ಅಕ್ರಮ ಮದ್ಯ ಸರಬರಾಜು ತಡೆಯಿರಿ: ಮೈಸೂರು ಡಿಸಿ
ಮೈಸೂರು, ಮಾ. 12 : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ವಹಿವಾಟು ನಡೆಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮೈಸೂರು ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳೂ ಆದ ಮೈಸೂರು ಜಿಲ್ಲಾ ಅಪರ ದಂಡಾಧಿಕಾರಿ ಡಾ: ಸಿ.ಜಿ. ಬೆಟ್ಟಸೂರಮಠ ತಿಳಿಸಿದರು.
ಅವರು ಇಂದು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಮದ್ಯ ಮಾರಾಟಗಾರರು ಹಾಗೂ ಮೈಸೂರು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಿದ್ದರು. ಯಾವುದೇ ಕಾರಣದಿಂದ ರಾತ್ರಿ 11 ಗಂಟೆಯ ನಂತರ ಬಾರ್ ಮತ್ತು ರೆಸ್ಟೋರೆಂಟ್ ಸೇರಿದಂತೆ ಎಲ್ಲಿಯೂ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು ಎಂದರು.
ಅಕ್ರಮ ಮದ್ಯ ಮಾರಾಟ, ಅಕ್ರಮ ಮದ್ಯ ಸಾಗಾಣಿಕೆ, ಅಕ್ರಮ ಮದ್ಯ ದಾಸ್ತಾನುಗಳು ಚುನಾವಣಾ ಪ್ರಕ್ರಿಯೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಇಂತಹ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಅನಿವಾರ್ಯ. ಈ ನಿಟ್ಟಿನಲ್ಲಿ ಮದ್ಯ ಮಾರಾಟಗಾರರು ಸಮರ್ಪಕವಾಗಿ ದಾಸ್ತಾನು ವಹಿ ನಿರ್ವಹಿಸಿ ವಲಯಾಧಿಕಾರಿಗಳು ತಪಾಸಣೆಗೆ ಬಂದಲ್ಲಿ ಸಹಕರಿಸಿ ಯಾವುದೇ ರೀತಿ ಮದ್ಯ ಅಕ್ರಮಗಳು ಜರುಗದಂತೆ ಜಾಗೃತರಾಗಿರಿ. ಇವುಗಳು ಉತ್ತಮ ಚುನಾವಣೆಗೆ ಸಹಕಾರಿಯಾಗುತ್ತವೆ ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮ ವಹಿಸಿ ಎಂದು ಸಿ.ಜಿ. ಬೆಟ್ಟಸೂರಮಠ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಪೆಟ್ರೋಲ್ ಬಂಕ್ ಲೆಕ್ಕ ಪುಸ್ತಕದ ಮೇಲೆ ಡಿಸಿ ಕಣ್ಣು











Click it and Unblock the Notifications