ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಅಕ್ರಮ ತಡೆಗೆ ತಂತ್ರಜ್ಞಾನ ಬಳಕೆ

By ವರದಿ : ಪ್ರಸಾದ ನಾಯಿಕ
|
Google Oneindia Kannada News

MN Vidyashankar, CEO, Karnataka Election Commission
ಬೆಂಗಳೂರು, ಮಾ. 23 : ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿರುವ 15ನೇ ಲೋಕಸಭಾ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ನಡೆಸುತ್ತಿರುವ ಸಿದ್ಧತೆ, ಕೈಗೊಂಡಿರುವ ಕ್ರಮಗಳು, ಭದ್ರತೆಯ ಸ್ಥಿತಿಗತಿ ಕುರಿತು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಎಮ್.ಎನ್. ವಿದ್ಯಾಶಂಕರ್ ಅವರು ವಿವರ ನೀಡಿದರು.

ಬೆಂಗಳೂರು ವರದಿಗಾರರ ಕೂಟ ಮತ್ತು ಬೆಂಗಳೂರು ಪ್ರೆಸ್ ಕ್ಲಬ್ ಜಂಟಿಯಾಗಿ ಸೋಮವಾರ ಕರೆದಿದ್ದ ಮಾಧ್ಯಮ ಸಂವಾದದಲ್ಲಿ ಪತ್ರಕರ್ತರೊಡನೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಚುನಾವಣೆಯಿಂದಾಗುತ್ತಿರುವ ಅಪಾರವಾದ ಖರ್ಚು, ಅಕ್ರಮ ನಡೆಸುತ್ತಿದ್ದ ಕಾರ್ಯಕರ್ತರಿಂದ ಜಪ್ತಿ ಮಾಡಿಕೊಂಡ ಹಣ ವಸ್ತುಗಳ ಬಗ್ಗೆ ವಿವರ ನೀಡಿದರು.

1951ರಲ್ಲಿ ಮೊದಲ ಬಾರಿಗೆ 489 ಸ್ಥಾನಗಳಿಗೆ ಮಹಾಚುನಾವಣೆಯಾದಾಗ 10.2 ಕೋಟಿ ರು. ಖರ್ಚಾಗಿತ್ತು. 2004ರಲ್ಲಿ 14ನೇ ಲೋಕಸಭೆಗೆ ಚುನಾವಣೆಯಾದಾಗ ಪಕ್ಷದ, ಅಭ್ಯರ್ಥಿಗಳ ಬಾಬತ್ತೆಲ್ಲ ಸೇರಿ ಖರ್ಚಾಗಿದ್ದು 4500 ಕೋಟಿ ರು. 15ನೇ ಮಹಾಚುನಾವಣೆಯಲ್ಲಿ ಈ ವೆಚ್ಚ 10 ಸಾವಿರ ಕೋಟಿ ರು. ದಾಟಲಿದೆ. ಇದರಲ್ಲಿ ಆಯೋಗ ಭರಿಸುತ್ತಿರುವುದು ಬರೀ 1700ರಿಂದ 1800 ಕೋಟಿ ರು. ಮಾತ್ರ. ಉಳಿದದ್ದೆಲ್ಲ ರಾಜಕಾರಣಿಗಳು ರಾಜಕೀಯ ಪ್ರಚಾರಕ್ಕಾಗಿ ದುಂದುವೆಚ್ಚ ಮಾಡುತ್ತಿದ್ದಾರೆಂದು ಖೇದ ವ್ಯಕ್ತಪಡಿಸಿದರು.

ವಿದ್ಯುನ್ಮಾನ ಮತಯಂತ್ರ, ಕೇಂದ್ರ ಆಯೋಗಕ್ಕೆ ಚುನಾವಣಾ ವರದಿ ಮಾಡುವ ವಿಧಾನ, ಮೈಸೂರಿನಲ್ಲಿ ತಯಾರಾಗುತ್ತಿರುವ ಅಳಿಸಲಾರದ ಇಂಕು, ಸಂವಹನಕ್ಕಾಗಿ ಅಳವಡಿಸಿರುವ ಜಿಪಿಎಸ್ (ಗ್ಲೋಬಲ್ ಪೋಸಿಷನಿಂಗ್ ಸಿಸ್ಟಂ) ನಿಂದಾಗಿ ರಾಜ್ಯ ಚುನಾವಣಾ ಆಯೋಗ ಇಡೀ ದೇಶ್ಕಕ್ಕೇ ಮಾದರಿಯಾಗಿದೆ ಎಂದು ವಿದ್ಯಾಶಂಕರ್ ನುಡಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಸದ್ಬಳಕೆಯಿಂದ ಚುನಾವಣಾ ಅಕ್ರಮಗಳನ್ನು ತಡೆಗಟ್ಟಬಹುದು. ಇದು ತಂತ್ರಜ್ಞಾನದ ಬಳಕೆಯಿಂದ ಮಾತ್ರ ಸಾಧ್ಯ ಇಲ್ಲದಿದ್ದರೆ ಅಕ್ರಮ ನಿಯಂತ್ರಣ ಅಸಾಧ್ಯ ಎಂದ ವಿದ್ಯಾಶಂಕರ್ ತಂತ್ರಜ್ಞಾನ ಬಳಕೆಯಿಂದಾದ ಲಾಭದ ಒಂದು ತಾಜಾ ಘಟನೆಯ ವಿವರ ನೀಡಿದರು. ಸಂವಾದಕ್ಕೆ ಪ್ರಾರಂಭವಾಗುವ 10 ನಿಮಿಷ ಮೊದಲು ಬೆಳಗಾವಿಯ ಸಂಕೇಶ್ವರದ ಬಳಿ 7.25 ಲಕ್ಷ ರು. ಬಾಳುವ ಅಕ್ರಮ ಸಾರಾಯಿಯನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡ ಬಗ್ಗೆ ಜಿಪಿಎಸ್ ತಂತ್ರಜ್ಞಾನದ ಮುಖಾಂತರ ವರದಿ ತರಿಸಿಕೊಂಡಿದ್ದನ್ನು ಅವರು ತಿಳಿಸಿದರು.

ಈ ಜಿಪಿಎಸ್ ತಂತ್ರಜ್ಞಾನವನ್ನು ಮೊತ್ತಮೊದಲ ಬಾರಿಗೆ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಇದರಿಂದಾಗಿ ಯಾವ್ಯಾವ ಕ್ಷೇತ್ರಗಳಲ್ಲಿ ಯಾವ ಚುನಾವಣಾಧಿಕಾರಿ ಎಷ್ಟು ಹೊತ್ತು ಕೆಲಸ ನಿರ್ವಹಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ದೊರೆಯುತ್ತದೆ. ಅಧಿಕಾರಿಗಳ ಕಾರ್ಯವೈಖರಿಯ ಮೇಲ್ವಿಚಾರಣೆ ಮಾಡಲು ಸಾಧ್ಯವಿದೆ. ಸದ್ಯಕ್ಕೆ ಈ ವ್ಯವಸ್ಥೆಯನ್ನು ಕೆಲವೇ ಜಿಲ್ಲೆಗಳಲ್ಲಿ ಮಾತ್ರ ಅಳವಡಿಸಲಾಗಿದೆ. ಹಂತಹಂತವಾಗಿ ಎಲ್ಲೆಡೆಯಲ್ಲಿಯೂ ಅಳವಡಿಸಲಾಗುವುದು ಎಂದು ನುಡಿದರು.

ರಾಜ್ಯ ಆಯೋಗ ಚುನಾವಣಾ ಅಕ್ರಮ ತಡೆಯಲು ಸರ್ವರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಗದು ಮತ್ತಿತರ ವಸ್ತು ಸೇರಿ 4500 ಕೋಟಿ ರು.ಯಷ್ಟು ಆಯೋಗ ಜಪ್ತು ಮಾಡಿತ್ತು. ಇದು ಸಾಧ್ಯವಾಗಿದ್ದು ತಂತ್ರಜ್ಞಾನದ ಸದ್ಬಳಕೆಯಿಂದ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಎಲೆಕ್ಟ್ರಾನಿಕ್ ಮತಚೀಟಿಯ ವಿತರಣೆ ಬಗ್ಗೆ ಮಾತನಾಡುತ್ತ, ಬಳ್ಳಾರಿ ಸೇರಿದಂತೆ ಕೆಲವೆಡೆಗಳಲ್ಲಿ ವಿತರಣೆಯಲ್ಲಿ ಗೊಂದಲವಾಗಿದ್ದನ್ನು ಒಪ್ಪಿಕೊಂಡ ಅವರು ಏಪ್ರಿಲ್ 15ರೊಳಗಾಗಿ ಶೇ.85ರಷ್ಟು ಮತದಾರರಿಗೆ ಚೀಟಿ ವಿತರಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು. ಕರ್ನಾಟಕದಲ್ಲಿ ಅನೇಕ ಜಿಲ್ಲೆಗಳಲ್ಲಿ ಅನಕ್ಷರಸ್ಥರ ಸಂಖ್ಯೆ ಜಾಸ್ತಿ ಇರುವುದರಿಂದ ವಿತರಣೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ನುಡಿದರು.

ಎಷ್ಟೇ ಮುಂಜಾಗ್ರತೆ ಕೈಗೊಂಡರೂ ರಾಜಕಾರಣಿಗಳು ರಂಗೋಲಿ ಕೆಳಗೆ ನುಸುಳುವುದರಲ್ಲಿ ನಿಷ್ಣಾತರು. ಮಾರ್ಚ್ 2ರ ನಂತರ 325ಕ್ಕೂ ಹೆಚ್ಚಿನ ಚುನಾವಣಾ ಅಕ್ರಮದ ಕೇಸುಗಳನ್ನು ದಾಖಲಿಸಿಕೊಳ್ಳಲಾಗಿದೆ. ಬೆಳಗಾವಿ, ಶಿವಮೊಗ್ಗ, ಬಳ್ಳಾರಿ ಅಕ್ರಮ ನಡೆಸುವುದರಲ್ಲಿ ಮುಂಚೂಣಿಯಲ್ಲಿವೆ. ಪ್ರಚಾರಗಳಲ್ಲಿ ನಿರತರಾಗುವ ಸರ್ಕಾರಿ ಅಧಿಕಾರಿಗಳ ಮೇಲೆಯೂ ಕಣ್ಣಿಡಲಾಗಿದೆ. ಪ್ರತಿದಿನ ಕನಿಷ್ಠ 5 ದೂರುಗಳು ಬರುತ್ತಿವೆ ಎಂದು ವಿದ್ಯಾಶಂಕರ್ ಹೇಳಿದರು.

ಭಯೋತ್ಪಾದನೆಯ ಕರಿನೆರಳು ದೇಶದೆಲ್ಲೆಡೆ ಹಾಸಿಕೊಂಡಿರುವುದರಿಂದ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕೇಂದ್ರ ಪೊಲೀಸ್ ಫೋರ್ಸ್ ನ 75 ಕಂಪನಿಗಳನ್ನು ರಾಜ್ಯಕ್ಕೆ ಕಳಿಸಬೇಕೆಂದು ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು. ಮಂಗಳವಾರ, ಮಾರ್ಚ್ 24ರಂದು ಮುಖ್ಯ ಚುನಾಣಾಧಿಕಾರಿಗಳು ಬೆಂಗಳೂರಿಗೆ ಬರುತ್ತಿದ್ದು, ರಾಜಕೀಯ ಪಕ್ಷಗಳು, ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಡನೆ ಚುನಾವಣಾ ಪ್ರಕ್ರಿಯೆ ಕುರಿತು ಸಮಾಲೋಚನೆ ನಡೆಸಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X