ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ವೃದ್ಧ ದಂಪತಿಗಳ ಬರ್ಬರ ಹತ್ಯೆ

By Staff
|
Google Oneindia Kannada News

ಬೆಂಗಳೂರು : ಪ್ರತಿಷ್ಠಿತ ಜಯನಗರ ಬಡಾವಣೆಯ 3ನೇ ಬ್ಲಾಕ್, 11ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆಯಲ್ಲಿ ಒಂಟಿಯಾಗಿ ಜೀವಿಸುತ್ತಿದ್ದ 79 ವರ್ಷ ವಯಸ್ಸಿನ ನಿವೃತ್ತ ಡೆಪ್ಯುಟಿ ಅಕೌಂಟಂಟ್ ಜನರಲ್ ಆಗಿದ್ದ ವೆಂಕಟರಂಗನ್ ಮತ್ತು 75 ವರ್ಷ ವಯಸ್ಸಿನ ಅವರ ಪತ್ನಿ ವಸಂತ ಅವರನ್ನು ಹಾಡುಹಗಲೇ ಕತ್ತು ಕತ್ತರಿಸಿ ಹತ್ಯೆಗೈಯಲಾಗಿದೆ.

ಈ ವೃದ್ಧ ದಂಪತಿಗಳಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು ಎಲ್ಲರೂ ಬೇರೆ ವಾಸಿಸುತ್ತಿದ್ದಾರೆ. ಹತ್ಯೆ ಶುಕ್ರವಾರ ಮಧ್ಯಾಹ್ನವೇ ಸಂಭವಿಸಿದೆ. ಅದು ಬೆಳಕಿಗೆ ಬಂದಿದ್ದು ಇಂದು ಬೆಳಿಗ್ಗೆ. ಯಾರ ದೂರವಾಣಿ ಕರೆಯನ್ನೂ ದಂಪತಿಗಳು ಸ್ವೀಕರಿಸದಿದ್ದಾಗ ಮನೆ ಬಾಗಿಲು ಮುರಿದು ಪ್ರವೇಶಿಸಿದಾಗ ಹತ್ಯೆ ನಡೆದಿರುವುದು ಗಮನಕ್ಕೆ ಬಂದಿದೆ. ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಆಸ್ತಿ ವಿವಾದ ಹತ್ಯೆಗೆ ಕಾರಣವಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ವೆಂಕಟರಂಗನ್ ಸ್ಥಿತಿವಂತರಾಗಿದ್ದು ಸಾಕಷ್ಟು ಆಸ್ತಿ ಹೊಂದಿದ್ದಾರೆ. ಅಪರಾಧಿಗಳನ್ನು ಬಲೆಗೆ ಬೀಳಿಸಲು ವಿಶೇಷ ತನಿಖಾ ದಳವನ್ನು ರಚಿಸಲಾಗಿದೆ ಎಂದು ನಗರ ಪೊಲೀಸ ಆಯುಕ್ತ ಶಂಕರ್ ಬಿದರಿ ಹೇಳಿದ್ದಾರೆ.

***

ಕ್ರಿಮಿನಲ್ ಮೇಲೆ ದಾಳಿ

ಮಂಗಳೂರು : ಜಿಲ್ಲೆಯ ಕಾದಿಪಳ್ಳಿ ಎಂಬಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಸಂಶೀರ್ ಮತ್ತು ರೆಹಮತ್ ಎಂಬವರ ಮೇಲೆ ಬೈಕಿನಲ್ಲಿ ಬಂದ ದಾಳಿಕೋರರು ಮಾರಕಾಸ್ತ್ರಗಳಿಂದ ಭೀಕರವಾಗಿ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸಂಶೀರ್ ಸ್ಥಳದಲ್ಲೇ ಮೃತರಾದರೆ ರೆಹಮತ್ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸುರತ್ಕರ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೆಹಮತ್ ಮೇಲೆ ದಾಳಿ ನಡೆಸಿದ ಅಪರಿಚಿತರು ಸಂಶೀರ್ ನನ್ನು ಬಲಿ ತೆಗೆದುಕೊಂಡಿದ್ದಾರೆ.

ರೆಹಮತ್ ಈ ಹಿಂದೆ ಉದಯ್ ಎಂಬುವವರ ಕೊಲೆಯಲ್ಲಿ ಭಾಗವಹಿಸಿದ್ದರು. ಅದರ ಸೇಡು ತೀರಿಸಿಕೊಳ್ಳಲು ರೆಹಮತ್ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧದಲ್ಲಿ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ.

ಹತ್ಯೆಯಾದ ನಂತರ ಕಾದಿಪಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ಅನೇಕ ಮನೆ ಮತ್ತು ಅಂಗಡಿಗಳ ಮೇಲೆ ದುಷ್ಕರ್ಮಿಗಳು ಕಲ್ಲಿನ್ನು ಎಸೆದಿದ್ದಾರೆ. ಅನೇಕ ವಾಹನಗಳು ಕೂಡ ಜಖಂಗೊಂಡಿವೆ. ಪೊಲೀಸರು ಸ್ಥಳವನ್ನು ಆಕ್ರಮಿಸಿಕೊಂಡಿದ್ದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

***

ಹಾಡುಹಗಲೇ 11.4 ಲಕ್ಷ ರು. ಲೂಟಿ

ಬೆಂಗಳೂರು : ಮಹದೇವಪುರ ಠಾಣೆ ವ್ಯಾಪ್ತಿಯಲ್ಲಿ ಬರುವ ಗರುಡಾಚಾರ್ ಪಾಳ್ಯದಲ್ಲಿ ಸಾಯಿ ಕೃಪಾ ಹಣಕಾಸು ಸಂಸ್ಥೆಗೆ ನುಗ್ಗಿ 4 ಜನ ಮುಸುಕುಧಾರಿಗಳು ರಿವಾಲ್ವರ್ ಮತ್ತು ಚಾಕು ತೋರಿಸಿ 11 ಲಕ್ಷ 40 ಸಾವಿರ ರುಪಾಯಿ ನಗದನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ಬೆಳಿಗ್ಗೆ 11.30ಕ್ಕೆ ಸಂಭವಿಸಿದೆ.

ಈ ಸಂಬಂಧ ನಾರಾಯಣ ಸ್ವಾಮಿ ಎಂಬುವವರು ದೂರು ನೀಡಿದ್ದಾರೆ. ದೂರಿನಲ್ಲಿ ತಮಗೆ ಯಾರ ಮೇಲೆಯೂ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ. ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡಿದ್ದನ್ನು ಗಮನಿಸಿರುವ ಅಪರಿಚಿತರು ಈ ಕೃತ್ಯವೆಸಗಿರಬಹುದೆಂದು ಶಂಕಿಸಲಾಗಿದೆ. ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಬಂದ ದುಷ್ಕರ್ಮಿಗಳು ಹಣ ಕಿತ್ತುಕೊಂಡು ಕ್ಷಣಮಾತ್ರದಲ್ಲಿ ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

***

ವೈದ್ಯಕೀಯ ವಿದ್ಯಾರ್ಥಿ ನೇಣಿಗೆ ಶರಣು

ಮಂಗಳೂರು : ಎಜೆ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ತಿಪಟೂರಿನ ಮೂಲದ ಯುವಕನೊಬ್ಬ ಪರೀಕ್ಷೆಗೆ ಹೆದರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಪಾಲಕರಿಗೆ ಪತ್ರ ಬರೆದಿರುವ ಯುವಕ, ಪರೀಕ್ಷೆಯಲ್ಲಿ ಚೆನ್ನಾಗಿ ಮಾಡದ ಕಾರಣ ನಪಾಸಾಗುವ ಭಯದಿಂದ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ತಿಳಿಸಿದ್ದಾನೆ.

ವೈದ್ಯಕೀಯ ಪರೀಕ್ಷೆಯಲ್ಲಿ ಈಗಾಗಲೆ ಮೂರು ಪೇಪರುಗಳನ್ನು ಆತ ಬರೆದಿದ್ದ. ಅದರಲ್ಲಿ ಚೆನ್ನಾಗಿ ಬರೆಯದ ಕಾರಣ ಮುಂದಿನ ಪೇಪರುಗಳು ಕೂಡ ಚೆನ್ನಾಗಿ ಬರೆಯದ ಭಯ ಆತನನ್ನು ಕಾಡಿದೆ. ತಂದೆ-ತಾಯಿಯರಿಗೆ ಆತ ಕ್ಷಮೆ ಕೇಳಿದ್ದು ಬೇಜಾರು ಮಾಡಿಕೊಳ್ಳಬಾರದೆಂದು ಬರೆದಿಟ್ಟಿದ್ದಾನೆ.

***

ಮಹಿಳೆ ಮೇಲೆ ಬ್ಲೇಡ್ ದಾಳಿ

ಚಿಕ್ಕಮಗಳೂರು : ನಗರದ ಪಿಜಿ ರಸ್ತೆಯಲ್ಲಿ ಮಹಿಳೆಯೊಬ್ಬಳ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಬ್ಲೇಡಿನಿಂದ ಆಕ್ರಮಣ ನಡೆಸಿದ್ದಾನೆ. ದಾಳಿಗೆ ಒಳಗಾದವರು ದೀಪಿಕಾ ಎಂಬುವವರು. ಆಕೆ ಅಕ್ವೇರಿಯಂ ಶಾಪ್ ನ ನೌಕರಳು ಎಂದು ತಿಳಿದುಬಂದಿದೆ. ಆಕ್ರಮಣಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X