ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರ ರಚನೆ : ಯಾರಿಗೆ ಸಿಗಲಿದೆ ದಿಲ್ಲಿ ಗದ್ದುಗೆ

By Staff
|
Google Oneindia Kannada News

All options for UPA, NDA, Third Front's
ಬೆಂಗಳೂರು, ಮೇ. 15 : ಪ್ರಮುಖ ಪಕ್ಷಗಳೆಲ್ಲ ಸರಕಾರ ರಚಿಸಲು ಬೇಕಿರುವ ಅಗತ್ಯ ಸಂಖ್ಯಾಬಲಕ್ಕಾಗಿ ತೀವ್ರ ಹುಡುಕಾಟ ಆರಂಭಿಸಿವೆ. ಫಲಿತಾಂಶ ಹೊರಬಿದ್ದ ನಂತರ ಯಾರು ಯಾರೊಂದಿಗೆ ಕೈಜೋಡಿಸುತ್ತಾರೋ ಎನ್ನವುದು ಸದ್ಯ ಹೇಳುವುದು ಅಸಾಧ್ಯ. ಶನಿವಾರ ಸಂಜೆ ನಂತರ ಆ ಪ್ರಕ್ರಿಯೆಗಳು ಆರಂಭಗೊಳ್ಳುತ್ತವೆ. ಸೋನಿಯಾ-ಅಡ್ವಾಣಿ, ಮಾಯಾವತಿ-ಮುಲಾಯಂ ಸಿಂಗ್ ಕೈಜೋಡಿಸುವುದಿಲ್ಲ ಎನ್ನುವುದನ್ನು ಹೊರತುಪಡಿಸಿದರೆ, ಉಳಿದ ಎಲ್ಲ ಪಕ್ಷಗಳಿಗೆ ಎಲ್ಲ ಸಾಧ್ಯತೆಗಳು ಜೀವಂತ. ಈ ಹಂತದಲ್ಲಿ ಸರಕಾರ ರಚಿಸುವ ಸಾಧ್ಯಾಸಾಧ್ಯತೆಗಳು ಯಾವುವು ಎಂಬುದರ ಪಕ್ಷಿ ನೋಟ ಇಲ್ಲಿದೆ.

ಕಾಂಗ್ರೆಸ್ ಪಕ್ಷ

* ಕಾಂಗ್ರೆಸ್ 160 ಸ್ಥಾನ ಗೆಲ್ಲುವುದು ಸಾಧ್ಯವಾದರೆ, ಅದರ ಮಿತ್ರ ಪಕ್ಷಗಳು 60 ಸ್ಥಾನ ಗೆದ್ದರೆ ಮ್ಯಾಜಿಕ್ ಸಂಖ್ಯೆ ತಲುಪಲು ಇನ್ನೂ 52 ಸ್ಥಾನಗಳು ಬೇಕಾಗುತ್ತದೆ. ಆಗ, ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಸಾಧಿಸಲು ಕಾಂಗ್ರೆಸ್ ಮುಂದಾಗುತ್ತದೆ. ಎಐಎಡಿಎಂಕೆ ಉತ್ತಮ ಸಾಧನೆ ಮಾಡಿದರೆ, ಆಗ ಡಿಎಂಕೆಯೊಂದಿಗಿನ ಮೈತ್ರಿ ಕಡಿದುಕೊಂಡು ಜಯಲಲಿತಾ ಅವರ ಕೈ ಹಿಡಿಯಲು ಕಾಂಗ್ರೆಸ್ ಹಿಂದೆ ಮುಂದೆ ನೋಡುವುದಿಲ್ಲ. ಜೆಡಿಯುವನ್ನು ಸೆಳೆದುಕೊಳ್ಳಲು ಈಗಾಗಲೇ ಕಸರತ್ತು ಆರಂಭಿಸಿದೆ. ಹೆಚ್ಚು ಸ್ಥಾನಗಳೊಂದಿಗೆ ಎಡಪಕ್ಷ ಬೆಂಬಲ ನೀಡಿದರೆ ತೃಣಮೂಲ ಕಾಂಗ್ರೆಸ್‌ಗೆ ಟಾಟಾ ಹೇಳಲು ಕಾಂಗ್ರೆಸ್ ಮುಜುಗರ ಪಡುವುದಿಲ್ಲ. ಎಸ್‌ಪಿ ಹಾಗೂ ಬಿಎಸ್‌ಪಿ ನಡುವಿನ ಆಯ್ಕೆಯೂ ಇದೇ ರೀತಿ ಆಗಲಿದೆ. ಕಾಂಗ್ರೆಸ್ 160, ಮೈತ್ರಿ 60, ಇತರ 52 = 272

* ಕಾಂಗ್ರೆಸ್‌ಗೆ 140 ಸ್ಥಾನಗಳು ಲಭಿಸಿ, ಮಿತ್ರಪಕ್ಷಗಳು 50 ಸ್ಥಾನ ಗಳಿಸಿದರೆ, ಇನ್ನೂ 82 ಸ್ಥಾನಗಳನ್ನು ಕಾಂಗ್ರೆಸ್ ಸೆಳೆಯಬೇಕಾಗುತ್ತದೆ. ಆಗ ಸಣ್ಣ ಪುಟ್ಟ ಪಕ್ಷಗಳ ಜತೆ ಚೌಕಾಶಿ ಅನಿವಾರ್ಯ. ಈಗ ಎಐಎಡಿಎಂಕೆಗಷ್ಟೇ ಗಾಳ ಹಾಕಿದರೆ ಸಾಕಾಗದು. ಎನ್‌ಡಿಎ ಜತೆ ಗುರುತಿಸಿಕೊಂಡಿರುವ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಣವನ್ನು ಸೆಳೆದು- ಕೊಳ್ಳಬೇಕಾಗುತ್ತದೆ. ಚಿರಂಜೀವಿಯ ಪ್ರಜಾರಾಜ್ಯಂ, ದೇವೇಗೌಡರ ಜೆಡಿಎಸ್, ಬಿಜೆಡಿ ಸೇರಿದಂತೆ ಎಲ್ಲ ಚಿಕ್ಕ ಪಕ್ಷಗಳನ್ನೂ ಒಂದುಗೂಡಿಸಿಕೊಂಡು ಬುಟ್ಟಿಗೆ ಹಾಕಿಕೊಳ್ಳಲು ಭಗೀರಥ ಪ್ರಯತ್ನ ನಡೆಸಬೇಕಾಗುತ್ತದೆ. ಕಾಂಗ್ರೆಸ್ 140, ಮೈತ್ರಿ 50, ಇತರ 82 = 272

ಬಿಜೆಪಿ ಪಕ್ಷ

* ಬಿಜೆಪಿ 160 ಸ್ಥಾನಗಳನ್ನು ಪಡೆದುಕೊಳ್ಳುವುದು ಸಾಧ್ಯವಾದರೆ ಮಿತ್ರಪಕ್ಷಗಳು 60 ಸ್ಥಾನ ಗಳಿಸಿದರೆ, ಉಳಿದ 52 ಸ್ಥಾನಗಳಿಗೆ ಬಿಜೆಪಿ ಸರ್ಕಸ್ ಪ್ರಾರಂಭ.ಒಂದು ಕಾಲದ ಹಳೆಯ ಮಿತ್ರರೆಲ್ಲ ಹೆಚ್ಚಿನ ಓಲೈಕೆಯ ಅವಶ್ಯಕತೆಯಿಲ್ಲದೆ ಒಟ್ಟಾಗಿ ಬರುತ್ತಾರೆ. ಎಐಎಡಿಎಂಕೆಯ ಜಯಲಲಿತಾ, ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ, ಟಿಡಿಪಿಯ ಚಂದ್ರಬಾಬು ನಾಯ್ಡು ಹಾಗೂ ಬಿಜೆಡಿಯ ನವೀನ್ ಪಟ್ನಾಯಕ್ ಅವರ ಸಹಕಾರದೊಂದಿಗೆ ಸರಕಾರ ರಚನೆಗೆ ಸಾಧ್ಯತೆ ಮುಕ್ತವಾಗಿದೆ. ಜಯಾ, ಚಂದ್ರಬಾಬು ನಾಯ್ಡು, ಮಮತಾ ಮತ್ತು ನವೀನ್ ಪಟ್ನಾಯಕ್ ಅವರಿಗೆ ಸರಕಾರದಲ್ಲಿ ಭರ್ಜರಿ ಪಾಲು ನೀಡಿದರೆ ಮಾತ್ರ ಇದು ಸಾಧ್ಯ. ಬಿಜೆಪಿ 160, ಮೈತ್ರಿ 60, ಇತರ 52 = 272

* ಬಿಜೆಪಿ 140 ಸ್ಥಾನಗಳನ್ನು ಗಳಿಸಿ, ಮಿತ್ರಪಕ್ಷಗಳು 60 ಸ್ಥಾನ ಗಳಿಸಿದರೆ ಇನ್ನೂ 72 ಸ್ಥಾನಗಳನ್ನು ಸೆಳೆದುಕೊಳ್ಳಲು ಬಿಜೆಪಿ ಹರಸಾಹಸ ಮಾಡಬೇಕಾಗುತ್ತದೆ. ಕಷ್ಟದ ಮಾತಾದರೂ ಇದು ಅಸಾಧ್ಯವೇನಲ್ಲ. ಹೀಗೊಂದು ಸಾಧ್ಯತೆ ಎದುರಾದರೆ ಬಿಜೆಪಿ ಎದುರು ಆಯ್ಕೆಗಳಿಲ್ಲ. ಆಡ್ವಾಣಿ ತಮ್ಮ ಪ್ರಧಾನಿ ಕನಸನ್ನು ಬಿಡಬೇಕಾಗುತ್ತದೆ. ಯಾಕೆಂದರೆ, ಹೊಸಮೈತ್ರಿಗಳನ್ನು ಸೆಳೆಯುವುದು ಹಾಗಿರಲಿ, ಈಗ ಎನ್‌ಡಿಎ ಜತೆಗಿರುವ ಮೈತ್ರಿಗಳೇ ಅಧಿಕಾರ ಅರಸಿ ಪ್ರಯಾಣ ಬೆಳೆಸುತ್ತವೆ. ಇದೇ ಬಿಜೆಪಿಯ ಬಹುದೊಡ್ಡ ಆತಂಕ.

ಆದರೂ ಯುಪಿಎ ಮೈತ್ರಿಕೂಟ ಸರಕಾರ ರಚಿಸುವುದನ್ನು ತಪ್ಪಿಸಲು ತನ್ನ ಬಾಹ್ಯ ಬೆಂಬಲದೊಂದಿಗೆ ಕಾಂಗ್ರೆಸ್ಸೇತರ ಸರಕಾರ ಅಧಿಕಾರಕ್ಕೇರುವಂತೆ ನೋಡಿಕೊಳ್ಳಬಹುದು. ಹೀಗಾದರೆ ಪ್ರಧಾನಿ ಪಟ್ಟ ಎನ್‌ಡಿಎ, ಯುಪಿಎ ಇಲ್ಲವೇ ತೃತೀಯ ರಂಗದಲ್ಲಿರುವ ಯಾವುದೇ ನಾಯಕರಿಗೂ ಒಲಿದು ಬರಬಹುದು. ಬಿಜೆಪಿಗೆ ಒಂದಷ್ಟು ಕಾಲ ರಿಮೋಟ್ ಕಂಟ್ರೋಲ್ ಆಡಳಿತ ನಡೆಸಿದ ತೃಪ್ತಿಯಷ್ಟೇ ದೊರಕಬಹುದು. ಬಿಜೆಪಿ 140,ಮೈತ್ರಿ 60 ಇತರ 72 = 272

* ಕಾಂಗ್ರೆಸೇತರ ಹಾಗೂ ಬಿಜೆಪಿಯೇತರ ಸರಕಾರ ರಚನೆಯಾದೀತೆ? ತೃತೀಯ ರಂಗ 110 ಸ್ಥಾನ ಗಳಿಸಿ, ಬಿಎಸ್‌ಪಿ ಪ್ರತ್ಯೇಕವಾಗಿ 30 ಸ್ಥಾನ ಗಳಿಸಿದರೆ ಇನ್ನೂ 132 ಸ್ಥಾನಗಳನ್ನು ತೃತೀಯ ರಂಗ ಸೆಳೆಯಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ, ಎನ್‌ಡಿಎ ಹಾಗೂ ಯುಪಿಎ ಕೂಟದಲ್ಲಿರುವ ಕೆಲ ಪಕ್ಷಗಳನ್ನು ಸೆಳೆದುಕೊಂಡು ಸಂಖ್ಯಾಬಲ ಸ್ಥಾಪಿಸಲು ಎಡಪಕ್ಷ ಮುಂದಾಗಬಹುದು. ತೃತೀಯ ರಂಗ ಸರಕಾರವನ್ನು ಅಸ್ಥಿರಗೊಳಿಸಿ ತಮ್ಮ ಸರಕಾರ ರಚಿಸಲು ಯುಪಿಎ ಹಾಗೂ ಎನ್‌ಡಿಎಗಳು ನಿರಂತರವಾಗಿ ಪ್ರಯತ್ನ ಜಾರಿಯಲ್ಲಿಡುತ್ತವೆ. ಎಲ್ಲಕ್ಕಿಂತ ಮುಖ್ಯಪ್ರಶ್ನೆ ಪ್ರಧಾನಿ ಯಾರು ಎನ್ನುವುದು. ಬಿಎಸ್ಪಿ ಬೆಂಬಲ ಪಡೆಯಬೇಕಾದರೆ ಮಾಯಾವತಿ ಅವರಿಗೆ ಪ್ರಧಾನಿ ಪಟ್ಟವನ್ನು ಒಪ್ಪಿಸುವುದು ಅನಿವಾರ್ಯ. ಈ ಕ್ರಮಕ್ಕೆ ತೃತೀಯ ರಂಗ ಮತ್ತು ಇತರ ನಾಯಕರ ಪ್ರತಿಕ್ರಿಯೆ ನಿರ್ಣಾಯಕ. ತೃತೀಯ ರಂಗ 110, ಬಿಎಸ್ಪಿ 30 ಇತರ 132 = 272

(ಸ್ನೇಹ ಸೇತು- ವಿಜಯ ಕರ್ನಾಟಕ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X