ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ದಿನವಾಯಿತು ಅಭಿಷೇಕ್ ಮೃತದೇಹ ಪತ್ತೆಯಾಗಿಲ್ಲ

By Staff
|
Google Oneindia Kannada News

ಬೆಂಗಳೂರು, ಜೂ. 4 : ಕಳೆದ ಭಾನುವಾರ ಮಳೆಯಿಂದಾಗಿ ಲಿಂಗರಾಜಪುರದ ಮೋರಿಯೊಂದರಲ್ಲಿ ತೇಲಿ ಹೋದ ಬಾಲಕ ಅಭಿಷೇಕ್ ಮೃತ ದೇಹ ಐದು ದಿನವಾದರೂ ಪತ್ತೆಯಾಗಿಲ್ಲ. ಪತ್ತೆ ಕಾರ್ಯ ಮುಂದುವರಿಸಿರುವ ಅಗ್ನಿಶಾಮಕ ಮತ್ತು ಬಿಬಿಎಂಪಿ ಅಧಿಕಾರಗಳ ಕಾರ್ಯಾಚರಣೆ ಗುರುವಾರವೂ ವಿಫಲವಾಗಿದೆ. ಮಗುವನ್ನು ಕಳೆದುಕೊಂಡ ತಾಯಿಯ ಅರಣ್ಯರೋದನ ಮುಂದುವರೆದಿದ್ದು, ಮತ ಕೇಳಲು ಬರುವ ರಾಜಕೀಯ ನಾಯಕರು ಮಗು ಕಳೆದುಕೊಂಡ ತಾಯಿ ಸಾಂತ್ವನಕ್ಕೆ ಆಗಮಿಸದಿರುವುದು ವಿಷಾದಕರ ಸಂಗತಿಯೇ ಸರಿ.

ಆದರೆ, ಲೋಕಾಯುಕ್ತ ನ್ಯಾಯಮೂರ್ತಿ ಎಂ ಸಂತೋಷ ಹೆಗ್ಡೆ ಮತ್ತು ಉಪಲೋಕಾಯುಕ್ತ ಪತ್ರಿ ಬಸವನಗೌಡ ಮಾತ್ರ ಮೃತ ಬಾಲಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರಷ್ಟೇ. ಕರಳು ಬಳ್ಳಿಯನ್ನು ಕಳೆದುಕೊಂಡ ತಾಯಿ ಸಂಬಂಧಪಟ್ಟವರಿಗೆ ಹಿಡಿ ಶಾಪ ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ, ಬೆಂಗಳೂರು ಉಸ್ತುವಾರಿ ಸಚಿವ ಆರ್ ಅಶೋಕ್ ಅವರು ಘಟನೆಗೆ ಸಂಬಂಧಿಸಿದಂತೆ ತುಟಿಪಿಟ್ಟೆನ್ನದಿರುವುದು ಆಶ್ಚರ್ಯ ಮತ್ತು ಕೋಪಕ್ಕೆ ಕಾರಣವಾಗಿದೆ. ಪಕ್ಷದಲ್ಲಿ ಎದ್ದಿರುವ ಬಂಡಾಯ ಮತ್ತು ಭಿನ್ನಾಭಿಪ್ರಾಯ ಯಡಿಯೂರಪ್ಪ ಅವರನ್ನು ಕಿವುಡರನ್ನಾಗಿಸಿರುವುದು ಸುಳ್ಳಲ್ಲ.

ಕಳೆದ ಭಾನುವಾರ ಬೆಂಗಳೂರಿನಲ್ಲಿ ಬಿದ್ದ ಮಳೆಯಿಂದಾಗಿ ಲಿಂಗಾರಾಜಪುರದ ಬಳಿ ತಾಯಿಯ ಜೊತೆಗೆ ಹೊರಬಂದಿದ್ದ ಅಭಿಷೇಕ್ ಮೋರಿಯಲ್ಲಿ ಕೊಚ್ಚಿ ಹೋಗಿದ್ದ. ಮೋರಿಯಲ್ಲಿ ಹೂಳೆತ್ತುವ ಕಾರ್ಯ ನಡೆದಿದೆ. ಇಂದು ಚಂದ್ರಿಕಾ ಸಾಬೂನು ಕಾರ್ಖಾನೆ ಬಳಿಯ ಪೆಟ್ರೋಲ್ ಬಂಕ್ ವರೆಗೂ ಕಾರ್ಯಾಚರಣೆ ನಡೆಸಲಾಗಿತಾದರೂ ಅಭಿಷೇಕ್ ನ ಮೃತದೇಹ ಮಾತ್ರ ಪತ್ತೆಯಾಗಿಲ್ಲ. ಮೊದಲ ಹಂತದಲ್ಲಿ ಅಭಿಷೇಕ್ ಬಿದ್ದ ಮೋರಿಯಿಂದ ನಾಗಾವರ ಕೆರೆವರೆಗೂ ಶೋಧಕಾರ್ಯ ಮಾಡಲಾಗಿತ್ತು. ತೇಲಿ ಹೋದಾಗಿನಿಂದ ಬಿಬಿಎಂಪಿ, ಅಗ್ನಿಶಾಮಕ ದಳಗಳು ಕಾರ್ಯಾಚರಣೆ ಆರಂಭಿಸಿವೆಯಾದರೂ ಫಲಿತಾಂಶ ಮಾತ್ರ ಶೂನ್ಯವಾಗಿದೆ.

ಐದನೇ ದಿನವಾದ ಇಂದು ಲಿಂಗಾರಾಜಪುರದಲ್ಲಿ ಬೆಳಗ್ಗೆಯಿಂದಲೇ ಅಗ್ನಿಶಾಮಕ ದಳ ಮತ್ತು ಅಕ್ಕಪಕ್ಕದ ಸ್ಥಳೀಯರು ಮೃತದೇಹ ಸಿಗಬಹುದು ಎಂಬ ಆಶಯದಿಂದಲೇ ಮತ್ತೊಮ್ಮೆ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ಅನುಮಾನ ಬಂದ ಜಾಗದಲ್ಲಿ ಜಾಗರೂಕತೆಯಿಂದ ಶೋಧನೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಅಗ್ನಿಶಾಮಕ ಪಡೆಯ ಸುಮಾರು 75 ಮಂದಿ ಹಾಗೂ 15 ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಬಿಬಿಎಂಪಿ ಪೂರ್ವ ವಲಯದ ಆಯುಕ್ತ ಎಸ್ ಪುಟ್ಟಸ್ವಾಮಿ ತಿಳಿಸಿದ್ದಾರೆ.

ಜನನಾಯಕರ ವಿರುದ್ಧ ತೀವ್ರಗೊಂಡ ಅಸಮಾಧಾನ

ಕಳೆದ ಐದು ದಿನಗಳಿಂದ ಮಗುವನ್ನು ಕಳೆದುಕೊಂಡು ಅಭಿಷೇಕ್ ನ ಕುಟುಂಬ ದುಃಖದ ಮಡುವಿನಲ್ಲಿ ದಿನದೂಡುತ್ತಿದೆ. ಕಳೆದುಕೊಂಡ ಮಗನನ್ನು ಮರಳಿಸಲು ಸಾಧ್ಯವಿಲ್ಲ. ಕನಿಷ್ಟ ಸೌಜನ್ಯಕ್ಕಾದರೂ ಮಗುವಿನ ತಾಯಿಗೆ ಎರಡು ಸಾಂತ್ವನದ ಮಾತಗಳನ್ನು ಹೇಳಲು ಬಾರದ ರಾಜಕೀಯ ನಾಯಕರ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆ ಬಂತೆಂದರೆ ಮತ ಕೇಳಲು ನಾಮುಂದು ತಾಮುಂದು ಎಂದು ಮನೆಮನೆಗೆ ಸುತ್ತುವ ನಾಯಕರು, ಸಂಕಷ್ಟದಲ್ಲಿರುವ ಜನರ ಕಷ್ಟಕ್ಕೆ ಆಗದಿದ್ದರೆ ಹೇಗೆ ಎಂದು ಜನರು ಆಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X