ಡಿ. 17ರಿಂದ ರಾಷ್ಟ್ರೀಯ ವಿಕೋಪ ಕಾರ್ಯಾಗಾರ
ಬೆಂಗಳೂರು, ಡಿ. 16 : ಕರ್ನಾಟಕ ಸರ್ಕಾರ, ಹೋಮ್ ಗಾರ್ಡ್ಸ್ ಸಚಿವಾಲಯ, ನಾಗರಿಕ ರಕ್ಷಣಾ ಇಲಾಖೆ, ತುರ್ತು ಸೇವೆ ಮತ್ತು ಅಗ್ನಿಶಾಮಕ ಇಲಾಖೆ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಡಿ. 17 ಮತ್ತು 18 ರಂದು ನಗರದ ಸೆಂಟ್ರಲ್ ಕಾಲೇಜ್ ಜ್ಞಾನಜ್ಯೋತಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ಕುರಿತು ಎರಡು ದಿನಗಳ ರಾಷ್ಟ್ರೀಯಮಟ್ಟದ ಕಾರ್ಯಾಗಾರ ನಡೆಯಲಿದೆ.
ಡಿ. 17 ರಂದು ಬೆಳಗ್ಗೆ ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ತುರ್ತು ಸೇವೆ ಹಾಗೂ ಅಗ್ನಿಶಾಮಕ ದಳದ ಮುಖ್ಯಸ್ಥ ಯು. ನಿಸಾರ್ ಅಹ್ಮದ್ ಅಧ್ಯಕ್ಷತೆ ವಹಿಸುವರು. ನಾಗಾಲ್ಯಾಂಡ್ ಮಾಜಿ ರಾಜ್ಯಪಾಲ ಶ್ಯಾಮಲಾ ದತ್ತ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಹೋಮ್ ಗಾರ್ಡ್ಸ್ ಡಿಜಿಪಿ ಜೀಜಾ ಹರಿಸಿಂಗ್ ಉಪನ್ಯಾಸ ನೀಡುವರು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್ ಶ್ರೀಕುಮಾರ್, ನಾಗರಿಕ ಸೇವೆಗಳ ಇಲಾಖೆ ಹಾಗೂ ರಾಷ್ಟ್ರೀಯ ಪ್ರಕೃತಿ ವಿಕೋಪದ ಮುಖ್ಯಸ್ಥ ಜಿ ಎಲ್ ಶರ್ಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮೊದಲ ಸೆಮಿನಾರ್ ನಲ್ಲಿ ರಾಷ್ಟ್ರೀಯ ಪ್ರಕೋಪಗಳನ್ನು ಎದುರಿಸುವ ಕುರಿತು ಉಪನ್ಯಾಸ ನಡೆಯಲಿದೆ.
ಡಿ. 18 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮಾನವ ನಿರ್ಮಿಸುವ ವಿಕೋಪಗಳ ಕುರಿತು ಉಪನ್ಯಾಸ ನಡೆಯಲಿದೆ. ಇಂತಹ ವಿಕೋಪಗಳಲ್ಲಿ ಸಾಮೂಹಿಕ ಗಾಯಾಳು ಮತ್ತು ವೈದ್ಯಕೀಯ ಸೇವೆ ಕುರಿತು ತಜ್ಞರು ಉಪನ್ಯಾಸ ನೀಡಲಿದ್ದಾರೆ. ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಮುಖ್ಯಸ್ಥ ಯು ನಿಸಾರ್ ಅಹ್ಮದ್ ಅಧ್ಯಕ್ಷತೆ ವಹಿಸುವರು. ಹೋಮ್ ಗಾರ್ಡ್ಸ್ ಮುಖ್ಯಸ್ಥೆ ಜೀಜಾ ಹರಿಸಿಂಗ್ ಉಪನ್ಯಾಸ ನೀಡುವರು. ಗೃಹ ಸಚಿವ ಡಾ ವಿ ಎಸ್ ಆಚಾರ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಎಂ ಮದನ್ ಗೋಪಾಲ್, ನಾರಾಯಣ ಹೃದಯಾಲಯಯ ಮುಖ್ಯಸ್ಥ ದೇವಿ ಶೆಟ್ಟಿ, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ ಸಿ ಎನ್ ಮಂಜುನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications