ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಮಿಷ ತೋರಿಸುವ ಕಂಪನಿಗಳ ಬಗ್ಗೆ ಎಚ್ಚರಿಕೆ

By Staff
|
Google Oneindia Kannada News

ಬೆಂಗಳೂರು, ಡಿ. 24:ಇಂದು (ಡಿ.24) ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ದಿನವನ್ನು ಆಚರಿಸುವುದಕ್ಕಿಂತ ಮೊದಲು ಗ್ರಾಹಕರು ತಮ್ಮ ಹಿತರಕ್ಷಣೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಲು ಗ್ರಾಹಕರ ಹಿತರಕ್ಷಣಾ ಕಾಯ್ದೆಯ ಮೂಲಕ ಗ್ರಾಹಕರಿಗೆ ಅರಿವು ಮೂಡಿಸುವುದು ಮುಖ್ಯ ಎಂದು ವಿಧಾನ ಪರಿಷತ್ತಿನ ಅಧ್ಯಕ್ಶ್ಢ ಬಿ.ಕೆ. ಚಂದ್ರಶೇಖರ್ ಅಭಿಪ್ರಾಯಪಟ್ಟರು.

ನಾವು ಹಣ ಕೊಟ್ಟು ಪಡೆದ ಎಲ್ಲ ಸರಕು ಮತ್ತು ಸೇವೆಗಳ ಗ್ರಾಹಕರಾಗಿರುತ್ತೇವೆ. ಹೀಗೆ ಹಣ ಕೊಟ್ಟು ಪಡೆದ ಸರಕು ಅಥವಾ ಸೇವೆಗಳಲ್ಲಿ ಕೊಟ್ಟ ಹಣಕ್ಕೆ ಅನುಗುಣವಾದ ಗುಣಮಟ್ಟವನ್ನು ನಿರೀಕ್ಷಿಸುವ ಹಕ್ಕು ನಮಗಿದೆ. ಕೊಂಡ ಸರಕು ಅಥವಾ ಸೇವೆ ಈ ಗುಣಮಟ್ಟಕ್ಕಿಂತ ಕಡಿಮೆ ಇದ್ದರೆ , ಅದಕ್ಕಾಗಿ ಪರಿಹಾರ ಪಡೆಯುವ ಹಕ್ಕನ್ನು ಕಾನೂನು ನಮಗೆ ಕೊಟ್ಟಿದೆ ಎಂದು ಚಂದ್ರಶೇಖರ್ ಹೇಳಿದರು.

ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಾಕ್ರಮದಲ್ಲಿ ಕೇಳಿ ಬಂದ ಮಾತಿನ ಸಾರಂಶ ಇಲ್ಲಿದೆ:

ನಾವೆಲ್ಲರೂ ಪ್ರತಿದಿನ ಬೆಳಗ್ಗಿನಿಂದ ಸಂಜೆಯವರೆಗೆ ಮಾಡುವ ಎಲ್ಲ ಕೆಲಸ ಕಾರ್ಯಗಳಲ್ಲಿ ಒಂದಲ್ಲ ಒಂದು ರೀತಿ ಗ್ರಾಹಕರಾಗೇ ಇರುತ್ತೇವೆ. ಹಲವು ಸಂದರ್ಭಗಳಲ್ಲಿ ಗ್ರಾಹಕರ ಪ್ರತಿಭಟನೆ ಮತ್ತು ಹೋರಾಟದ ಅಭಾವದಿಂದಾಗಿ ಅವರ ಶೋಷಣೆ ಹೆಚ್ಚುತ್ತಲೇ ಇದೆ ಲಂಚರುಷವತ್ತುಗಳನ್ನು ಕೊಡದೆ ಅನ್ಯಾಯದ ವಿರುದ್ಧ ಹೋರಾಡುವುದು ಮತ್ತು ಪ್ರತಿಭಟಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಗ್ರಾಹಕರಾಗಿ ನಮ್ಮ ಹಕ್ಕುಗಳೇನು?

ಗ್ರಾಹಕರಾಗಿ ನಮಗೆ ಸುರಕ್ಷತೆಯ ಹಕ್ಕು, ಮಾಹಿತಿ ಪಡೆದುಕೊಳ್ಳುವ ಹಕ್ಕು ,ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳುವ ಹಕ್ಕು , ಆಯ್ಕೆಯ ಹಕ್ಕು , ಕೇಳಿಸಿಕೊಳ್ಳುವ ಹಕ್ಕು , ಪರಿಹಾರ ಪಡೆಯುವ ಹಕ್ಕು , ಗ್ರಾಹಕ ಶಿಕ್ಷಣದ ಹಕ್ಕು ಹಾಗೂ ಆರೋಗ್ಯಕರ ಮತ್ತು ಸಹನೀಯ ಪರಿಸರದ ಹಕ್ಕುಗಳು ಇರುತ್ತವೆ. ಪರಿಹಾರವನ್ನು ಪಡೆಯುವ ಹಕ್ಕಿನ ಅಂಗವಾಗಿ ಭಾರತದ ಸಂಸತ್ತು 1986ರಲ್ಲಿ ಗ್ರಾಹಕ ಸಂರಕ್ಷಣಾ ಅಧಿನಿಯಮವನ್ನು ಜಾರಿಗೆ ತಂದಿತು.

ಈ ಕಾನೂನಿನ ಕೆಳಗೆ ನಾವು ಕೊಂಡ ಸರಕು ದೋಷಪೂರಿತವಾಗಿದ್ದರೆ ಅಥವಾ ನಾವು ಹಣ ತೆತ್ತು ಪಡೆದ ಸೇವೆಯಲ್ಲಿ ನ್ಯೂನತೆಯಿದ್ದರೆ, ನಾವು ಸುಲಭವಾಗಿ ಪರಿಹಾರವನ್ನು ಪಡೆಯಬಹುದು. ಈ ಕಾನೂನನ್ನು ಅನುಷ್ಠಾನಕ್ಕೆ ತರಲು ಮೂರು ಸ್ಥರದ ಗ್ರಾಹಕ ನ್ಯಾಯಾಲಯಗಳನ್ನು ರಚಿಸಲಾಗಿದೆ. ಜಿಲ್ಲಾ ಮಟ್ಟದ ಗ್ರಾಹಕ ವೇದಿಕೆ, ರಾಜ್ಯ ಮಟ್ಟದ ಗ್ರಾಹಕ ಆಯೋಗ ಮತ್ತು ರಾಷ್ಟ್ರೀಯ ಮಟ್ಟದ ಗ್ರಾಹಕ ಆಯೋಗ. ನಾವು ಸಾಮಾನ್ಯವಾಗಿ ಸಲ್ಲಿಸುವ ದೂರುಗಳನ್ನೆಲ್ಲ ಜಿಲ್ಲಾ ಗ್ರಾಹಕ ವೇದಿಕೆಗೇ ಸಲ್ಲಿಸಬಹುದು. ಇತರ ನ್ಯಾಯಾಲಯಗಳಿಗೆ ಹೋಲಿಸಿದರೆ ಗ್ರಾಹಕ ನ್ಯಾಯಾಲಯಗಳ ಶುಲ್ಕ ಬಹಳ ಕಡಿಮೆ. ಬಹುಪಾಲು ದೂರುಗಳಿಗೆ ನೂರು ರೂ. ಶುಲ್ಕ ಸಾಕು. ಕಾನೂನಿನ ಪ್ರಕಾರ ಗ್ರಾಹಕ ನ್ಯಾಯಾಲಯಗಳಿಗೆ ಸಲ್ಲಿಸಿದ ದೂರುಗಳನ್ನು 90 ದಿನದೊಳಗೆ ಇತ್ಯರ್ಥ ಮಾಡಲೇಬೇಕು.

ಗ್ರಾಹಕ ನ್ಯಾಯಾಲಯಗಳ ಮುಂದೆ ನಿಮ್ಮ ವಾದವನ್ನು ನೀವೆ ಮಂಡಿಸಬಹುದು. ವಕೀಲರನ್ನು ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ವಿಚಾರಣೆಗಳು, ಪಂಚಾಯಿತಿಯ ತರಹ ಅತಿ ಔಪಚಾರಿಕತೆ ಇಲ್ಲದೆ ನಡೆಯುತ್ತದೆ. ಗ್ರಾಹಕ ನ್ಯಾಯಾಲಯವು ಆದೇಶಿಸಿದ ಪರಿಹಾರವನ್ನು ನಿಮ್ಮ ಪ್ರತಿವಾದಿಯು ನಿಮಗೆ ನೀಡದಿದ್ದರೆ ಅವರನ್ನು ಸೆರೆಮನೆಗೆ ಕಳುಹಿಸುವ ಅಧಿಕಾರ ಈ ನ್ಯಾಯಾಲಯಗಳಿಗಿರುತ್ತದೆ.

ಗ್ರಾಹಕರು ಸಾಮಾನ್ಯವಾಗಿ ಮೋಸ ಹೋಗುವುದು ಎಲ್ಲಿ?

ಮೋಸವನ್ನು ತಡೆಯಲು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬಹುದು. ಅವುಗಳೆಂದರೆ:-

ತೂಕದಲ್ಲಿ , ಅಳತೆಯಲ್ಲಿ , ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಕಂಡುಹಿಡಿಯುವಿಕೆ, ಕೃತಕ ಬಣ್ಣಗಳ ಬಳಕೆಯಿಂದ, ನಾವು ಕೊಂಡ ವಸ್ತುವಿನ ಪೊಟ್ಟಣದ ಮೇಲೆ ಮುದ್ರಿಸಿದ ಬೆಲೆ, ಕಂಪನಿಯ ಚಿನ್ಹೆ , ಪ್ಯಾಕಿಂಗ್ ದಿನಾಂಕ ಇವುಗಳನ್ನು ನಾವು ಎಚ್ಚರಿಕೆಯಿಂದ ತಿಳಿದುಕೊಂಡು ವ್ಯವಹರಿಸಿದಾಗ ಮೋಸಹೋಗುವುದನ್ನು ಹೆಚ್ಚಿನ ಮಟ್ಟಿಗೆ ತಡೆಯಲು ಸಾಧ್ಯವಾಗುತ್ತದೆ. ಹಾಗೂ ನಾವು ಯಾವುದೇ ವಸ್ತುವನ್ನು ಕೊಂಡ ತಕ್ಷಣ ರಸೀತಿಯನ್ನು ಪಡೆದಲ್ಲಿ ನಾವು ಎಲ್ಲಿಯೇ ಹೋದರೂ ಪರಿಹಾರವನ್ನು ಪಡೆಯಲು ಅನುಕೂಲವಾಗುತ್ತದೆ.

ಗ್ರಾಹಕರಿಗೆ ಅಪಾರ ಆಮಿಷಗಳನ್ನು ತೋರಿಸುವ ಪ್ರಸಂಗಗಳು ಹೆಚ್ಚಾಗುತ್ತಿವೆ. ಇಂತಹ ಕಂಪನಿಗಳೊಂದಿಗೆ ವ್ಯವಹಾರ ನಡೆಸಿದರೆ ಮೋಸ ಆಗುವ ಸಂಭವ ಜಾಸ್ತಿ. ನಂತರ ಅವರು ಹೇಳಹೆಸರಿಲ್ಲದೆ ಮಾಯವಾಗುವುದರಿಂದ ಅವರ ಮೇಲೆ ಕೇಸು ಹಾಕುವುದು, ಪರಿಹಾರ ಪಡೆಯುವುದು ಕಷ್ಟಸಾಧ್ಯವಾದ ವಿಚಾರ. ಆದ್ದರಿಂದ ಅಪಾರ ರಿಯಾಯಿತಿ, ಹೆಚ್ಚು ಆಮಿಷ ತೋರಿಸುವ ಕಂಪನಿಗಳ ಬಗ್ಗೆ ಎಚ್ಚರಿಕೆಯಿಂದಿರಿ.

ನಿಮಗೆ ಎಲ್ಲೇ ಮೋಸವಾದರೂ ಸುಮ್ಮನಿರದೆ ಪರಿಹಾರ ಪಡೆಯಲು ಪ್ರಯತ್ನಿಸಿ. ಅಲ್ಲಿ ಸಫಲವಾಗದಿದ್ದರೆ, ಸಮಸ್ಯೆಯನ್ನು ವಿವರಿಸಿ ಪರಿಹಾರ ಕೇಳಿ. ನೊಂದಾಯಿತ ಪತ್ರವನ್ನು ಕಳುಹಿಸಿ. ನೊಂದಾಯಿತ ಪತ್ರ ನೋಡಿ ಅನೇಕ ಅಂಗಡಿಯವರು ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಕಂಪನಿಯೊಂದರ ಉತ್ಪನ್ನದ ಬಗ್ಗೆ ಸಮಸ್ಯೆಯಿದ್ದರೆ ಕಂಪನಿಗೇ ಬರೆಯಿರಿ. ಇದೂ ಸಹ ಪರಿಣಾಮಕಾರಿ.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X