, ಬ್ಯಾಟರಾಯನಪುರ, ಪುಲಿಕೇಶಿನಗರ, ಸರ್ವಜ್ಞನಗರ, ಸಿ.ವಿ. ರಾಮನ್‌ನಗರ ವಿಧಾನ ಸಭಾ ಕ್ಷೇತ್ರಗಳಲ್ಲಿರುವ ಮಳೆ ನೀರಿನ ಕಾಲುವೆಗಳನ್ನು ಸುಸ್ಥಿತಿಯಲ್ಲಿಡಲು ತೆಗೆದುಕೊಂಡ ಕ್ರಮಗಳನ್ನು ವೀಕ್ಷಿಸುವ ಸಂದರ್ಭದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಸಚಿವರು ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳೊಡನೆ ಕೇಂದ್ರ ನಗರಾಭಿವೃದ್ಧಿ ಸಚಿವ ಎಸ್. ಜೈಪಾಲ್ ರೆಡ್ಡಿ ಅವರನ್ನು ಭೇಟಿಮಾಡಿ ಮಳೆ ನೀರಿನ ಕಾಲುವೆಗಳನ್ನು ಒಳಚರಂಡಿ ನೀರಿನಿಂದ ಮುಕ್ತಗೊಳಿಸಲು ನರ್ಮ್ (NURM) ನಡಿ 1000 ಕೋಟಿ ರೂ. ಗಳನ್ನು ಒದಗಿಸಲು ಕೋರಲಾಗುವುದು ಎಂದು ತಿಳಿಸಿದರು.

ಕಾರ್ಖಾನೆಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಸಾರ್ವಜನಿಕರು ಒಳಚರಂಡಿ ನೀರನ್ನು ಮಳೆನೀರಿನ ಕಾಲುವೆಗಳಲ್ಲಿ ನೇರವಾಗಿ ಹರಿಯಲು ಬಿಡುವುದರಿಂದ ಇವುಗಳು ಕಲುಷಿತಗೊಳ್ಳುತ್ತಿವೆ. ಸಾರ್ವಜನಿಕರು ಕಸ ಮತ್ತು ತ್ಯಾಜ್ಯ ವಸ್ತುಗಳನ್ನು ಮಳೆ ನೀರಿನ ಕಾಲುವೆಗಳಲ್ಲಿ ಹಾಕುವುದರಿಂದ ಹಾಗೂ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಮಳೆನೀರು ಸರಾಗವಾಗಿ ಹರಿಯದೇ ಜನವಸತಿ ಪ್ರದೇಶಗಳು ಜಲಾವೃತಗೊಂಡು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಾನೂನಿನಡಿ ಕಠಿಣ ಕ್ರಮ ಜರುಗಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಸಂಚಾರಿ ವಾಹನದ ಜೊತೆಗೆ ಅಗತ್ಯ ಸಿಬ್ಬಂದಿಯನ್ನು ನೀಡಿ ಕಟ್ಟಿಕೊಂಡ ಚರಂಡಿಗಳನ್ನು ಸ್ವಚ್ಚಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಶೀಘ್ರ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಹಾಗೂ ನಗರಾಭಿವೃದ್ಧಿ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ತುಕ್ಕು ಹಿಡಿದ ಹಾಗೂ ಕಡಿಮೆ ವ್ಯಾಸವಿರುವ ನೀರಿನ ಪೈಪುಗಳನ್ನು ಬದಲಾಯಿಸುವ ಕಾರ್ಯವನ್ನು 300 ಕೋಟಿ ರೂ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ, ಇದುವರೆಗೆ ಶೇ .40 ರಷ್ಟು ಈ ಕಾರ್ಯ ಪೂರ್ಣಗೊಂಡಿದೆ. ಚಿಕುಂಗುನ್ಯಾ ಮತ್ತು ಡೆಂಗೆ ಕಾಯಿಲೆ ಹರಡುವ ಸೊಳ್ಳೆಗಳ ನಾಶಕ್ಕೆ ನೀರು ನಿಲ್ಲುವ ಪ್ರದೇಶದಲ್ಲಿ ಔಷಧಿ ಸಿಂಪರಣೆ ಹಾಗೂ ಫಾಗಿಂಗ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಮಳೆ ನೀರಿನ ಕಾಲುವೆಗಳಲ್ಲಿನ ಹೂಳನ್ನು ತೆಗೆಯಲು ಜೆ.ಸಿ.ಬಿ. ಯಂತ್ರವನ್ನು ಉಪಯೋಗಿಸಿಕೊಂಡಲ್ಲಿ, ಒಳಚರಂಡಿ ಪೈಪುಗಳು ಹಾಳಾಗುವ ಸಾಧ್ಯತೆಯಿರುವುದರಿಂದ ಕಾಲುವೆಗಳ ಪಕ್ಕದಲ್ಲಿ ಐದು ಮೀಟರ್ ಜಾಗವನ್ನು ವಶಪಡಿಸಿಕೊಂಡು ಅಲ್ಲಿ ಒಳಚರಂಡಿ ಪೈಪುಗಳನ್ನು ಅಳವಡಿಸಲು ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಮಾನ್ಯತಾ ಟೆಕ್ನೊ ಪಾರ್ಕ್ ಬಳಿಯಿರುವ ರಾಜ ಕಾಲುವೆಯಲ್ಲಿ ಐದು ಕೆರೆಗಳ ಕೋಡಿ ನೀರು ಹರಿಯುವುದರಿಂದ ಅದರ ಅಗಲವನ್ನು 40ಮೀಟರ್ ವಿಸ್ತರಿಸಲು, ಆ ಪ್ರದೇಶಗಳಲ್ಲಿ ಕಲುಷಿತ ನೀರನ್ನು ಶುದ್ಧೀಕರಿಸುವ ಘಟಕವನ್ನು(STP) ಸ್ಥಾಪಿಸಿ ಹರಿಯುತ್ತಿರುವ ನೀರನ್ನು ಶುದ್ದೀಕರಿಸಿ ಕುಡಿಯುವುದನ್ನು ಹೊರತುಪಡಿಸಿ ಇತರ ಬಳಕೆಗೆ ಲಭ್ಯಗೊಳಿಸಲು ಸೂಕ್ತಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಗ್ಗದಾಸಪುರ ಸಮೀಪದ ಕಾಲುವೆ ಇಕ್ಕೆಲಗಳಲ್ಲೂ ಭೂ ಸ್ವಾಧೀನಪಡಿಸಿಕೊಂಡು ಅಲ್ಲಲ್ಲಿ ಎಸ್‌ಟಿಪಿ ಸ್ಥಾಪಿಸಿ, ಕೆರೆಗಳಿಗೆ ಶುದ್ಧೀಕರಿಸಿದ ನೀರು ಬಿಡುವಂತೆ ಯೋಜನೆ ರೂಪಿಸಲು ಇಂಜಿನಿಯರುಗಳಿಗೆ ಸೂಚಿಸಿದರು.ಕಳಪೆ ಕಾಮಗಾರಿ ಮಾಡಿರುವ ಹಾಗೂ ನಿಯಮ ಉಲ್ಲಂಘಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಸ್ಥಳೀಯ ಶಾಸಕರು, ಬೆಂಗಳೂರು ಜಲಮಂಡಳಿ ಮತ್ತು ಮಹಾನಗರಪಾಲಿಕೆ ಅಧಿಕಾರಿಗಳು
ಸಚಿವರೊಡನೆ ಸ್ಥಳ ವೀಕ್ಷಣೆ ಸಮಯದಲ್ಲಿ ಹಾಜರಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X