ನೀತಿ ಸಂಹಿತೆ ಉಲ್ಲಂಘನೆಯಲ್ಲಿ ಬಿಜೆಪಿಯೇ ಮುಂದು
ಮೈಸೂರು, ಏ. 21 : ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾದಾಗಿನಿಂದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಭಾರತೀಯ ಜನತಾ ಪಕ್ಷವೇ ಮೊದಲ ಸ್ಥಾನ ಪಡೆದಿದೆ ಎಂದು ರಾಜ್ಯ ಚುನಾವಣೆ ಆಯುಕ್ತ ಎಂ ಎನ್ ವಿದ್ಯಾಶಂಕರ್ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 20 ಸೋಮವಾರದವರೆಗೆ 406 ನೀತಿ ಸಂಹಿತೆ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಬಿಜೆಪಿ-125, ಕಾಂಗ್ರೆಸ್-103, ಜೆಡಿಎಸ್-60, ಬಿಎಸ್ಪಿ-11, ಸಿಪಿಐ-1, ಎನ್ ಸಿಪಿ-1 ಹಾಗೂ ಇತರೆ 102 ಪ್ರಕರಣಗಳು ದಾಖಲಾಗಿವೆ ಎಂದರು. 22.65 ಕೋಟಿ ರುಪಾಯಿಗಳ ಅಕ್ರಮ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ 51 ಪ್ರಕರಣಗಳನ್ನು ದಾಖಲಿಸಲಾಗಿದೆ. ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ, 15.66 ಕೋಟಿ ರುಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಖ್ಯಮಂತ್ರಿ ಮಗ ರಾಘವೇಂದ್ರ ಸ್ಪರ್ಧಿಸಿರುವ ಶಿವಮೂಗ್ಗ ಲೋಕಸಭೆ ಕ್ಷೇತ್ರದಿಂದ 1.66 ಕೋಟಿ ರುಪಾಯಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ವಿದ್ಯಾಶಂಕರ್ ವಿವರಿಸಿದರು.
ಚುನಾವಣೆ ಸಮಯದಲ್ಲಿ ಹಣ, ಹೆಂಡ ಹಂಚಿಕೆ ಮತ್ತಿತರ ಕಾನೂನುಬಾಹಿರ ಕೃತ್ಯಗಳನ್ನು ತಪ್ಪಿಸಲು ಒಬ್ಬ ಪೊಲೀಸ್ ಅಧಿಕಾರಿ ನೇತೃತ್ವದ ವಿಶೇಷ ಪಡೆಯನ್ನು ರಚಿಸಲಾಗಿದ್ದು. ಅಕ್ರಮಗಳ ನಡೆಯುವ ಸೂಚನೆ ಕಂಡು ಬಂದಲ್ಲಿ ದಿಢೀರ್ ದಾಳಿ ನಡೆಸಲು ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ವಿದ್ಯಾಶಂಕರ್ ಹೇಳಿದರು. ರಾಜ್ಯದಲ್ಲಿ ಎಪ್ರಿಲ್ 23 ಮತ್ತು 30 ಮತದಾನ ನಡೆಯಲಿವೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications