ಬೀದರ್ ಶಾಲೆಯಲ್ಲಿ ಅಗ್ನಿ ದುರಂತ, ಇಬ್ಬರು ಬಲಿ
ಬೀದರ್, ಡಿ.20: ಬೀದರ್ ಸಮೀಪದ ಶಹಾಪೂರ್ ಗೇಟ್ ಬಳಿ ಇರುವ ಜೈಭೀಮ್ ಅನಾಥ ಮಕ್ಕಳ ಶಾಲೆಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಅಗ್ನಿ ದುರಂತದಲ್ಲಿ ಇಬ್ಬರು ಮಕ್ಕಳು ಸಜೀವಾಗಿ ದಹನವಾಗಿದ್ದಾರೆ. ಘಟನೆಯಲ್ಲಿ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಐದನೆ ತರಗತಿಯ ವಿದ್ಯಾರ್ಥಿ ಶ್ರೀಶಾಂತನ ಮತ್ತು ಒಂದನೆ ತರಗತಿಯಲ್ಲಿ ಓದುತ್ತಿರುವ ಬಾಲಕಿ ಸುನೀತಾ ಸೈದಪ್ಪ ಸಜೀವವಾಗಿ ದಹನವಾದವರು. ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯವೆ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ವಾರ್ಡನ್ ರಜೆಯಲ್ಲಿದ್ದು ಶಾಲೆಯ ಆಯಾ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದರು. ಹಾಗಾಗಿ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ವಾರ್ಡನ್ ಮಿಲಿಂದ ಎಂಬುವವರ ಮೇಲೆ ದೂರು ದಾಖಲಿಸಲಾಗಿದೆ.
ಗಾಯಗೊಂಡ ಮಕ್ಕಳನ್ನು ತಕ್ಷಣವೆ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಶಾಲೆಯಲ್ಲಿ ಒಟ್ಟು 60 ಮಂದಿ ವಿದ್ಯಾರ್ಥಿಗಳಿದ್ದು 40 ವಿದ್ಯಾರ್ಥಿಗಳು ರಜೆಗಾಗಿ ಊರುಗಳಿಗೆ ತೆರಳಿದ್ದಾರೆ. ಶಾಲೆಯಲ್ಲಿನ ವಸ್ತುಗಳು ಸುಟ್ಟು ಕರಕಲಾಗಿವೆ. ಅಗ್ನಿ ದುರಂತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications