ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ನಾಗಾಲೋಟಕ್ಕೆ ಕುಮಾರಸ್ವಾಮಿ ಬ್ರೇಕ್

By Staff
|
Google Oneindia Kannada News

Kumaraswamy
ಕೇಂದ್ರದಲ್ಲಿ ಯುಪಿಎ ಗದ್ದುಗೆ ಹಿಡಿಯುತ್ತಿದ್ದಂತೆಯೇ ಜೆಡಿಎಸ್ ಸುಪ್ರಿಮೋ ಎಚ್.ಡಿ.ದೇವೇಗೌಡರ ಬುದ್ದಿಚುರುಕಾಯಿತು. ತಾವೇ ಹುಟ್ಟು ಹಾಕಿದ ತೃತೀಯರಂಗದ ಕಳಪೆ ಸಾಧನೆ ಕಂಡು ಮುಜುಗರಪಟ್ಟುಕೊಂಡಿದ್ದರೂ ಅಚ್ಚರಿಯಿಲ್ಲ. ದೇವೇಗೌಡರ ಬುದ್ದಿ ಚುರುಕಾಗುವುದೇ ಅತ್ಯಂತ ಕ್ರೂಷಿಯಲ್ ಸಂದರ್ಭದಲ್ಲಿ ಎನ್ನುವುದು ಅವರು ರಾಜಕೀಯದ ಮೆಟ್ಟಿಲುಗಳನ್ನು ಏರಿದ ಪ್ರತೀ ಘಟನೆಯನ್ನು ಅವಲೋಕಿಸಿದರೆ ಮನವರಿಕೆ ಆಗುತ್ತದೆ. ಆದ್ದರಿಂದಲೇ ದೇವೇಗೌಡರನ್ನು ಎಂದು ಪ್ರೀತಿಯಿಂದ ಕರೆಯುತ್ತಾರೆ.

* ಚಿದಂಬರ ಬೈಕಂಪಾಡಿ, ಮಂಗಳೂರು

ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ರಾಜಕೀಯದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಅದೇನೆಂದರೆ ಕಾಂಗ್ರೆಸ್ ಅದಿನಾಯಕಿ
ಸೋನಿಯಾ ಗಾಂಧಿಯವರನ್ನು ಹತ್ತು ಜನಪಥ್‌ನಲ್ಲಿ ಭೇಟಿ ಮಾಡಿ ಯುಪಿಎಗೆ ಜೆಡಿಎಸ್ ಪಕ್ಷದ ಸಂಸದರ ಬೇಷರತ್ ಬೆಂಬಲ ಸಾರುವ ಪತ್ರ ಹಸ್ತಾಂತರಿಸಿದ್ದಾರೆ. ಈ ಕ್ಷಣದಲ್ಲಿ ಬಳ್ಳಾರಿಯ ಕೆ.ಸಿ.ಕೊಂಡಯ್ಯ (ಕುಮಾರಸ್ವಾಮಿಯನ್ನು ಮೊದಲು ಗುಟ್ಟಾಗಿ ಸೋನಿಯಾ ಭೇಟಿ ಮಾಡಿಸಲು ಹೋಗಿ ಕುಮಾರಸ್ವಾಮಿ ಭೇಟಿ ಹೈಪಬ್ಲಿಸಿಟಿ ಪಡೆಯಲು ಕಾರಣವಾದವರು), ಗುಲಾಂನಬಿ ಅಜಾದ್, ಅಹ್ಮದ್ ಪಟೇಲ್ ಸಾಕ್ಷಿಗಳು.

ಕುಮಾರಸ್ವಾಮಿ ದೆಹಲಿ ದರ್ಬಾರಿನಲ್ಲಿ ಕಾಣಿಸಿಕೊಂಡದ್ದೇ ತಡ ಸ್ಥಳೀಯ ಕಾಂಗ್ರೆಸ್ ದೊರೆಗಳಿಗೆ ಹೊಟ್ಟೆತೊಳೆಸಲು ಆರಂಭಿಸಿತು. ಜೆಡಿಎಸ್ ಸಹವಾಸವೇ ಬೇಡವೆಂದು ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾದರು. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ದಂಡಿಗೆ ಗೆಲ್ಲಲು ಸಾಧ್ಯವಾದದ್ದು ಕೇವಲ ಆರು ಸ್ಥಾನಗಳು. ಇವರ ಒಳಜಗಳ ಮತ್ತು ಪರಸ್ಪರ ಕಾಲೆಳೆಯುವ ಕಾರಣದಿಂದಲೇ ಇಂಥ ಕಳಪೆ ಪ್ರದರ್ಶನ ಎನ್ನುವುದನ್ನು ಕುಮಾರಸ್ವಾಮಿ ಅಥವಾ ದೇವೇಗೌಡರು ಸೋನಿಯಾರಿಗೆ ಹೇಳಬೇಕಾಗಿಲ್ಲ, ಅವರ ಸ್ನೇಹಿತರೇ ಹೇಳುತ್ತಾರೆ. ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಿದೆ ಎಂದು ಹಲ್ಲು ಗಿಂಜಿ ಸೋನಿಯಾರಿಗೆ ಹೇಳಿದವರು ಚುನಾವಣೆಗೆ ನಿಂತಿಲ್ಲ, ಅವರು ಫಲಿತಾಂಶ ಬರುತ್ತಿದ್ದಂತೆಯೇ ಹೂಗುಚ್ಚಹಿಡಿದು ನಾಯಕರನ್ನು ಅಭಿನಂದಿಸುತ್ತಿದ್ದರು ಅನ್ನುವುದನ್ನು ಫಲಿತಾಂಶದ ದಿನ ಟಿವಿ ನೋಡಿದವರು ಖಂಡಿತಕ್ಕೂ ಗುರುತಿಸಿದ್ದಾರೆ.ಇಂಥ ಅವಕಾಶವಾದಿಗಳೇ ಸೋನಿಯಾರನ್ನು ಸುತ್ತುವರಿದಿದ್ದಾರೆ, ಇದು ಕಾಂಗ್ರೆಸ್ ಪಕ್ಷದ ದುರಂತ.

ಆದ್ದರಿಂದ ಕರ್ನಾಟಕದ ಕಾಂಗ್ರೆಸ್ ದಂಡು ಏನೇ ಹೇಳಿದರೂ ಕೀಪ್ ಕ್ವಾಯಟ್' ಅಂತ ಸೋನಿಯಾ ಗದರಿದರೂ ಅಚ್ಚರಿಯಿಲ್ಲ. ಇದಕ್ಕೆ ಚಿಕ್ಕ ಸ್ಯಾಂಪಲ್ ಅಂದರೆ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶ್‌ಪಾಂಡೆ ಕುಮಾರಸ್ವಾಮಿಯವರಿಗೆ ಕೇಂದ್ರ ಸಂಪುಟದಲ್ಲಿ ಮಂತ್ರಿ ಸ್ಥಾನ ಕೊಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ, ಅವರ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ. ಇವರು ಹೇಳುವುದನ್ನು ಸೋನಿಯಾ ಕೇಳಬೇಕಿದ್ದರೆ ಇಲ್ಲಿನ ದಂಡನಾಯಕರು ಏನಿಲ್ಲವೆಂದರೂ ಹತ್ತು ಸ್ಥಾನಗಳನ್ನು ಗೆಲ್ಲಿಸಿ ಕಳುಹಿಸಬೇಕಿತ್ತು.

ರಾಜ್ಯದಲ್ಲಿ ಗೆದ್ದಿರುವ ಆರು ಮಂದಿಯನ್ನು ಸುಮ್ಮನೆ ಅವಲೋಕಿಸಿ. ಮಲ್ಲಿಕಾರ್ಜುನ ಖರ್ಗೆ ಸ್ವಂತ ವರ್ಚಸ್ಸಿನಿಂದ ಗೆದ್ದವರು. ಹಾಗೆಯೇ ಧರಂ ಸಿಂಗ್ ಮತ್ತು ವೀರಪ್ಪ ಮೊಯ್ಲಿ ಕೂಡಾ, ಇವರು ರಿಯಲೀ ಗ್ರೇಟ್.

ಕೆ.ಎಚ್.ಮುನಿಯಪ್ಪರ ಗೆಲುವು ಆಕಸ್ಮಿಕ ಅದರಲ್ಲೂ ಸಿದ್ದು ಕಾಂಗ್ರೆಸ್ ಪಾಳೆಯದಲ್ಲಿದ್ದ ಕಾರಣ. ಮೈಸೂರಿನಲ್ಲಿ ಹೆಚ್.ವಿಶ್ವನಾಥ್, ಚಾಮರಾಜನಗರದಲ್ಲಿ ಧ್ರುವನಾರಾಯಣ್ ಗೆದ್ದಿರುವುದೇ ಸಿದ್ದು ಇದ್ದ ಕಾರಣ. ಸತ್ಯ ಕಹಿಯಾಗಿರುತ್ತದೆ, ಆದ್ದರಿಂದ ಒಪ್ಪದಿರಬಹುದು ಬಿಡಿ.

ಹಾಗಾದರೆ ಕಾಂಗ್ರೆಸ್ ನಾಯಕರು ಅಥವಾ ಕೆಪಿಸಿಸಿ ಪದಾಧಿಕಾರಿಗಳ ಪ್ರಭಾವದಿಂದ ಒಬ್ಬರೂ ಗೆದ್ದಿಲ್ಲವಲ್ಲಾ, ಹಾಗಾದರೆ ಸೋನಿಯಾ ಮೇಡಂಗೆ ಇವರು ಏನು ಹೇಳಬಲ್ಲರು ?. ಆದ್ದರಿಂದಲೇ ಹೇಳಿದ್ದು ಇಲ್ಲಿ ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಏನೇ ಒದರಾಡಿದರೂ ವ್ಯರ್ಥ, ಇದನ್ನು ಅರಿತವರು ಸಧ್ಯಕ್ಕೆ ದೇಶ್‌ಪಾಂಡೆ ಒಬ್ಬರು ಮಾತ್ರ.

ಸೋನಿಯಾರಿಗೆ ಅಥವಾ ರಾಹುಲ್ ಗಾಂಧಿಗೆ ಥಿಯರಿ ಬೇಕಾಗಿಲ್ಲ, ಅವರಿಗೆ ಪ್ರಾಕ್ಟಿಕಲ್ ರಿಸಲ್ಟ್ ಬೇಕು. ಬಿಜೆಪಿ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣರಾದವರು ಜನರಲ್ಲ, ಕುಮಾರಸ್ವಾಮಿ. ಬಿಜೆಪಿಗೆ ಅಧಿಕಾರ ಹಿಡಿಯುವ ಆಸೆಯಿತ್ತು ಆದರೆ ತಂತ್ರ ಗೊತ್ತಿರಲಿಲ್ಲ. ಯಾಕೆಂದರೆ ಬಿಜೆಪಿ ಪ್ರತಿಪಕ್ಷದಲ್ಲಿದ್ದು ಅನುಭವಿ, ಈ ಅನುಭವ ಕಾಂಗ್ರೆಸ್‌ಗಿಲ್ಲ. ಆದ್ದರಿಂದಲೇ ಯಡಿಯೂರಪ್ಪ ಅವರು ಕುಮಾರಸ್ವಾಮಿ ಮಂತ್ರಿ ಮಂಡಲದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾಗಲೂ ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆ ಮಾತನಾಡುತ್ತಿದ್ದರು, ಈಗ ಬದಲಾಗಿದ್ದಾರೆ. ಇವರಿಗೆ ಅಧಿಕಾರದ ರುಚಿ ತೋರಿಸಿದವರೇ ಕುಮಾರಸ್ವಾಮಿ. ಆದರೆ ಈಗ ಇದೇ ಕುಮಾರಸ್ವಾಮಿ ಮೂಲಕ ಬಿಜೆಪಿ ನಾಗಾಲೋಟಕ್ಕೆ ಕಡಿವಾಣ ಹಾಕಲು ಸೋನಿಯಾ ಮುಂದಾಗಿದ್ದಾರೆ. ರಾಮಕೃಷ್ಣ ಹೆಗಡೆಯಂಥ ಚಾಣಾಕ್ಷ ರಾಜಕಾರಣಿಯನ್ನು ಬಗ್ಗು ಬಡಿದ ದೇವೇಗೌಡರಲ್ಲಿ ಇನ್ನೂ ಅನೇಕ ಪಟ್ಟುಗಳು ಉಳಿದುಕೊಂಡಿವೆ ಎನ್ನುವುದನ್ನು ಸೋನಿಯಾ ಅರಿತಿದ್ದಾರೆ. ಅವುಗಳನ್ನು ಕುಮಾರಸ್ವಾಮಿ ಮೂಲಕ ಬಿಜೆಪಿ ವಿರುದ್ದ ಪ್ರಯೋಗಿಸಲುಸೋನಿಯಾ ಮತ್ತು ಅವರ ಚೈಲ್ಡ್ ರಾಹುಲ್ ಮುಂದಾಗಿದ್ದಾರೆ.

ಸಿದ್ದು ಅಥವಾ ಇಲ್ಲಿನ ಕಾಂಗ್ರೆಸ್ ಮಂದಿ ಏನೇ ಹೇಳಿದರೂ ಸೋನಿಯಾ ಈಗ ಕೇಳುವ ಸ್ಥಿತಿಯಲ್ಲಿಲ್ಲ. ಅಡ್ವೈಸ್ ಮಾಡುವ ಹಕ್ಕನ್ನು ಕರ್ನಾಟಕದ ಕಾಂಗ್ರೆಸ್ ನಾಯಕರು ಕಳೆದುಕೊಂಡಿದ್ದಾರೆ. ಎಸ್.ಎಂ.ಕೃಷ್ಣರನ್ನು ಸೋನಿಯಾ ಕರೆಸಿ ಮಾತಾಡಿದ್ದು ಕರ್ನಾಟಕದ ಕಷ್ಟ ಸುಖವನ್ನು ಮತ್ತು ಜೆಡಿಎಸ್ ಜೊತೆ ಕೈಜೋಡಿಸಿದರೆ ಹೇಗೆ ಎನ್ನುವುದನ್ನು. ಕೃಷ್ಣರು ಚಾಣಾಕ್ಷ ರಾಜಕಾರಣಿ, ಅವರು ಸರಿಯಾಗಿಯೇ ಹೇಳಿದ್ದಾರೆ ಅಂತ ಈಗಿನ ಬೆಳವಣಿಗೆ ನೋಡಿದರೆ ಅನ್ನಿಸುತ್ತಿದೆ.

ಆದ್ದರಿಂದಲೇ ಕರ್ನಾಟಕದ ಕಾಂಗ್ರೆಸಿಗರಿಗೆ ಸದಾಮುಚ್ಚಿರುವ ಸೋನಿಯಾ ನಿವಾಸದ ಬಾಗಿಲು ಕುಮಾರಸ್ವಾಮಿಯವರಿಗೆ ತೆರೆದುಕೊಂಡಿದೆ. ಸೋನಿಯಾರಿಗೆ ಮತ್ತು ಕುಮಾರಸ್ವಾಮಿಯವರಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬ್ರೇಕ್ ಹಾಕುವುದು ಅನಿವಾರ್ಯ. ಇಬ್ಬರದ್ದೂ ಕಾಮನ್ ಅಜೆಂಡಾ, ನೋಡ್ತಾ ಇರಿ ಅಷ್ಟೇ, ದೂಸ್ರಾ ಮಾತಾಡಬೇಡಿ ಮೇಡಂಗೆ, ಏನಂತೀರಿ ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X