• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರಾವಳಿಯಲ್ಲಿ ಹಿಂದುತ್ವದ ಕಲರವ

By * ಚಿದಂಬರ ಬೈಕಂಪಾಡಿ, ಮಂಗಳೂರು
|
ಹದಿನೈದನೇ ಲೋಕಸಭಾ ಚುನಾವಣೆಯಲ್ಲಿ ಕರಾವಳಿ ಜಿಲ್ಲೆಗಳ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಸಾಧನೆ ದಾಖಲಿಸಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಇಂಥ ಸ್ಥಿತಿಯಲ್ಲಿತ್ತು. ಆದರೆ ಈಗ ಬಿಜೆಪಿ ಬೇರುಗಳು ಆಳವಾಗಿ ಬೇರೂರಿ ನಿರೀಕ್ಷಿತ ಫಲಕೊಡುತ್ತಿವೆ. ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಹಳೆಹುಲಿಗಳು ಬೋನು ಸೇರಿವೆ.

ಹಾಗೆಯೇ ಈ ಮೂರೂ ಕ್ಷೇತ್ರಗಳನ್ನು ಸುತ್ತಾಡಿದರೆ ಈ ಕ್ಷೇತ್ರಗಳಲ್ಲಿ ಗೆಲುವಿಗೆ ಕಾರಣವಾದ ಒಳಸುಳಿಗಳು ಬಿಚ್ಚಿಕೊಳ್ಳುತ್ತವೆ. ಸೋನಿಯಾ ಅಲೆಯೂ ಇಲ್ಲ, ರಾಹುಲ್ ಮೋಡಿಯೂ ಇಲ್ಲಾಗಿಲ್ಲ. ಹಾಗೆಂದು ಆಡ್ವಾಣಿಯವರ ವ್ಯಾಮೋಹವಿರಬಹುದೇ ಅಂದುಕೊಂಡಿದ್ದರೂ ತಪ್ಪು. ಕಾಂಗ್ರೆಸ್ ಪಕ್ಷಕ್ಕೆ ತಾನು ಗೆಲ್ಲುವ ಸಾಮರ್ಥ್ಯದ ಅರಿವೇ ಗೋಚರಿಸಲಿಲ್ಲ. ಬಿಜೆಪಿಗೆ ಹೀಗೂ ಗೆಲ್ಲಲು ಸಾಧ್ಯವೆನ್ನುವ ವಿಶ್ವಾಸವಿರಲಿಲ್ಲ. ಆದರೂ ಫಲಿತಾಂಶ ಮಾತ್ರ ಬಿಜೆಪಿ ಪರವಾಗಿ ಹೊರಹೊಮ್ಮಿತು ಹೇಗೆ?

ದಕ್ಷಿಣ ಕನ್ನಡ ಲೋಕಸಭಾಕ್ಷೇತ್ರ ಬಿಜೆಪಿ ಮಟ್ಟಿಗೆ ದಕ್ಷಿಣ ಭಾರತದಲ್ಲೇ ಅವಿಸ್ಮರಣೀಯ ಕ್ಷೇತ್ರ. ಮೊಟ್ಟಮೊದಲ ಬಾರಿಗೆ ಇಲ್ಲಿಂದಲೇ ಬಿಜೆಪಿ ಆರಿಸಿ ಬಂದದ್ದು. ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಬಿ.ಜನಾರ್ಧನ ಪೂಜಾರಿ ಅವರನ್ನು ಬಿಜೆಪಿಯ ವಿ.ಧನಂಜಯ ಕುಮಾರ್ ಮಣಿಸಿ ದೆಹಲಿ ಪ್ರವೇಶಿಸಿದ್ದರು. ಎರಡನೇ ಸಲವೂ ಪೂಜಾರಿಯವರನ್ನು ಸೋಲಿಸಿದ ಧನಂಜಯ ಕುಮಾರ್ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ವಿಮಾನ ಯಾನ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ದಕ್ಷಿಣ ಭಾರತದ ಬಿಜೆಪಿಯ ಮೊದಲ ಮಂತ್ರಿ ಆಗಿದ್ದರು. ಆನಂತರ ಕರ್ನಾಟಕದಲ್ಲಿ ಕಮಲ ಅರಳಿತು ಎನ್ನುವುದು ಎಲ್ಲರಿಗೂ ಗೊತ್ತು.

ಹಿಂದುತ್ವದ ಮುಂದೆ ಎಲ್ಲವೂ ನಗಣ್ಯ

ಅಂದರೆ ಬಿಜೆಪಿ ಹುಟ್ಟಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರು ಕಾರಣರು. ಈ ಕಾರಣದಿಂದಲೇ ಈಗ ಬಿಜೆಪಿಯಲ್ಲಿ ಯಾರನ್ನೇ ನಿಲ್ಲಿಸಿದರೂ ಸುಲಭವಾಗಿ ಗೆಲ್ಲಬಹುದು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದಲೇ 2004ರಲ್ಲಿ ಅಂದಿನ ಸಂಸದ ವಿ.ಧನಂಜಯ ಕುಮಾರ್ ಅವರನ್ನು ಬಿಟ್ಟು ಡಿ.ವಿ.ಸದಾನಂದ ಗೌಡರನ್ನು ಬಿಜೆಪಿ ನಿಲ್ಲಿಸಿತ್ತು ಮತ್ತು ಮತದಾರರು ಈ ನಿರ್ಧಾರವನ್ನು ಒಪ್ಪಿ ಮತ ಹಾಕಿ ಕಳುಹಿಸಿದ್ದರು. 2009ರ ಚುನಾವಣೆಯಲ್ಲಿ ಸದಾನಂದ ಗೌಡರನ್ನು ಉಡುಪಿಗೆ ವರ್ಗಾಯಿಸಿ ಹೊಸಮುಖ ನಳಿನ್ ಕುಮಾರ್ ಕಟೀಲ್ ಅವರನ್ನು ಕಣಕ್ಕಿಳಿಸಿತು. ಮತದಾರರು ಸಹಮತ ಮುದ್ರೆ ಒತ್ತಿದರು.

ಈ ಚುನಾವಣೆಯನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷದ ಹಳೆಹುಲಿ ಬಿ.ಜನಾರ್ಧನ ಪೂಜಾರಿ ಅವರ ಎದುರು ಹೊಸಮುಖ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ದುರ್ಬಲ ಅಭ್ಯರ್ಥಿ. ಸಂಘಪರಿವಾರದಲ್ಲಿ ಎರಡೂವರೆ ದಶಕಗಳಿಂದ ಕಾರ್ಯಕರ್ತನಾಗಿ ದುಡಿಯುತ್ತಿದ್ದ ನಳಿನ್ ಕುಮಾರ್ ಅವರಿಗೆ ಸಂಘಪರಿವಾರವೇ ಸರ್ವಸ್ವ. ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರೇ ಪರಮಗುರು ಇವರಿಗೆ. ಆದರೆ ಜನಾರ್ಧನ ಪೂಜಾರಿಯವರಿಗೆ ಹಾಗಲ್ಲ. ಇಂದಿರಾ, ರಾಜೀವ್, ನರಸಿಂಹರಾವ್ ಸಂಪುಟದಲ್ಲಿ ಮಂತ್ರಿಯಾಗಿ ದುಡಿದ ಅನುಭವಿ. ಸಾಲಮೇಳಗಳ ಮೂಲಕ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದವರು. ಎರಡು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಮುನ್ನಡೆಸಿದವರು. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ರಾಷ್ಟ್ರಮಟ್ಟದಲ್ಲಿ ಮಿಂಚಿದವರು ಇವಿಷ್ಟುಸಾಲದೆ ಜನರು ಗುರುತಿಸುವುದಕ್ಕೆ?

ಪೂಜಾರಿಯವರಲ್ಲಿ ಇಲ್ಲದ್ದು ಮತ್ತು ಮತದಾರರು ಬಯಸಿದ್ದು ಒಂದೇ ಆಗಿತ್ತು, ಅದು ಹಿಂದುತ್ವ. ಹಿಂದುತ್ವ ಒಂದೇ ಮಂತ್ರ ಈಗ ಕರಾವಳಿಯಲ್ಲಿ. ಸೆಕ್ಯುಲರ್ ಸಿದ್ದಾಂತಕ್ಕೆ ಕಾಂಗ್ರೆಸ್ ಅಂಟಿಕೊಂಡಿದೆ. ಆದರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾರರು ಐದನೇ ಸಲವೂ ಕಾಂಗ್ರೆಸ್ ಸಿದ್ದಾಂತವನ್ನು ತಿರಸ್ಕರಿಸಿದ್ದಾರೆ. ಜನಾರ್ಧನ ಪೂಜಾರಿಯವರು ಹುಟ್ಟಿ ಬಂದಿರುವ ಬಿಲ್ಲವ ಸಮುದಾಯವೂ ಅವರ ಕೈ ಹಿಡಿಯಲಿಲ್ಲ ಅಂದರೆ ಹಿಂದುತ್ವದ ಆಳ ಮತ್ತು ಹರವು ಅದೆಷ್ಟು ಎನ್ನುವುದನ್ನು ಅರಿಯಬೇಕು. ಸುಮಾರು 40 ಸಾವಿರ ಮತಗಳ ಅಂತರದಿಂದ ಹೊಸಮುಖ ನಳಿನ್ ಕುಮಾರ್ ಅವರನ್ನು ಆರಿಸಿದ್ದಾರೆಂದರೆ ಇದು ಸಂಘ ಪರಿವಾರದ ಗೆಲುವು ಮತ್ತು ವೈಯಕ್ತಿಕವಾಗಿ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗಿರುವ ಮುನ್ನೋಟ ಹಾಗೂ ಅವರ ಹಿಡಿತಕ್ಕೆ ಸಾಕ್ಷಿ.

ಚರ್ಚ್ ಮೇಲಿನದಾಳಿ, ಪಬ್ ಅಟ್ಯಾಕ್, ದನಸಾಗಿಸುವವರನ್ನು ಹಿಡಿಯುವ ಕಾರ್ಯಾಚರಣೆ ಘಟನೆಗಳು ಕಾಂಗ್ರೆಸ್ ಸಿಂಪಥೈಸರ್ಗಳು ಮತದಾನದಿಂದ ದೂರ ಉಳಿಯದಂತೆ ಮಾಡಿದವು ಎನ್ನುವುದನ್ನು ಬಿಟ್ಟರೆ ಸೆಕ್ಯುಲರ್ ವಾದಕ್ಕೆ ಈಹಂತದಲ್ಲಿ ಅರ್ಥವಿಲ್ಲ ಎನ್ನುವ ಸಂದೇಶವನ್ನು ಫಲಿತಾಂಶ ಕೊಟ್ಟಿದೆ.

ಉಡುಪಿಯೂ ಗೋಪಾಲಕನ ತಾಣ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲೂ ಇದೇ ಸಮೀಕರಣ. ಯಾಕೆಂದರೆ ಈ ಕ್ಷೇತ್ರದಿಂದ ಸ್ಪರ್ಧಿಸಿದವರು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡರು. ಈ ಹಿಂದೆ ಇದೇ ಕ್ಷೇತ್ರದಿಂದ ಆರಿಸಿಹೋಗಿದ್ದ ಮನೋರಮಾ ಮಧ್ವರಾಜ್ ಬಿಜೆಪಿಗೆ ಕೈಕೊಟ್ಟ ಕಾರಣ ಸಂಘಪರಿವಾರದ ಕಣ್ಣಿಗೆ ಬಿದ್ದವರು ಸದಾನಂದ ಗೌಡರು. ಐದು ವರ್ಷ ತಿರುಗಾಡಿದ್ದ ಕ್ಷೇತ್ರವನ್ನು ಬಿಟ್ಟು ಹೊಸ ಕ್ಷೇತ್ರಕ್ಕೆ ಹೋಗಿ ನಿಲ್ಲುವುದು ನಿಜಕ್ಕೂ ಹೈರಿಸ್ಕ್. ಆದರೆ ಇದನ್ನು ಸಂಘಪರಿವಾರ ಬೇರೆ ಬೇರೆ ಆಯಾಮಗಳಿಂದ ಅಳೆದು ಅಂತಿಮ ಆಯ್ಕೆ ಮಾಡುತ್ತದೆ, ಹಾಗೆ ಆಯ್ಕೆಯಾದವರು ಸದಾನಂದ ಗೌಡರು.

ಈ ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆಯವರು ಸಜ್ಜನರಾಜಕಾರಣಿ. ಈ ಮಾತನ್ನು ಕಾಂಗ್ರೆಸ್‌ನವರಿಗಿಂತಲೂ ಗಟ್ಟಿಯಾಗಿ ಹೇಳುವವರು ಬಿಜೆಪಿ ಮತ್ತು ಸಂಘಪರಿವಾರದವರು. ಇವರ ಮೈನಸ್ ಪಾಯಿಂಟ್ ಅಂದರೆ ಮತ್ತೆ ಕಾಂಗ್ರೆಸ್ ಪಕ್ಷದ ಸೆಕ್ಯುಲರ್ ಸಿದ್ದಾಂತ. ಇವರು ದಳಪರಿವಾರದ ಸಹವಾಸವೂ ಬೇಡವೆಂದು ಎರಡು ಅವಧಿಗೆ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭೆಗೆ ಗೆದ್ದು ಬಂದಿದ್ದರು ಬ್ರಹ್ಮಾವರ ಕ್ಷೇತ್ರದಿಂದ. ಆದರೆ ಬಿಜೆಪಿಯ ಹಿಂದುತ್ವವನ್ನು ಒಪ್ಪುವುದಿಲ್ಲ ಹೆಗ್ಗಡೆಯವರು. ಇಂತವರು ಇಲ್ಲಿಯ ಮತದಾರರಿಗೆ ಬೇಕಾಗಿಲ್ಲ. ವೆರಿ ಸಿಂಪಲ್.

ಬಿಜೆಪಿ ಮಟ್ಟಿಗೆ ಹಿಂದುತ್ವ ಸಿದ್ದಾಂತ ಫಸ್ಟ್ ಉಳಿದೆಲ್ಲವೂ ಸೆಕೆಂಡರಿ. ಬಾಬಬುಡನಗಿರಿ ಇರುವ ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗ್ಡೆಯವರು ಕಾಂಗ್ರೆಸ್ ಥಿಯರಿ ಹೇಳಿದರೆ ಕೇಳುವುದಿಲ್ಲ ಎನ್ನುವುದು ಫಲಿತಾಂಶದಿಂದ ಸ್ಪಷ್ಟ. ಮತ್ತೊಂದು ಟಿಪ್ಸ್ ಸುಮ್ಮನೆ, ಹೆಗ್ಡೆಯವರ ಸಂಗಾತಿ ಡಿ.ಬಿ.ಚಂದ್ರೇಗೌಡರು ಅಪ್ಪಟ ಸೆಕ್ಯುಲರ್. ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಇಂದಿರಾ ಗಾಂಧಿಗೆ ತ್ಯಾಗ ಮಾಡಿ ಆರಿಸಿಬರಲು ಕಾರಣವಾಗಿದ್ದವರು ಉಪಚುನಾವಣೆಯಲ್ಲಿ. ಅದೂ ಕೂಡಾ ಬಾಬಬುಡನಗಿರಿ ಇಷ್ಯೂನಲ್ಲಿ ಅದೆಂಥ ಖಡಕ್. ಆದರೆ ಹಿಂದುತ್ವ ಒಪ್ಪಿದ ಕಾರಣಕ್ಕೇ ಬೆಂಗಳೂರಿಂದ ಲೋಕಸಭೆ ಪ್ರವೇಶಿಸಿದರು. ಜಯಪ್ರಕಾಶ್ ಹೆಗ್ಡೆಯವರು ಹಿಂದುತ್ವವಿರೋಧಿಸಿದ ಕಾರಣಕ್ಕೆ 27 ಸಾವಿರ ಮತಗಳ ಅಂತರದಿಂದ ಸೋತರು, ಸದಾನಂದ ಗೌಡರು ಗೆದ್ದರು.

ಮ್ಯಾಗಿಬಂಡಾಯ ವೇಸ್ಟ್-ಹಿಂದುತ್ವ ಫಸ್ಟ್

ಕಾರವಾರ ಅಥವಾ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆ. ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರ ತವರು ನೆಲ. ಆದರೇನು ಮಾಡೋದು ದೇಶಪಾಂಡೆಯವರೂ ಪುತ್ರವ್ಯಾಮೋಹದಿಂದ ಬಳಲಿದರು. ಹೈಕಮಾಂಡ್ ಮಾತ್ರ ಮಾರ್ಗರೇಟ್ ಆಳ್ವರನ್ನು ಮೆಚ್ಚಿತು ಜಸ್ಟ್ ಬಿಕಾಸ್ ಸೋನಿಯಾ ಮೇಡಂಗಾಗಿ. ಆದ್ದರಿಂದಲೇ ದೇಶಪಾಂಡೆ ಕೂಡಾ ಗಪ್‌ಚುಪ್ ಆದರು.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗಳನ್ನು ಮಾರಿಕೊಂಡರು ಅಂತ ದೆಹಲಿಯಲ್ಲೇ ಗುಡುಗಿದ್ದ ಮ್ಯಾಗಿ ಗ್ರಹಚಾರ ಸರಿಯಿರಲಿಲ್ಲ ಎನ್ನುವುದಕ್ಕೆ ಅವರಿಗೆ ಟಿಕೆಟ್ ಸಿಕ್ಕಿದ್ದೇ ಸಾಕ್ಷಿ. ಬಿಜೆಪಿಯ ಅನಂತ್ ಕುಮಾರ್ ಹೆಗಡೆ ರಾಜಯೋಗ. ಅವರ ಥಿಯರಿ ಯಂಗ್‌ಟರ್ಕ್‌ಗೆ ಅಪ್ಯಾಯಮಾನ ಒಂಥರಾ ವರುಣ್ ಗಾಂಧಿ ಹಾಗೆ. ಕಾಂಗ್ರೆಸ್ ಪಕ್ಷದ ಸೆಕ್ಯುಲರ್ ಟ್ರಂಪ್ ಕಾರ್ಡ್‌ಗೆ ಅನಂತ್ ಕುಮಾರ್ ಕೊಟ್ಟ ಒಂದು ಹೇಳಿಕೆ ಕಾಗೋಡು ತಿಮ್ಮಪ್ಪ ಅವರನ್ನು ಕೆರಳಿಸಿತು, ಆಡಬಾರದ ಮಾತು ಆಡಿದರೆಂಬ ಅಪಖ್ಯಾತಿಗೆ ಅವರ ಪಕ್ಷದವರಿಂದ ಟೀಕೆಗೆ ಗುರಿಯಾದರು.

ಮ್ಯಾಗಿಪರ ಪ್ರಚಾರಕ್ಕೆ ಸಿನಿಮಾ ನಟಬಂದಾಗ ಜನಸೇರಿ ಆ ನಟನನ್ನು ನೋಡಿ ಸಂತಸಪಟ್ಟರು. ಮತಗಟ್ಟೆಗೆ ಹೋಗಿ ಅನಂತ್ ಕುಮಾರ್ ಹೆಗಡೆ ಹೇಳುವುದೇ ಸರಿಯೆಂದು ತಮ್ಮ ಹಕ್ಕುಚಲಾಯಿಸಿದರು. ಸುಮಾರು 22 ಸಾವಿರ ಮತಗಳ ಅಂತರದಿಂದ ಮ್ಯಾಗಿ ಸೋತರು. ಆದ್ದರಿಂದಲೇ ಮ್ಯಾಗಿಗೆ ಅಲ್ಲಿನ ಮತದಾರರು ಹೇಳಿದ್ದಾರೆ ಕಾಲಕಾಲಕ್ಕೆ ಅಪ್‌ಡೇಟ್ ಆಗಬೇಕೆಂದು ಹಿಂದುತ್ವ ಫಸ್ಟ್, ಫಲಿತಾಂಶ ನೆಕ್ಸ್‌ಸ್ಟ್.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more