ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪಂಗಿ ಜಯದೇವ ಆಸ್ಪತ್ರೆಗೆ ದಾಖಲು

By Staff
|
Google Oneindia Kannada News

KGF mla Sampangi admitted to Jayadeva Hospital
ಬೆಂಗಳೂರು, ಜ. 30 : ನಗರದ ಶಾಸಕರ ಭವನದ ಮೇಲೆ ಗುರುವಾರ ಲೋಕಾಯುಕ್ತರ ತಂಡ ನಡೆಸಿದ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದ ಬಿಜೆಪಿ ಶಾಸಕ ವೈ ಸಂಪಂಗಿ ಅವರ ನ್ಯಾಯಾಂಗ ಬಂಧನವನ್ನು ಫೆ. 3ರ ತನಕ ಮುಂದುವರೆಸಲಾಗಿದೆ. ಆರೋಪಿ ಸಂಪಂಗಿ ಅನಾರೋಗ್ಯದ ಕಾರಣದಿಂದ ಇಂದು ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಆರೋಪಿ ಪರ ವಕೀಲ ಶ್ಯಾಮ್ ಸುಂದರ್ ಹೇಳಿದ್ದಾರೆ.

ಎದೆನೋವಿನ ಕಾರಣ ನೀಡಿ ನಗರದ ಜಯದೇವ ಆಸ್ಪತ್ರೆಗೆ ಗುರುವಾರ ರಾತ್ರಿ 11:45ಕ್ಕೆ ದಾಖಲಾಗಿರುವ ಸಂಪಂಗಿ, ಹಾಯಾಗಿ ನಿದ್ರಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಮಂಜುನಾಥ್ ಹೇಳಿದ್ದಾರೆ. ಲಂಚ ಸ್ವೀಕಾರ ಆರೋಪ ಹೊತ್ತಿರುವ ಶಾಸಕ ಸಂಪಂಗಿ ಅವರ ಜಾಮೀನು ಅರ್ಜಿ ವಿಚಾರಣೆ ನಗರದ ಸಿಟಿ ಸಿವಿಲ್ ಕೋರ್ಟ್ ನಲ್ಲಿ ನಡೆಯಿತು. ಶಾಸಕರು ಗೈರು ಹಾಜರಾತಿಯಿಂದಾಗಿ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಲಾಯಿತು ಹಾಗೂ ಜಾಮೀನು ನೀಡಲು ನಿರಾಕರಿಸಲಾಯಿತು. ಜಾಮೀನು ಅರ್ಜಿ ಪುರಸ್ಕರಿಸಲು ಯಥಾಸ್ಥಿತಿಯಲ್ಲಿ ಆರೋಪಿ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗತಕ್ಕದ್ದು ಎಂದು ನ್ಯಾಯಾಲಯದ ಆದೇಶದಲ್ಲಿ ಹೇಳಲಾಗಿದೆ ಎಂದು ಆರೋಪಿ ಪರ ವಕೀಲ ಶ್ಯಾಮ್ ಸುಂದರ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಈ ನಡುವೆ ಬಿಜೆಪಿ ಶಾಸಕರನ್ನು ಖೆಡ್ಡಾದಲ್ಲಿ ಬೀಳಿಸಲು ಲೋಕಾಯುಕ್ತರಿಗೆ ಸಹಾಯ ನೀಡಿದ್ದ ಫರೂಕ್ ಗೆ ಜೀವ ಬೆದರಿಕೆ ಕರೆಗಳು ಬರತೊಡಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಫರೂಕ್ ಹೇಳಿದ್ದಾರೆ. ಕೆಜಿಫ್ ಶಾಸಕರ ಲಂಚಾವತಾರ ಪ್ರಕರಣ ಇನ್ನೂ ಅನೇಕ ರಾಜಕೀಯ ಮತ್ತು ಕಾನೂನು ತಿರುವುಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಆರೋಪಿಪರ ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಭಗಿನಿ ಮುಂತಾದ ರಾಜಕೀಯ ನಾಯಕರು ಹೋರಾಟ ಮಾಡಲು ಸನ್ನದ್ಧರಾಗುತ್ತಿದ್ದಾರೆ. ಲೋಕಾಯುಕ್ತ ದಾಳಿ ಪ್ರಕರಣದ ಬಗ್ಗೆ ಸಂಶಯವನ್ನು ವಕೀಲರ ತಂಡ ವ್ಯಕ್ತಪಡಿಸಿದೆ.

ಇದೇ ವೇಳೆ, ಸಂಪಂಗಿ ಅವರನ್ನು ಭಾರತೀಯ ಜನತಾ ಪಕ್ಷ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಿದೆ ಎಂದು ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ. ವಿಧಾನ ಸಭಾ ಸದಸ್ಯತ್ವವನ್ನು ವಜಾಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದೂ ಸಭಾಪತಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಮುಂದೇನಾಗುವುದೋ ಕಾದು ನೋಡಬೇಕು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಲಂಚ ತಿನ್ನುತ್ತಿದ್ದ ಬಿಜೆಪಿ ಶಾಸಕ ಬಲೆಗೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X