ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ತಿಂಗಳಲ್ಲಿ 1 ಕೋಟಿ ಸಸಿ ನೆಡಿ ಅಭಿಯಾನ :ಸಿಎಂ

By Staff
|
Google Oneindia Kannada News

ಬೆಂಗಳೂರು, ಜೂ.16: ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯ ಮಂತ್ರಿಬಿ ಎಸ್ ಯಡಿಯೂರಪ್ಪನವರು ವಿಧಾನ ಸೌಧದ ಪಕ್ಕದಲ್ಲಿ ಗಣ್ಯರೊಂದಿಗೆ ಸಸಿ ನೆಡುವ ಮೂಲಕ ವೃಕ್ಷಾರೋಪಣ ಅಭಿಯಾನವನ್ನು ಉದ್ಘಾಸಿದರು. ನಂತರ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅರಣ್ಯ ಇಲಾಖೆ ಏರ್ಪಡಿಸಿರುವ ಹಸಿರು ಸಮಾರಂಭದಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಪಾಲ್ಗೊಂಡರು.

ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸಚಿವ ಕೃಷ್ಣ ಪಾಲೇಮಾರ್, ಸಂಸತ್ ಸದಸ್ಯ ಪಿ.ಸಿ.ಮೋಹನ್, ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ್, ಜೈವಿಕ ಇಂಧನ ಕಾರ್ಯಪಡೆ ಅಧ್ಯಕ್ಷ ವೈ.ಬಿ.ರಾಮಕೃಷ್ಣ, ಗಾಂಧಿನಗರ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.ಇವರ ಜೊತೆಗೆ ಅರಣ್ಯ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳು, ವಿವಿಧ ಇಲಾಖಾ ಅಧಿಕಾರಿಗಳು, ಗ್ರಾಮ ಅರಣ್ಯ ಸಮಿತಿಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಆಯ್ದ ವೃಕ್ಷ ಪ್ರೇಮಿಗಳನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು.

ವೃಕ್ಷಾರೋಪಣ ಅಭಿಯಾನದ ವೈಶಿಷ್ಟ್ಯ
ವೃಕ್ಷಾರೋಪಣ ಅಭಿಯಾನ ಕಾರ್ಯಕ್ರಮವು ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ನಡೆಯಲಿದೆ. ನಗರದಿಂದ ಹೋಬಳಿ ಮಟ್ಟದವರೆಗೆ ವೃಕ್ಷಾರೋಪಣ ಕಾರ್ಯಕ್ರಮ ಕೈಗೊಳ್ಳಲು ವ್ಯಾಪಕ ಸಿದ್ದತೆ ಆರಂಭವಾಗಿದೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈಗಾಗಲೇ ಸಮಿತಿಯೊಂದನ್ನು ಸರ್ಕಾರ ರಚಿಸಿ ಆಯಾಯ ಜಿಲ್ಲೆಯ ಎಲ್ಲಾ ಇಲಾಖೆಗಳು, ಜೀವ ವೈವಿಧ್ಯ ಸಮಿತಿ, ಜಲಾನಯನ ಸಮಿತಿಗಳು, ಎನ್.ಜಿ.ಒ.ಗಳು, ಸ್ವಯಂ ಸೇವಾ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು, ಜನ ಪ್ರತಿನಿಧಿಗಳು, ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್., ರಾಜ್ಯ ಕಾನೂನು ಸಲಹಾ ಪ್ರಾಧಿಕಾರ, ಗ್ರಾಮ ಅರಣ್ಯ ಸಮಿತಿ ಸೇರಿದಂತೆ ಜನರ ಸಹಭಾಗಿತ್ವದಲ್ಲಿ ಈ ವೃಕ್ಷಾರೋಪಣ ಆಂದೋಲನ ನಡೆಯಲು ಸರ್ಕಾರ ಆದೇಶಿಸಿದೆ. ಅಂತೆಯೇ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲೂ ಕೂಡಾ ಇದೇ ರೀತಿ ಈ ಆಂದೋಲನಕ್ಕೆ ಚಾಲನೆ ನೀಡಲಾಗಿದ್ದು, ವೃಕ್ಷಾರೋಪಣ ಅಭಿಯಾನ ನಡೆಯಲಿದೆ.

ವೃಕ್ಷ ಅಭಿಯಾನದಲ್ಲಿ ಪವಿತ್ರವನ ನಿರ್ಮಾಣ, ಶಾಲಾವನ, ಗ್ರಾಮವನ, ಔಷಧಿ ಮೂಲಿಕಾ ವನ, ಜೀವ ವೈವಿಧ್ಯ ವನ, ರಸ್ತೆ ಬದಿ, ಕೆರೆ ಅಂಗಳ, ರುದ್ರಭೂಮಿ, ಖಾಲಿ ಜಾಗ ಹೀಗೆ ಹಲವು ವನ ನಿರ್ಮಾಣ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

ಜನ ಪ್ರತಿನಿಧಿಗಳು, ಮಠಾಧೀಶರು, ವಿದ್ಯಾರ್ಥಿಗಳು, ವಿವಿಧ ಇಲಾಖಾ ಅಧಿಕಾರಿಗಳು, ರಾಜ್ಯ ಕಾನೂನು ಸಲಹಾ ಪ್ರಾಧಿಕಾರ, ವಕೀಲರ ಸಂಘ, ಎನ್.ಜಿ.ಒ.ಗಳು, ಶಿಕ್ಷಕರು, ಸ್ವ-ಸಹಾಯ ಸಂಘಗಳ ಮಹಿಳೆಯರು ಮುಂತಾದ ಎಲ್ಲಾ ಕ್ಷೇತ್ರಗಳ ಜನ ಭಾಗವಹಿಸಲಿದ್ದಾರೆ. ಸ್ಥಾನಿಕ ಜಾತಿ ಸಸ್ಯಗಳನ್ನು ವಿತರಿಸಲು, ನೆಡಲು ಉದ್ದೇಶಿಸಲಾಗಿದೆ. ಶ್ರೀಗಂಧ, ಹಲಸು, ಮಾವು, ಬೇವು, ಹೊಂಗೆ, ನೇರಳೆ ಸಂಪಿಗೆ ಮುಂತಾದ ಉಪಯುಕ್ತ ಸುಮಾರು ಒಂದು ಕೋಟಿ ಸಸಿಗಳನ್ನು ವೃಕ್ಷಾರೋಪಣ ಅಭಿಯಾನದಲ್ಲಿ ನೆಡಲಾಗುತ್ತದೆ. ವೃಕ್ಷಾರೋಪಣ ಅಭಿಯಾನ ಸಂದರ್ಭದಲ್ಲಿ ಜಾಥಾ, ವೃಕ್ಷ ಪೂಜೆ, ಪರಿಸರ ಸ್ಪರ್ಧೆ, ಉಪನ್ಯಾಸ ಚರ್ಚೆಗಳು ನಡೆಯಲಿದ್ದು ವೃಕ್ಷ ಪ್ರೇಮಿಗಳನ್ನು ಗುರುತಿಸಿ ಸನ್ಮಾನ ಮಾಡಲಿದೆ.ಅರಣ್ಯ, ಪರಿಸರ, ಜೀವ ಸಂಕುಲದ ಬಗ್ಗೆ ಜನಸಾಮಾನ್ಯರ ಗಮನ ಸೆಳೆಯುವ ಉದ್ದೇಶ ವೃಕ್ಷಾರೋಪಣ ಅಭಿಯಾನದ್ದಾಗಿದೆ.

ಈಗಾಗಲೇ ರಾಜ್ಯ ಸರ್ಕಾರ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಮತ್ತು ಜೈವಿಕ ಇಂಧನ ಕಾರ್ಯಪಡೆ ಸ್ಥಾಪಿಸಿದೆ. ದೇವರ ಕಾಡು ಸಂರಕ್ಷಣೆಗೆ ಸರ್ಕಾರ ಕಾರ್ಯತಂತ್ರ ರೂಪಿಸಿದೆ. ಶ್ರೀಗಂಧ ಸಂಪತ್ತು ಹೆಚ್ಚಿಸಲು ಬೃಹತ್ ಯೋಜನೆ ಜಾರಿ ಮಾಡುತ್ತಿದೆ. ಗ್ರಾಮ ಅರಣ್ಯ ಸಮಿತಿಗಳ ಪುನಶ್ಚೇತನ ಯೋಜನೆ ಜಾರಿ ಮಾಡುತ್ತಿದೆ. ಕರಾವಳಿ ಪ್ರದೇಶಗಳ ಕಾಂಡ್ಲಾ ಗಿಡ ಸಂವರ್ಧನೆಗೆ ವಿಶೇಷ ಯೋಜನೆ ರೂಪಿಸಿದೆ. ಸಮೃದ್ಧ ಹಸಿರು ಗ್ರಾಮ ಯೋಜನೆಯಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದೊಂದು ಗ್ರಾಮ ಆಯ್ಕೆ ಮಾಡಿ ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳನ್ನು ಆ ಗ್ರಾಮದಲ್ಲಿ ಅನುಷ್ಠಾನಕ್ಕೆ ತರುವುದು ಈ ಯೋಜನೆಯ ಉದ್ದೇಶವಾಗಿದೆ.

ಹಾಗೆಯೇ ರಾಜ್ಯದಲ್ಲಿ ರಾಷ್ಟ್ರೀಯ ಬಿದಿರು ಅಭಿವೃದ್ಧಿ ಯೋಜನೆಯಲ್ಲಿ ಬಿದಿರು ಅಭಿವೃದ್ಧಿ ಪಡಿಸುವಿಕೆ ಮತ್ತು ರಾಷ್ಟ್ರೀಯ ಅರಣ್ಯೀಕರಣ ಕಾರ್ಯಕ್ರಮದಡಿ ಕೂಡಾ ಅರಣ್ಯ ಬೆಳೆಸುವ ಗುರಿ ಹೊಂದಲಾಗಿದೆ. ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಕೆಳ ಹಂತದ ಸಿಬ್ಬಂದಿಗಳ ನಿಯುಕ್ತಿಗೆ ಸರ್ಕಾರದ ಮಂಜೂರಾತಿ ದೊರೆತಿದ್ದು ಅದರ ಆಯ್ಕೆ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಅರಣ್ಯ ಸಂಪತ್ತಿನ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ವನ್ಯಜೀವಿಗಳ ಸಂರಕ್ಷಣೆಗೆ ಕ್ರಮ ಕೈಗೊಂಡಿದ್ದು ವನ್ಯಜೀವಿಗಳಿಂದ ರೈತರ ಬೆಳೆ ನಾಶದ ಪರಿಹಾರ ಮೊತ್ತವನ್ನು ಕೂಡಾ ಹೆಚ್ಚಿಗೆ ಮಾಡಲಾಗಿದೆ. ಅರಣ್ಯ ಸಚಿವರೂ ಆಗಿರುವ ಮಾನ್ಯ ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ವೃಕ್ಷಾರೋಪಣ ಅಭಿಯಾನ ನಡೆಯುತ್ತಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X