ದೇವಾಲಯ ನವೀಕರಣಕ್ಕೆ ಎನ್ಅರ್ಐಗಳ ನೆರವು
ಬೆಂಗಳೂರು, ಡಿ. 16 : ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಶಿಕಾಗೋಗೆ ಆಗಸ್ಟ್ ಕೊನೆಯವಾರ ತೆರಳಿದ್ದ ಸಚಿವರು ಮತ್ತು ಶಾಸಕರ ತಂಡ ಏನು ಕಡೆದು ಕಟ್ಟೆ ಹಾಕಿತೋ ಗೊತ್ತಿಲ್ಲ ಎಂದು ಟೀಕಿಸುವವರಿಗೆ ಒಂದು ಸುದ್ದಿ. ಶಿಕಾಗೋ ತಂಡದಲ್ಲಿದ್ದ ತಿರುಪತಿ ಲಾಡು ಖ್ಯಾತಿಯ ಸಚಿವ ಎನ್. ಕೃಷ್ಣಯ್ಯ ಶೆಟ್ಟಿ ಅವರ ಪ್ರಕಾರ ನಮ್ಮ ಅನಿವಾಸಿ ಬಂಧುಗಳು ಕರ್ನಾಟಕದ ದೇವಾಲಯಗಳ ಮೇಲೆ ಭಕ್ತಿಭಾವದ ಅರ್ಚನೆ ಮಾಡುತ್ತಿದ್ದಾರೆ.
ರಾಜ್ಯದ ಸುಮಾರು 500 ದೇವಾಲಯಗಳ ನವೀಕರಣಕ್ಕೆ, ಜೀರ್ಣೋದ್ಧಾರಕ್ಕೆ ಅನಿವಾಸಿ ಭಾರತೀಯರು ನೆರವು ನೀಡಲು ಮುಂದಾಗಿರುವುದಾಗಿಯೂ, ತ್ವರಿತ ಗತಿಯಲ್ಲಿ ಈ ಕೆಲಸಕ್ಕೆ ಚಾಲನೆ ದೊರಕುವುದಾಗಿಯೂ ಮುಜರಾಯಿ ಇಲಾಖೆ ಸಚಿವರಾದ ಎನ್. ಕೃಷ್ಣಯ್ಯ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರಕಾರದ ಕೋರಿಕೆ ಮೇರೆಗೆ 500 ಮಂದಿ ಅನಿವಾಸಿಗಳು ಈ ಅಭಿವೃದ್ದಿ ಕೆಲಸಕ್ಕೆ ಮುಂದೆ ಬಂದಿದ್ದಾರೆ. 100 ಮಂದಿ ತಲಾ 10 ಲಕ್ಷ ರುಪಾಯಿ ನೀಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು. ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ದೇವಾಲಯಗಳಿಗೆ ಹೆಚ್ಚಿನ ನೆರವು ಬಂದಿದ್ದು, ಅನೇಕ ಮಂದಿ ದೇವಾಲಯದ ನವೀಕರಣಕ್ಕೆ ನೆರವು ನೀಡಿದರೆ, ಕೆಲವರು ನಿತ್ಯ ಪೂಜೆ ಮತ್ತು ಪ್ರಸಾದಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಮಲೆ ಮಹದೇಶ್ವರ ಬೆಟ್ಟ ಮತ್ತು ಬಿಳಿಗಿರಿರಂಗನ ಬೆಟ್ಟದ ದೇವಾಲಯಗಳ ಅಭಿವೃದ್ದಿಗೆಂದು ಹೊಸ ಮಂಡಳಿಯನ್ನು ರಚಿಸಲಾಗುತ್ತಿದ್ದು, ಇದರ ಅಡಿಯಲ್ಲಿ ಚಾಮುಂಡೇಶ್ವರಿ ಬೆಟ್ಟವನ್ನು ಸೇರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು ಸಚಿವರು. ಇತ್ತೀಚಿಗೆ ಅಮೆರಿಕದಲ್ಲಿ ನಡೆದ 'ಅಕ್ಕ' ಸಮ್ಮೇಳನ ಸಂದರ್ಭದಲ್ಲಿ ರಾಜ್ಯದ ದೇಗುಲಗಳ ಜೀರ್ಣೊದ್ದಾರಕ್ಕೆ ಸಹಕಾರ ನೀಡಿ ಎಂದು ಮಾಡಿಕೊಂಡ ಮನವಿ ಫಲನೀಡುತ್ತಿರುವುದನ್ನು ಸಚಿವರು ಬಹುವಾಗಿ ಮೆಚ್ಚಿಕೊಂಡರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications