ಸಚಿವ ಅಂತುಳೆ ವಿರುದ್ಧ ಕಾಂಗ್ರೆಸ್ ಕೆಂಗಣ್ಣು
ನವದೆಹಲಿ, ಡಿ. 18 : ಮುಂಬೈ ಭಯೋತ್ಪಾದನೆಯಲ್ಲಿ ವೀರಮರಣ ಅಪ್ಪಿದ ಧೀರ ಅಧಿಕಾರಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥ ಹೇಮಂತ್ ಕರ್ಕರೆ ಸಾವಿನ ಕುರಿತು ಕೇಂದ್ರದ ಸಚಿವ ಎ ಆರ್ ಅಂತುಳೆ ನೀಡಿರುವ ಹೇಳಿಕೆ ಇದೀಗ ಭಾರಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಪ್ರತಿಪಕ್ಷಗಳು ಸೇರಿ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗರಂ ಆಗಿರುವ ಕಾಂಗ್ರೆಸ್ ಹೈಕಮಾಂಡ್ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಅಂತುಳೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಶಿಸ್ತು ಕ್ರಮ ಜಾರಿ ಮಾಡುವ ಸಾಧ್ಯತೆಗಳಿವೆ.
ಹೇಮಂತ್ ಕರ್ಕರೆ ಭಯೋತ್ಪಾದಕರ ಹತ್ಯೆಗೀಡಾದರೂ, ಇಲ್ಲವೇ ಹಿಂದು ಪರ ಸಂಘಟನೆಗಳು ಏನಾದರೂ ಹತ್ಯೆ ಮಾಡಿದವೋ ಎನ್ನುವ ಅರ್ಥದಲ್ಲಿ ಸಚಿವ ಅಂತುಳೆ ಬುಧವಾರ ವಾರ್ತಾ ವಾಹಿನಿಗೆ ಸಂದರ್ಶನ ನೀಡಿದ್ದರು. ಇಡೀ ದೇಶವೇ ಆಶ್ಚರ್ಯ ಮತ್ತು ನಿಬ್ಬೆರಗಾಗುವಂತ ಮಹತ್ವದ ಪ್ರಕರಣವನ್ನು ಭೇದಿಸಿದ ಕೀರ್ತಿ ಹೇಮಂತ್ ಕರ್ಕರೆಗೆ ಸಲ್ಲಬೇಕು. ಇಷ್ಟು ದಿನ ಭಯೋತ್ಪಾದನೆ ಕೃತ್ಯದಲ್ಲಿ ತೊಡಗಿರುವವರು ಬರೀ ಮುಸ್ಲಿಮರು ಎಂದು ತಿಳಿದುಕೊಂಡಿದ್ದ ಭಾರತೀಯರಿಗೆ ಹಿಂದು ಧಾರ್ಮಿಕ ಸಂಘಟನೆಗಳ ಮುಖಂಡರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಪರಿಚಯ ಮಾಡಿಕೊಟ್ಟ ಸೂಪರ್ ಅಧಿಕಾರಿ ಕರ್ಕರೆ ಎಂದು ಅಂತುಳೆ ಹೇಳಿದ್ದರು.
ಜೀವದ ಹಂಗನ್ನೇ ತೊರೆದ ಹೇಮಂತ್ ಕರ್ಕರೆ ಇದೇ ವರ್ಷ ಸೆ. 29 ರಂದು ನಡೆದ ಮಾಲೇಗಾಂವ್ ಸ್ಫೋಟದಲ್ಲಿ ಹಿಂದು ಮೂಲಭೂತವಾದಿಗಳ ಕೈವಾಡವಿರುವುದನ್ನು ಹೊರಗೆಳೆದಿದ್ದರು. ಇದು ಕೆಲ ಹಿಂದುಪರ ಸಂಘಟಗಳಿಗೆ ತೀವ್ರ ಇರಿಸುಮುರಿಸು ಉಂಟು ಮಾಡಿತ್ತು. ಕರ್ಕರೆ ವಿರುದ್ಧ ಅನೇಕ ಟೀಕೆ ಟಿಪ್ಪಣಿಗಳು ಕೇಳಿ ಬಂದಿರುವುದು ಗೊತ್ತಿರುವ ಸಂಗತಿ ಎಂದು ಅಂತುಳೆ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಎಟಿಎಸ್ ನ ಕರ್ಕರೆ ಕೊಂದಿದ್ದು ಹಿಂದುಗಳೆ ?











Click it and Unblock the Notifications