ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಲ್ಬರ್ಗಾದಲ್ಲಿ ಸರ್ವಧರ್ಮ ಸಮ್ಮೇಳನ

By Staff
|
Google Oneindia Kannada News

ಗುಲಬರ್ಗಾ, ಜ. 18 : ಗುಲಬರ್ಗಾ ವಿಶ್ವವಿದ್ಯಾಲಯದ ಹತ್ತಿರ ಸೇಡಂ ರಸ್ತೆಯಲ್ಲಿ ನಿರ್ಮಿಸಲಾದ ಬುದ್ಧವಿಹಾರದಲ್ಲಿ 2009ರ ಜನವರಿ 19ರಂದು ಬೆಳಗಿನ 11 ಗಂಟೆಯಿಂದ ನಡೆಯಲಿರುವ ಸರ್ವಧರ್ಮ ಸಮ್ಮೇಳನ, ಚಿನ್ನಲೇಪಿತ ಭಗವಾನ್ ಬುದ್ಧ ಪ್ರತಿಮೆಯ ಹಾಗೂ ಗೋಪುರ ಕಳಶದ ಅನಾವರಣ ಮತ್ತು ಸ್ತೂಪದ ಉದ್ಘಾಟನಾ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಯ ಬಗ್ಗೆ ವಿಧಾನಸಭಾ ವಿರೋಧ ಪಕ್ಷದ ನಾಯಕ ಹಾಗೂ ಸಿದ್ಧಾರ್ಥ ವಿಹಾರ ಟ್ರಸ್ಟಿನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಪರಿಶೀಲಿಸಿದರು.

ಈ ಬೃಹತ್ ಕಾರ್ಯಕ್ರಮಕ್ಕೆ ಸುಮಾರು ನಾಲ್ಕೈದು ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದ್ದು, ಆಗಮಿಸುವ ಜನರಿಗೆ ಸೂಕ್ತ ಸಾರಿಗೆ, ವಸತಿ, ಕುಡಿಯುವ ನೀರು, ತಾತ್ಕಾಲಿಕ ಸ್ನಾನ ಮತ್ತು ಶೌಚಗೃಹಗಳ ವ್ಯವಸ್ಥೆ ಮಾಡಲಾಗುವುದು. ಇದಲ್ಲದೆ ಕಾರ್ಯಕ್ರಮದಲ್ಲಿ ನಿರಂತರ ವಿದ್ಯುತ್ ವ್ಯವಸ್ಥೆ, ಆರೋಗ್ಯ ಮತ್ತು ನೈರ್ಮಲ್ಯ, ಊಟದ ವ್ಯವಸ್ಥೆ ಸಹ ಕಲ್ಪಿಸಲಾಗುವುದು. ಗಣ್ಯಾತಿಗಣ್ಯ ವ್ಯಕ್ತಿಗಳ, ಗಣ್ಯ ವ್ಯಕ್ತಿಗಳ, ಜನಪ್ರತಿನಿಧಿಗಳ ಸುಗಮ ಸಂಚಾರ ವ್ಯವಸ್ಥೆಗೆ ಸಮರ್ಪಕ ಪೊಲೀಸ್ ಬಂದೋಬಸ್ತ್ ಮಾಡಿರುವ ಬಗ್ಗೆ ಸಭೆಯಲ್ಲಿ ಹಾಜರಿದ್ದ ಪ್ರಾದೇಶಿಕ ಆಯುಕ್ತ ರಜನೀಶ ಗೋಯೆಲ್ ಅವರು ವಿವರಿಸಿದರು.

ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಅಪರ ಪ್ರಾದೇಶಿಕ ಆಯುಕ್ತ ಎಫ್.ಆರ್.ಜಮಾದಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವಜ್ಯೋತಿ ರೇ, ಜಿಲ್ಲಾಧಿಕಾರಿಗಳ ಕೇಂದ್ರ ಸ್ಥಾನಿಕ ಸಹಾಯಕ ಟಿ.ಎಚ್.ಎಂ. ಕುಮಾರ, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಚಂದ್ರಮೌಳಿ ನಾಯಕ್ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಪ್ರಾದೇಶಿಕ ಆಯುಕ್ತ ರಜನೀಶ ಗೋಯೆಲ್ ಅವರು ಕಾರ್ಯಕ್ರಮ ನಡೆಯುವ ವೇದಿಕೆ, ಸ್ನಾನ ಮತ್ತು ಶೌಚಗೃಹ, ಊಟ ಮಾಡುವ ಸ್ಥಳಗಳನ್ನು ಪರಿಶೀಲಿಸಿದರು. ಈ ಕಾರ್ಯಕ್ರಮಕ್ಕೆ ವಿಶ್ವದ ಬೌದ್ಧ ಧರ್ಮದ ಪರಮೋಚ್ಚ ಧರ್ಮಗುರುಗಳು ಹಾಗೂ ನೋಬೆಲ್ ಪ್ರಶಸ್ತಿ ಪುರಸ್ಕೃತ ಪೂಜ್ಯ ದಲೈ ಲಾಮ, ಕರ್ನಾಟಕ ಮುಖ್ಯಮಂತ್ರಿ ಡಾ ಬಿ.ಎಸ್. ಯಡಿಯೂರಪ್ಪ , ಆಂಧ್ರಪ್ರದೇಶ ಮುಖ್ಯಮಂತ್ರಿ ಡಾ ವೈ.ಎಸ್. ರಾಜಶೇಖರರೆಡ್ಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರು, ಸಂಸದರು, ಶಾಸಕರು, ವಿವಿಧ ಧರ್ಮಗಳ ಮಠಾಧೀಶರು, ಇತರ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X