ಸಾಮಾನ್ಯ ಪ್ರವೇಶ ಪರೀಕ್ಷೆ ರದ್ದತಿಗೆ ಸರ್ಕಾರಚಿಂತನೆ
ಬೆಂಗಳೂರು, ಡಿ.20: ಇಂಜಿನಿಯರಿಂಗ್, ವೈದ್ಯಕೀಯ ಮತ್ತ್ತು ದಂತವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ರದ್ದು ಮಾಡಲು ಗಂಭೀರ ಚಿಂತನೆ ನಡೆದಿದೆ. ಸಿಇಟಿ ಬದಲಿಗೆ ದ್ವಿತೀಯ ಪಿಯುಸಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಪ್ರವೇಶ ಕಲ್ಪಿಸಲುಚಿಂತಿಸಲಾಗಿದೆ.
ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ಮಾತನಾಡುತ್ತಾ, ದ್ವಿತೀಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಮೇಲೆ ಕೌನ್ಸೆಲಿಂಗ್ ನಡೆಸಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮತ್ತಿತರ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಕಲ್ಪಿಸಬೇಕೆಂಬ ಆಲೋಚನೆ ನಡೆದಿದೆ ಎಂದರು. ಒಂದು ವೇಳೆ ಈ ಆಲೋಚನೆ ಅನುಷ್ಠಾನಕ್ಕೆ ಬಂದರೆ ಆಗ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ,ಕಾಮೆಡ್ ಕೆ ಪರೀಕ್ಷೆಗಳ ಜಂಜಾಟ ಇರುವುದಿಲ್ಲ,.
ಈ ಸಂಬಂಧ ಉನ್ನತ ಶಿಕ್ಷಣ ಸಚಿವರು ಮತ್ತು ಖಾಸಗಿ ಆಡಳಿತ ಮಂಡಲಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ವೈದ್ಯಕೀಯ ಶಿಕ್ಷಣದ ಸೀಟುಗಳನ್ನು 80:20ರ ಅನುಪಾತದಲ್ಲಿ ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಹಂಚಿಕೆ ಮಾಡಿಕೊಳ್ಳಲು ಚಿಂತಿಸಲಾಗಿದೆ. ಖಾಸಗಿ ಸಂಸ್ಥೆಗಳಿಗೆ ಸೇರಿದ ಶೇ.20ರಷ್ಟು ಸೀಟುಗಳಿಗೆ ಎಷ್ಟು ಬೇಕಾದರೂ ವಂತಿಗೆ ಪಡೆದುಕೊಳ್ಳಬಹುದಾಗಿರುತ್ತದೆ ಎಂದು ಸಚಿವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications