ಮುಸ್ಲಿಮರಿಗೆ ರವಿಶಂಕರ್ ಗುರೂಜಿ ಕಿವಿಮಾತು
ಬಾಗ್ದಾದ್, ಡಿ. 23 : ಒಂದಡೆ ಭಾರತ ಹಾಗೂ ಪಾಕಿಸ್ತಾನ ದೇಶಗಳು ಯುದ್ಧಕ್ಕೆ ಸಿದ್ಧವಾಗತೊಡಗಿದ್ದರೆ, ಆರ್ಟ್ ಆಫ್ ಲೀವಿಂಗ್ ನ ಶ್ರೀ ರವಿಶಂಕರ ಗುರೂಜಿ ಅವರು ಇರಾಕಿನಲ್ಲಿನ ಶಿಯಾ ಮತ್ತು ಸುನ್ನಿ ಪಂಗಡಗಳಲ್ಲಿ ಶಾಂತಿ ಸ್ಥಾಪಿಸಲು ಶಾಂತಿಯ ರಾಯಭಾರಿಯಾಗಿ ಯಾತ್ರೆ ಕೈಗೊಂಡಿದ್ದಾರೆ. 2003 ರಿಂದಲೂ ಇರಾಕ್ ನ ಶೋಷಿತ ವರ್ಗಗಳ ಏಳಿಗೆ ಹಾಗೂ ಶಾಂತಿ ಸೌಹಾರ್ದತೆಗಾಗಿ ರವಿಶಂಕರ ಗುರೂಜಿ ಶ್ರಮಿಸುತ್ತಿದ್ದಾರೆ.
ಇರಾಕ್ ನಲ್ಲಿ ಸಿಯಾ ಮತ್ತು ಸುನ್ನಿ ಪಂಗಡಗಳಲ್ಲಿ ಹೊಡೆದಾಟ ಬಡಿದಾಟಗಳು ನಿತ್ಯ ನಡೆಯುತ್ತಿವೆ. ಕುಲಕ್ಕಾಗಿ ಹೊಡೆದಾಟ ಅಲ್ಲಿ ಇಂದು ನಿನ್ನೆಯದಲ್ಲ, ಶಿಯಾ ಮೇಲು, ಸುನ್ನಿ ದೊಡ್ಡದು ಎನ್ನುವ ಕುಲದ ನೆಲೆಗಾಗಿ ಸಾಕಷ್ಟು ಹೊಡೆದಾಟ ಬಡಿದಾಟ ನಡೆದಿವೆ. ಇನ್ನು ನಡೆಯುತ್ತಲೇ ಇವೆ. ಇದರಿಂದ ಅಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ.
2003 ರಿಂದಲೇ ಇರಾಕ್ ನ ಜನರಿಗೆ ಶಾಂತಿ ಸಹಬಾಳ್ವೆ ಬೋಧಿಸಲು ಮುಂದಾಗಿರುವ ರವಿಶಂಕರ ಗುರೂಜಿ ಅವರು, ಅಲ್ಲಿನ ಸಾವಿರಾರು ಜನರಿಗೆ ಯೋಗದ ಪಾಠ ಮಾಡಿದ್ದಾರೆ. ಮುಖ್ಯವಾಗಿ ಇರಾಕ್ ನ ಹಿಂದುಳಿದ ಜನಾಂಗಕ್ಕೆ ಯೋಗ, ಶಾಂತಿ ಹಾಗೂ ಸಹಬಾಳ್ವೆ ಕುರಿತಂತೆ ವಿಶೇಷ ಬೋಧನೆ ಮಾಡಿದ್ದಾರೆ. ಅಲ್ಲಿನ ಜನರು ಹೇಳುವ ಪ್ರಕಾರ, ರವಿಶಂಕರ ಗುರೂಜಿಯಿಂದ ಇರಾಕ್ ನ ಹಿಂದುಳಿದ ಪ್ರದೇಶದಲ್ಲಿ ಶಾಂತಿ ನೆಲೆಸಿದೆ. ಶಿಯಾ, ಸುನ್ನಿ ಎಂಬ ಒಳ ಜಗಳಗಳನ್ನು ತಕ್ಕ ಮಟ್ಟಿಗೆ ಬಿಟ್ಟು ನಾವೆಲ್ಲರೂ ಎನ್ನುವ ತಿಳಿದುಕೊಂಡು ಸೌಹಾರ್ದಯುತವಾಗಿ ಬಾಳಲು ಪ್ರಯತ್ನ ನಡೆಸಿದ್ದೇವೆ ಎನ್ನುತ್ತಾರೆ.
ರವಿಶಂಕರ ಗುರೂಜಿ ನಡೆಸುವ ಯೋಗ ಕಾರ್ಯಕ್ರಮಗಳಿಗೆ ಅಲ್ಲಿನ ರಾಜಕಾರಣಿಗಳು ಸಂಪೂರ್ಣ ಸಹಮತ ವ್ಯಕ್ತಪಡಿಸಿದ್ದು, ಅವರು ನಡೆಸಿಕೊಡುವ ಯೋಗ ಕಾರ್ಯಕ್ರಮದಲ್ಲಿ ಕೆಲ ಹೆಸರಾಂತ ರಾಜಕಾರಣಿಗಳು ಕೂಡಾ ಪಾಲ್ಗೊಳ್ಳುತ್ತಾರೆ ಎಂದು ಆರ್ಟ್ ಅಫ್ ಲೀವಿಂಗ್ ನ ವಕ್ತಾರರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications