ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಬಲಗೈ ಬೆರಳಿಗೆ ಇಂಕು ಯಾಕಪ್ಪ?

By Staff
|
Google Oneindia Kannada News

Yeddyurappa after voting in Shikaripura
ಬೆಂಗಳೂರು, ಏ.30 : ಭಾರೀ ಪ್ರತಿಷ್ಠೆಯ ಕಣವಾಗಿರುವ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ 'ಸೋಲಿಲ್ಲದ ಸರದಾರ' ಎಂದೇ ಖ್ಯಾತರಾಗಿರುವ 77ರ ಹರೆಯದ ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮಗ 36 ವರ್ಷ ವಯಸ್ಸಿನ ರಾಘವೇಂದ್ರ ಅವರ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಪಕ್ಷದಿಂದ ಪಕ್ಷಕ್ಕೆ ಜಿಗಿದಾಡುತ್ತ ಮತ್ತೆ ಕಾಂಗ್ರೆಸ್ಸಿನಿಂದಲೇ ನಿಂತಿರುವ ಬಂಗಾರಪ್ಪ ಅವರಿಗೆ 'ರಾಜಕೀಯ ಗುಂಡಿ' ತೋಡಲು ಸರ್ವಸಿದ್ಧತೆ ಮಾಡಿಕೊಂಡಿರುವ ಯಡಿಯೂರಪ್ಪ ಅವರು ಪ್ರಥಮ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮಗನಿಗಾಗಿ ಶಿಕಾರಿಪುರದಲ್ಲಿ ಮತಯಂತ್ರದ ಗುಂಡಿ ಒತ್ತಿದ್ದಾರೆ.

ಮತ ಹಾಕಿದ ನಂತರ ಎಲ್ಲ ಮತದಾರರಿಗೂ ಹಾಕುವಂತೆ ಯಡಿಯೂರಪ್ಪನವರ ತೋರ್ಬೆರಳಿಗೂ ಅಳಿಸಲಾಗದ ಇಂಕನ್ನು ಹಚ್ಚಲಾಗಿದೆ. ಆದರೆ, ಹಚ್ಚಿದ್ದು ಎಡಬೆರಳಿಗಲ್ಲ ಬಲಗೈ ಬೆರಳಿಗೆ! ಅದನ್ನು ಅವರು ಹರ್ಷಚಿತ್ತರಾಗಿ ತೋರಿಸುತ್ತಿದ್ದಾರೆ!

ಚುನಾವಣಾ ನಿಯಮಗಳ ಪ್ರಕಾರ, ಎಡಗೈ ತೋರ್ಬೆರಳಿಗೇ ಶಾಯಿಯನ್ನು ಹಚ್ಚಬೇಕು. ಆದರೆ, ಇಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಬಲಗೈ ಬೆರಳಿಗೆ ಇಂಕು ಹಚ್ಚಿದ್ದು ಏಕೆ? ಇದು ಮುಖ್ಯಮಂತ್ರಿಗಳ ಗಮನಕ್ಕೆ ಬರಲಿಲ್ಲವೆ? ಅಥವಾ ಚುನಾವಣಾ ಸಿಬ್ಬಂದಿಯ ನಿರ್ಲಕ್ಷತನಕ್ಕೆ ಸಾಕ್ಷಿಯೆ?

ಒಬ್ಬ ಅಭ್ಯರ್ಥಿ ಎರಡೆರಡು ಬಾರಿ ಮತ ನೀಡಿ ಅಕ್ರಮ ನಡೆಸದಂತೆ ತಡೆಯಲು ಎಡತೋರ್ಬೆರಳಿಗೇ ಇಂಕು ಹಾಕಲಾಗುತ್ತದೆ. ಬಲಗೈಗೆ ಇಂಕನ್ನು ಹಾಕಿಸಿಕೊಂಡವನ ಹೆಸರು ಇನ್ನೊಂದು ಕ್ಷೇತ್ರದ ಪಟ್ಟಿಯಲ್ಲಿದ್ದರೆ ಅಲ್ಲಿಯೂ ಮತ ಹಾಕಬಹುದು. ಅಥವಾ ಚುನಾವಣಾಧಿಕಾರಿಗಳಿಗೇ ಚಳ್ಳೆಹಣ್ಣು ತಿನ್ನಿಸಿ ಅದೇ ಕ್ಷೇತ್ರದಲ್ಲಿಯೇ ಇನ್ನೊಬ್ಬರ ಪರ ಮತದಾನ ಮಾಡಬಹುದು.

ಚುನಾವಣಾ ನಿಯಮಗಳು ಮುಖ್ಯಮಂತ್ರಿಗಳಿಗೆ ತಿಳಿದಿರದ ವಿಷಯವೇನಲ್ಲ. ಪ್ರತಿಯೊಂದು ಕಾರ್ಯಕ್ಕೂ ಮೊದಲು ನೂರಾಯೆಂಟು ದೇವರುಗಳಿಗೆ ಪೂಜೆ ಸಲ್ಲಿಸುವ, ಜ್ಯೋತಿಷಿಗಳ ಸಲಹೆ ಕೇಳುವ ಯಡಿಯೂರಪ್ಪ ಅವರು ಅರಿವಿದ್ದುಕೊಂಡೇ ಬಲಗೈಗೆ ಇಂಕು ಹಚ್ಚಿಸಿಕೊಂಡಿದ್ದಾರೆಯೆ? ಇದು ಸದ್ಯಕ್ಕೆ ಬಿಡಿಸಲಾಗದ ಪ್ರಶ್ನೆ. ಇದಕ್ಕೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿದ್ಯಾಶಂಕರ್ ಅವರೇ ಉತ್ತರ ನೀಡಬೇಕು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X