ಗೌಡ್ರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವೆ: ಸಿಎಂ
ದೇವದುರ್ಗ, ಡಿ. 23 : ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾನನಷ್ಟ ಮೊಕದ್ದಮೆ ಹೂಡಿ ನನ್ನ ವಿರುದ್ಧ ಹೋರಾಡುವ ಯೋಗ್ಯತೆ ಇದೆಯಾ ? ಧೈರ್ಯವಿದ್ದರೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಿ ನೋಡೋಣ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಸವಾಲು ಹಾಕಿದ ಬೆನ್ನಲ್ಲೇ ಇಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ದೇವೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.
ನೈಸ್ ಸಂಸ್ಥೆ ಬೆಂಗಳೂರು-ಮೈಸೂರು ರಸ್ತೆಗೆ ಶುಲ್ಕ ಬೆಲೆ ವಿಧಿಸಿರುವ ವಿಷಯ ಇದೀಗ ರಾಜಕೀಯ ನಾಯಕರ ಹಗ್ಗ-ಜಗ್ಗಾಟ, ತೇಜೊವಧೆಗೆ ಕಾರಣವಾಗಿದೆ. ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪ್ರತಿಷ್ಠೆ ಪ್ರಶ್ನೆಯಾಗಿದೆ. ಆರೋಪ ಪ್ರತ್ಯಾರೋಪಗಳ ಸುರಿಮಳೆ ದಂಡಿದಂಡಿಯಾಗಿ ಹರಿಯತೊಡಗಿವೆ. ಮುಖಂಡರ ಕಚ್ಚಾಟ ಹಾದಿ ರಂಪ, ಬೀದಿ ರಂಪವಾಗಿ ಪರಿಣಮಿಸಿದೆ.
ಇಂದು ದೇವದುರ್ಗದಲ್ಲಿ ಶಿವನಗೌಡ ನಾಯಕ ಪರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆಧಾರ ರಹಿತವಾಗಿದೆ ಎಂದರು. ದೇವೇಗೌಡರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದ್ದು, ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಲಾಗಿದೆ. ಎಲ್ಲರಿಂದಲೂ ಗೌಡರ ವಿರುದ್ಧ ಮೊಕದ್ದಮೆ ದಾಖಲಿಸಲು ಸಹಮತ ವ್ಯಕ್ತವಾಗಿದೆ. ಇವರ ವಿರುದ್ಧ ಕಾನೂನು ಹೋರಾಟ ಆರಂಭಿಸಲಾಗುವುದು ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಬೆಂಗಳೂರು- ಮೈಸೂರು ಕಾರಿಡಾರ್ ರಸ್ತೆಯಲ್ಲಿ ನೈಸ್ ಕಂಪನಿಯು ಟೋಲ್ ವಸೂಲಿ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಮಾಡಿರುವ ಗಂಭೀರ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ದೇವೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಈ ಹಿಂದೆ ಎಚ್ಚರಿಕೆ ನೀಡಿದ್ದರು.
ಮಾಜಿ ಪ್ರಧಾನಮಂತ್ರಿ ದೇವೇಗೌಡರು ನೈಸ್ ಸಂಸ್ಥೆ ಬೆಂಗಳೂರು ಮೈಸೂರು ಕಾರಿಡಾರ್ ರಸ್ತೆಗೆ ಸಂಬಂಧಿಸಿದಂತೆ ನೈಸ್ ಸಂಸ್ಥೆ ರಸ್ತೆ ಶುಲ್ಕ ಆರಂಭಿಸಿದಾಗಿನಿಂದ ಸರ್ಕಾರದ ವಿರುದ್ಧ, ಮುಖ್ಯವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದ ಗೌಡರು, ನೈಸ್ ಜತೆಗೆ ಸೇರಿಕೊಂಡು ಯಡಿಯೂರಪ್ಪ ಸುಮಾರು 30 ಸಾವಿರ ಕೋಟಿ ರುಪಾಯಿಗಳಷ್ಟು ಅಪಾರ ಮೊತ್ತವನ್ನು ಲೂಟಿ ಹೊಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.
(ದಟ್ಸ್ ಕನ್ನಡ ವಾರ್ತೆ)
ಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ :ಸಿಎಂ
ಯಡಿಯೂರಪ್ಪ ಅವರಿಗೆ ಮಾನವಿಲ್ಲ, ಎಚ್ಡಿಕೆ












Click it and Unblock the Notifications