ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಭ್ರಷ್ಟಾಚಾರದಲ್ಲಿ ರಾಜ್ಯಕ್ಕೆ ಅಗ್ರಸ್ಥಾನ

By Staff
|
Google Oneindia Kannada News

ಬೆಂಗಳೂರು, ಡಿ. 30 : ಕರ್ನಾಟಕದ ಮತದಾರರು ಭಾರತದಲ್ಲೇ ಅತ್ಯಂತ ಭ್ರಷ್ಟರು ಎಂದು ದಾಖಲಿಸುವ ಒಂದು ಸಮೀಕ್ಷೆ ಇತ್ತೀಚೆಗೆ ಪ್ರಕಟವಾಗಿತ್ತು. ಟೈಮ್ಸ್ ಆಫ್ ಇಂಡಿಯಾ ಬೆಂಗಳೂರು ಆವೃತ್ತಿ ಪ್ರಕಟಿಸಿದ್ದ ಭ್ರಷ್ಟ ಮತದಾರರ ರಾಷ್ಟ್ರೀಯ ಸಮೀಕ್ಷೆಯ ಕೋಷ್ಟಕದಲ್ಲಿ ನಮ್ಮ ಕರ್ನಾಟಕಕ್ಕೆ ಮೊದಲ ಸ್ಥಾನ ಸಿಕ್ಕಿತ್ತು. ಸಮೀಕ್ಷೆಯ ಪ್ರಕಾರ 47 ಅಂಕಗಳನ್ನು ಗಳಿಸುವುದರ ಮೂಲಕ ಇತರ ಎಲ್ಲ ರಾಜ್ಯಗಳನ್ನು ಹಿಂದಕ್ಕೆ ಹಾಕಿ ಚುನಾವಣಾ ಲಂಚಾವತಾರದಲ್ಲಿ ಮುಂದೆ ಧಾವಿಸುತ್ತಿತ್ತು ನಮ್ಮ ಕರ್ನಾಟಕ.

ಎಂಟು ಕ್ಷೇತ್ರಗಳಿಗೆ ಜರುಗಿದ ಪ್ರಸಕ್ತ ಉಪಚುನಾವಣೆಗಳ ನಂತರ ಕರ್ನಾಟಕವು ಭ್ರಷ್ಟ ಮತದಾರರ ಅಗ್ರ ಸ್ಥಾನವನ್ನು ನಿಸ್ಸಂಶಯವಾಗಿ ಉಳಿಸಿಕೊಂಡಿದೆ. ಒಟ್ಟಾರೆ ಎಷ್ಟು ಅಂಕಗಳಿಂದ ಮುಂದಿದೆ ಎಂಬುದನ್ನು ತಿಳಿಯಲು ಮುಂದಿನ ಸಮೀಕ್ಷಾ ವರದಿ ಪ್ರಕಟವಾಗುವತನಕ ಮಾನ್ಯ ನಾಗರಿಕರು ಕಾಯಬೇಕಾಗಿದೆ.

ಆಪರೇಷನ್ ಕಮಲದ ಕಮಾಲಿನಿಂದಾಗಿ ತೆರವಾದ ಏಳು ವಿಧಾನಸಭಾ ಸ್ಥಾನಗಳು ಮತ್ತು ಶಾಸಕ ಸಿದ್ದರಾಜು ನಿಧನದಿಂದಾಗಿ ತೆರವಾದ ಮದ್ದೂರು ಕ್ಷೇತ್ರದಲ್ಲಿ ಜರುಗಿದ ಚುನಾವಣಾ ಫಲಿತಾಂಶಗಳು ಈಗ ನಮ್ಮೆದುರಿಗಿವೆ. ಚುನಾವಣಾ ಪಂಡಿತರು ಮತ್ತು ಪ್ರಾಜ್ಞ ಪಾಮರರು ಎಣಿಸಿದಂತೆಯೇ ಫಲಿತಾಂಶಗಳು ಹೊರಬಿದ್ದಿವೆ. ದೇಶಪಾಂಡೆ, ಡಿಕೆಶಿ ನೇತೃತ್ವದ ಕಾಂಗ್ರೆಸ್ಸಿಗೆ ಕುಂಬಳಕಾಯಿ, ದೇವೇಗೌಡರ ಛಲದ ಜೆಡಿಎಸ್ಸಿಗೆ ಎರಡು ಅಥವಾ ಮೂರು ಮತ್ತು ಆಪರೇಶನ್ ಕಮಲಕ್ಕೆ ಉಳಿದ ಸ್ಥಾನಗಳು ಎಂಬ ಲೆಕ್ಕಾಚಾರ ನಿಜವಾಗಿದೆ. ಈ ಫಲಿತಾಂಶಗಳು ನಿರೂಪಿಸುವ ಕೆಲವು ಪಾಠಗಳನ್ನು ಈ ಕೆಳಕಂಡಂತೆ ಪಟ್ಟಿಮಾಡಲಾಗಿದೆ.

ಭಾಜಪ : ಸರಕಾರ ರಚಿಸುವುದಕ್ಕೆ ಅಗತ್ಯವಾದಷ್ಟು ಸಂಖ್ಯೆಯ ಸ್ಥಾನಗಳು ಗೆಲ್ಲಲಾಗದಿದ್ದಲ್ಲಿ ಆಡಳಿತ ಪಕ್ಷ ಮೊದಲಿಗೆ ಪಕ್ಷೇತರ ಶಾಸಕರನ್ನು ಖರೀದಿಸಬೇಕು. ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿ ತನ್ನದೇ ಆಗಿರುವಂಥ ಸರಕಾರ ರಚಿಸುವುದರಲ್ಲಿ ಯಶಸ್ಸು ಕಾಣಬೇಕು.

ಎರಡನೆಯದಾಗಿ, ತನ್ನೊಳಗೊಂದಾದ ಪಕ್ಷೇತರ ಶಾಸಕರು ಆಕಸ್ಮಾತ್ ಕೈಕೊಟ್ಟರೆ ಸರಕಾರ ನೆನೆಗುದಿಗೆ ಬೀಳುವುದನ್ನು ತಪ್ಪಿಸಲು ಆಡಳಿತ ಪಕ್ಷದ ಸಂಖ್ಯಾಬಲವನ್ನು ಮುಲಾಜಿಲ್ಲದೆ ಭದ್ರಮಾಡಿಕೊಳ್ಳಲು ಉಪಾಯ ಹುಡುಕಬೇಕು. ಆ ಉಪಾಯ ವಿರೋಧ ಪಕ್ಷದಿಂದ ಗೆದ್ದುಬಂದ ಶಾಸಕರಿಗೆ ರಾಜೀನಾಮೆ ಕೊಡಿಸಿ, ತನ್ನ ಪಕ್ಷಕ್ಕೆ ಭರ್ತಿಮಾಡಿಕೊಂಡು ಅವರಿಗೆ ಮಂತ್ರಿ ಸ್ಥಾನ ನೀಡವುದಾಗಿರಬೇಕು. ಹಾಗೆ ಮನಪರಿವರ್ತನೆಯಿಂದ ಸಚಿವರಾದ ಶಾಸಕರಲ್ಲದ ಶಾಸಕರು ಮತ್ತೆ ಆಯ್ಕೆಯಾಗಿ ಹೊರಹೊಮ್ಮುವುದಕ್ಕೆ ಮತ್ತೆ ಮತದಾರರ ಬಳಿ ಹೋಗಬೇಕು. ಯಾವುದಕ್ಕೂ ಗೆಲ್ಲುವ ಛಲ ಇರಬೇಕು. ಸುಭದ್ರ ಸರಕಾರ ಮಾತ್ರ ಜನೋಪಯೋಗಿ ಸರಕಾರವಾಗತ್ತೆ ಎಂಬ ಮಂತ್ರದಲ್ಲಿ ನಿಷ್ಠೆ ಇರಬೇಕು.

ಜೆಡಿಎಸ್ : ಧೂಳಿನಿಂದ ಎದ್ದುಬರುವ ಛಲ ಸದಾಕಾಲ ಹೆಗಲಮೇಲಿರಬೇಕು. ಜತೆಗಾರರು ಒಬ್ಬೊಬ್ಬರಾಗಿ ಬಿಟ್ಟುಹೋದರೂ ಇರುವ ಅಳಿದುಳಿದ ಅಸ್ತ್ರಗಳೆಲ್ಲ ಖಾಲಿಯಾಗುವವರೆಗೆ ರಾಜಕೀಯ ಮಾಡುತ್ತಿರಬೇಕು. ದ್ರೌಪದಿಯನ್ನು ಪಣಕ್ಕಿಟ್ಟಾದರೂ ಪಗಡೆ ಆಡಬೇಕು. ಪಂದ್ಯದಲ್ಲಿ ಗೆಲ್ಲಬೇಕು. ಸೋತರೆ ಮುಖಭಂಗ ಮಾಡಿಕೊಳ್ಳಬಾರದು. ಅಧಿಕಾರದ ಚುಕ್ಕಾಣಿ ಹಿಡಿಯಲಾಗದಿದ್ದರೂ ಸಹ ಆಡಳಿತ ಪಕ್ಷಕ್ಕೆ ಸದಾ ನಿದ್ದೆ ಗೆಡಿಸುವ ಸಮರ್ಥ ವಿರೋಧ ಪಕ್ಷವಾಗಿ ಚಾಲ್ತಿಯಲ್ಲಿರಬೇಕು. ಗೆಲ್ಲುವುದು ಒಂದು ವಿಷಯವಾದರೆ ತಮಗೆ ಕೈಕೊಟ್ಟು ಹೋದ ಜತೆಗಾರರಿಗೆ ಮರೆಯಲಾಗದ ಪಾಠ ಕಲಿಸುವ ಹಠ ಇನ್ನೊಂದು ಮಗ್ಗುಲಿನಲ್ಲಿ ನಿತ್ಯ ಎಚ್ಚರವಾಗಿರಬೇಕು.

ಕಾಂಗ್ರೆಸ್ಸ್ : ಗೆಲವು, ಅಧಿಕಾರ ಮುಖ್ಯವಲ್ಲ. ಇವತ್ತು ಬರತ್ತೆ ನಾಳೆ ನೆಗೆದು ಬೀಳತ್ತೆ. ಆದರೆ, ಜಾತ್ಯಾತೀತ ಭಾರತ ಸಮಾಜದಲ್ಲಿ ತಾನಿಟ್ಟಿರುವ ದೃಢ ನಂಬಿಕೆಯನ್ನು ಎಂದೆಂದಿಗೂ ಸಡಿಲಗೊಳಿಸಬಾರದು. ಇಡೀ ಪಕ್ಷಕ್ಕೆ ಓರ್ವರೇ ನಾಯಕರು, ಅವರೇ ಸೋನಿಯಾ ಗಾಂಧೀ ಎಂಬ ಏಕನಾಯಕಿ ವರಮಹಾಲಕ್ಷ್ಮೀವ್ರತಕ್ಕೆ ಭಂಗಬಾರದ ರೀತಿಯಲ್ಲಿ ರಾಜಕೀಯ ಮಾಡಬೇಕು.

ಮೇಲೆ ತಿಳಿಸಿದ ಮೂರು ಪಕ್ಷಗಳಿಗೆ ಸಾಮಾನ್ಯವಾಗಿ ಅನ್ವಯವಾಗುವ ಕೆಲವು ನೀತಿನಿಯಮಗಳಿವೆ. ಅವುಗಳೆಂದರೆ: ವಿರೋಧಿಗಳನ್ನು ರಾಜಕೀಯವಾಗಿ ನಿರ್ನಾಮ ಮಾಡುವ ಶಪಥವನ್ನು ಮೀರದಿರು; ಹಣ, ಹೆಂಡ, ಸೀರೆ ಮುಂತಾದ ಆಮಿಷಗಳನ್ನು ಕ್ಷೇತ್ರದಲ್ಲಿ ಚೆಲ್ಲಾಡು; ಚುನಾವಣಾ ಆಯೋಗದ ನಿಯಮಗಳನ್ನು ಗಾಳಿಗೆ ತೂರು; ಒಂದು ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆಗಳು ತೀರ ಕಡಿಮೆ ಇದೆ ಎನಿಸಿದರೆ ಕಂಜೂಸಾಗಿರು. ಯಾರು ಏನಾದರೂ ಟೀಕಿಸಲಿ, ಗಲೀಜು ರಾಜಕೀಯ ಮಾಡುವುದನ್ನು ಎಂದಿನಂತೆ ಮುಂದುವರೆಸು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಹಣ ಹಂಚುತ್ತಿದ್ದ ಚೆನ್ನಿಗಪ್ಪ ಮಗ ಪರಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X